ಮಾಲಿಂಗ ವಿರುದ್ಧ ತನಿಖೆ ಸಾಧ್ಯತೆ
ಕೊಲಂಬೊ: ಮಾಧ್ಯಮಗಳೊಂದಿಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾ ವೇಗದ ಬೌಲರ್ ಲಸಿತ್ ಮಾಲಿಂಗ ತನಿಖೆಯನ್ನು ಎದುರಿಸುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಆಟಗಾರರು ಮತ್ತು ಕ್ರಿಕೆಟ್ ಮಂಡಳಿ ನಡುವೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯೆ ಕೇಳಲು, ಮಾಧ್ಯಮದವರು ಮಾಲಿಂಗ ಅವರನ್ನು ಸಂಪರ್ಕಿಸಿದಾಗ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿಯ ಹೊರಗೆ ಮಾಧ್ಯಮಗಳೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ನಡೆದಿದೆ ಎನ್ನಲಾಗಿದೆ.
ಲಸಿತ್ ಮಾಲಿಂಗ ಮಾಧ್ಯಮದೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುತ್ತಿರುವ ತುಣುಕೊಂದನ್ನು ಸ್ಥಳೀಯ ಸುದ್ದಿವಾಹಿನಿಯೊಂದರಲ್ಲಿ ಬಿತ್ತರಿಸಲಾಗಿದೆ. ಹೀಗಾಗಿ ಲಸಿತ್ ಮಾಲಿಂಗ ಅನುಚಿತ ವರ್ತನೆಯ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ತನಿಖಾ ವರದಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯನಿರ್ವಾಹಕ ಸಮಿತಿಗೆ ಕಳುಹಿಸಲಾಗುವುದು ಎಂದು ಲಂಕಾ ಕ್ರಿಕೆಟ್ ತಿಳಿಸಿದೆ.