ಸರ್ದಾರ್, ರೀತುಗೆ ಎಎಚ್‌ಎಫ್ ಪ್ರಶಸ್ತಿ
ನವದೆಹಲಿ: ಭಾರತ ರಾಷ್ಟ್ರೀಯ ಹಾಕಿ ತಂಡದ ನಾಯಕರಾದ ಸರ್ದಾರ್ ಸಿಂಗ್ (ಪುರುಷರ) ಮತ್ತು ರೀತು ರಾಣಿ (ವನಿತೆಯರ) ಏಷ್ಯನ್ ಹಾಕಿ ಫೆಡರೇಷನ್ (ಎಎಚ್‌ಎಫ್) ವರ್ಷದಆಟಗಾರ ಮತ್ತು ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ಶನಿವಾರ ಕೌಲಾಲಂಪುರದಲ್ಲಿ ನಡೆದ ತನ್ನ ಮಧ್ಯಂತರ ಮಹಾಸಭೆಯಲ್ಲಿ ಸರ್ದಾರ್ ಮತ್ತು ರೀತು ಅವರಿಗೆ ಎಎಚ್‌ಎಫ್ ಈ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಬರುವ ವಾರ ನಡೆಯಲಿರುವ ವಿಶೇಷ ಕಾರ್ಯಕ್ರಮವೊಂದರಲ್ಲಿ ಸರ್ದಾರ್ ರೀತು ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು. ಈ ಗೌರವಕ್ಕೆ ಕಾರಣರಾದ ಇಬ್ಬರಿಗೂ ರಾಷ್ಟ್ರೀಯ ಹಾಕಿ ಫೆಡರೇಷನ್ ತಲಾ ರು 1 ಲಕ್ಷ ಹಣವನ್ನು ಬಹುಮಾನವಾಗಿ ನೀಡಲಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ.
'ಏಷ್ಯನ್ ಹಾಕಿ ಪ್ರತಿಷ್ಠಿತ ಪ್ರಶಸ್ತಿಗಳಿಗೆ ನಮ್ಮ ಇಬ್ಬರು ತಾರೆಗಳು ಆಯ್ಕೆಯಾಗಿದ್ದಾರೆ. ಇದೊಂದು ಗೌರವದ ವಿಷಯ. ಭವಿಷ್ಯದಲ್ಲಿ ಭಾರತದ ಇನ್ನೂ ಹೆಚ್ಚಿನ ಹಾಕಿ ಆಟಗಾರರು ಇಂತಹ ಪ್ರಶಸ್ತಿಗಳನ್ನು ಗೆಲ್ಲುತ್ತಾರೆ ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ' ಎಂದು ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ಹೇಳಿದ್ದಾರೆ.