ಇಂದಿನಿಂದ ಏಷ್ಯನ್ ಸೈಕ್ಲಿಂಗ್
29 ದೇಶಗಳ 800ಕ್ಕೂ ಹೆಚ್ಚು ಕ್ರೀಡಾಳುಗಳು ಭಾಗಿ; ಭಾರತದಿಂದ 50 ಸ್ಪರ್ಧಾಳು
ನವದೆಹಲಿ: 33ನೇ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಪಂದ್ಯಾವಳಿ ಗುರುವಾರದಿಂದ ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಒಟ್ಟಾರೆ 29 ದೇಶಗಳಿಂದ 800ಕ್ಕೂ ಹೆಚ್ಚು ಕ್ರೀಡಾಳುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು, ಇವರಲ್ಲಿ 50ಕ್ಕೂ ಹೆಚ್ಚು ಭಾರತೀಯ ಕ್ರೀಡಾಳುಗಳಿದ್ದಾರೆ. 33ನೇ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಜೊತೆಗೆ, 20ನೇ ಜೂನಿಯರ್ ಚಾಂಪಿಯನ್‌ಷಿಪ್ ಸಹ ನಡೆಯುತ್ತಿದ್ದು, ಮಾರ್ಚ್ 17ರವರೆಗೆ ಎರಡು ಸ್ಥಳಗಳಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ಪಂದ್ಯಾವಳಿಗಳ ಟ್ರಾಕ್ ಸ್ಪರ್ಧೆಗಳು ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದ್ದು, ರೋಡ್ ರೇಸ್ ವಿಭಾಗದ ಸ್ಪರ್ಧೆಗಳು ಇಲ್ಲಿನ ಬುದ್ಧ್ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆಯಲಿವೆ. ಫಾರ್ಮುಲಾ ಒನ್ ಕಾರ್ ರೇಸ್‌ಗಾಗಿ ನಿರ್ಮಾಣಗೊಂಡಿರುವ ಬುದ್ಧ್ ಸರ್ಕ್ಯೂಟ್ ಇದೇ ಪ್ರಥಮ ಬಾರಿಗೆ ಸೈಕಲ್ ರೇಸ್‌ಗಾಗಿ ಸಜ್ಜಾಗಿದೆ.
2005ರಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್ ಅನ್ನು ಆಯೋಜಿಸಿತ್ತು. ಆಗ, ಭಾರತದ ಮಹಿಳಾ ಸೈಕ್ಲಿಸ್ಟ್‌ಗಳ ತಂಡ ಬೆಳ್ಳಿ ಪದಕವನ್ನು ಗೆದ್ದಿತ್ತು. ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಸಿಕ್ಕ ಮೊಟ್ಟ ಮೊದಲ ಪದಕ ಅದು. ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಪದಕ ಭಾರತಕ್ಕೆ ಲಭ್ಯವಾಗಿಲ್ಲ. ಇದೀಗ, ಭಾರತದಲ್ಲೇ ಈಗ ಮತ್ತೆ ಪಂದ್ಯಾವಳಿ ನಡೆಯುತ್ತಿರುವುದರಿಂದ, ಈ ಬಾರಿ ಪದಕ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ.
ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿದ್ದ ಚಂದ್ರಶೇಖರ್ ರಾಜೇಶ್, ಅಮರ್ಜೀತ್ ಸಿಂಗ್, ಅಮೃತ್ ಸಿಂಗ್ ಹಾಗೂ ಬಿಕ್ರಮ್ ಸಿಂಗ್ ಅವರುಳ್ಳ ಭಾರತೀಯ ಪುರುಷರ ಸೈಕ್ಲಿಸ್ಟ್‌ಗಳ ತಂಡ, ಈ ಬಾರಿ ಪದಕ ಗೆಲ್ಲುವ ಫೇವರಿಟ್ ತಂಡವಾಗಿದೆ.
ಸೈಕ್ಲಿಂಗ್‌ನಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಈ ನಾಲ್ವರೂ ಸೈಕ್ಲಿಸ್ಟ್‌ಗಳೂ ಉತ್ಸಾಹ ಹಾಗೂ ಪರಿಶ್ರಮದಿಂದ ಈ ಬಾರಿ, ತವರಿನ ಪ್ರೇಕ್ಷಕರ ಮುಂದೆ ಮತ್ತಷ್ಟು ಸಾಧನೆ ಮಾಡುವ ಉತ್ಸಾಹದಲ್ಲಿದ್ದಾರೆ.
ರಾಜೇಶ್‌ಗೆ ಮರುಹುಟ್ಟು: 2012ರಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಿದ್ದ ರಾಜೇಶ್ ಈಗ ಸಂಪೂರ ಚೇತರಿಸಿಕೊಂಡಿದ್ದಾರೆ. ಆದರೂ, ಅವರೂ ಈ ಬಾರಿ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. 10 ದಿನಗಳ ಕಾಲ ಕೋಮಾದಲ್ಲಿದ್ದ ರಾಜೇಶ್, ನಂತರ ಗುಣಮುಖರಾಗಿ ಸೈಕ್ಲಿಂಗ್‌ನಿಂದ ದೂರವೇ ಉಳಿದಿದ್ದರು. ಆದರೆ, ಅವರ ತಂದೆ, ರಾಹುಲ್ ಅವರಲ್ಲಿ ಸ್ಫೂರ್ತಿ ತುಂಬಿ ಅವರನ್ನು ಮತ್ತೆ ಸೈಕ್ಲಿಂಗ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವಂತೆ ಮಾಡಿದ್ದಾರೆ. ಹಾಗಾಗಿ, ಈ ಬಾರಿ ರಾಜೇಶ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ಸೈಕ್ಲಿಂಗ್ ಅಭಿಮಾನಿಗಳಲ್ಲೂ ಕುತೂಹಲ ಹುಟ್ಟಿಸಿದೆ.
ಮಹಿತಾ ಮೇಲೆ ಭರವಸೆ: ಇನ್ನು, ಪಂದ್ಯಾವಳಿಯ ಭಾಗವಹಿಸುತ್ತಿರುವ ಮಹಿಳಾ ಸೈಕ್ಲಿಸ್ಟ್‌ಗಳಲ್ಲಿ ಮಹಿತಾ ಮೋಹನ್ ಅವರು ಪ್ರಮುಖರು. ನ್ಯಾಷನಲ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಸಾಧನೆ ಹೊಂದಿರುವ ಅವರು, ಈ ಬಾರಿ ಉತ್ತಮ ಪ್ರದರ್ಶನ ನೀಡಬಹುದೆಂಬ ನಿರೀಕ್ಷೆಯಿದೆ. ಅವರನ್ನು ಬಿಟ್ಟರೆ, 19ರ ಪ್ರಾಯದ ದೇವೋರಾಹ್ ಅವರು ಮಹಿಳೆಯರ ವಿಭಾಗದಲ್ಲಿ ಮತ್ತೊಬ್ಬ ಪ್ರಮುಖ ಕ್ರೀಡಾಳು. ಭಾರತೀಯ ಸೈಕ್ಲಿಂಗ್ ಫೆಡರೇಷನ್, 'ದ ವಂಡರ್ ಗರ್ಲ್' ಎಂದು ಬಣಿಸಲ್ಪಟ್ಟಿರುವ ದೋವೋರಾಹ್, ಈ ಹಿಂದೆ ಸುನಾಮಿಯ ಅಪಾಯದಿಂದ ಬದುಕುಳಿದವರು.
ಕಳೆದ ವರ್ಷ ನಡೆದಿದ್ದ ಜೂನಿಯರ್ ವಿಭಾಗದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ದೋವೋರಾಹ್ ಅವರು, ಕಳೆದ ವರ್ಷವೇ ನಡೆದಿದ್ದ ಸೀನಿಯರ್ ವಿಭಾಗದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಲ್ಲದೇ, ಇದೇ ವರ್ಷ ಜನವರಿಯಲ್ಲಿ, ಅಮೃತಸರದಲ್ಲಿ ನಡೆದಿದ್ದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ದೋವೋರಾಹ್ ಗೆದ್ದಿದ್ದರು.
ಪಂದ್ಯಾವಳಿಯ ಕೇಂದ್ರ ಬಿಂದು: ಇಡೀ ಪಂದ್ಯಾವಳಿಯಲ್ಲಿ ಎಲ್ಲರ ಕೇಂದ್ರಬಿಂದುವಾಗಿರುವುದು ಮಲೇಷ್ಯಾದ ಅಜಿಜುಲ್‌ಹನ್ಸಿ ಅವಾಂಗ್. 2010ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವಾಂಗ್ ಅವರ ಮೇಲೆ ಎಲ್ಲರ ನಿರೀಕ್ಷೆ ತುಸು ಹೆಚ್ಚಾಗಿಯೇ ಇದೆ.
ಘಟಾನುಘಟಿಗಳು: ಅವಾಂಗ್ ಅವರನ್ನು ಹೊರತುಪಡಿಸಿದರೆ, ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದ ಶುವಾಂಗ್ ಚೀನಾದ ಗವೋ ಶುವಾಂಗ್, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಚೀನಾದವರೇ ಆದ ವಾಂಗ್ ಸ್ಝೀ ಲೀ ಅವರು ಈ ಬಾರಿಯ ಪಂದ್ಯಾವಳಿಯ ಇತರ ಪ್ರಮುಖ ಕ್ರೀಡಾಳುಗಳು.
ಪಂದ್ಯಾವಳಿಗೆ ಕಳೆ ತಂಡ ಇರಾನ್ ಸೈಕ್ಲಿಸ್ಟ್
ವೀಸಾ ಸಮಸ್ಯೆಯಿಂದಾಗಿ ಈ ಬಾರಿಯ ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದ್ದ ಇರಾನ್ ಸೈಕ್ಲಿಂಗ್ ತಂಡ, ಬುಧವಾರ ಭಾರತಕ್ಕೆ ಆಗಮಿಸಿತು. ವೀಸಾ ಸಮಸ್ಯೆ ನಿವಾರಣೆಯಾದ ಹಿನ್ನೆಲೆಯಲ್ಲಿ ಇರಾನ್ ತಂಡ, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. ಏಳು ಬಲಿಷ್ಠ ಆಟಗಾರರನ್ನೊಳಗೊಂಡ ಇರಾನ್ ತಂಡ ಆಗಮಿಸಿರುವುದು ಸೈಕ್ಲಿಂಗ್ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.