ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಂಗೆಟ್ಟ ಕಾಂಗರೂಗಳ ಕಠಿಣ ಅಭ್ಯಾಸ

ಭಾರತದ ವಿರುದ್ಧ ಸೋತ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಸಮಸ್ಯೆಯನ್ನು ಎದುರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು...

Mainashree
Updated On : 7 Mar 2013, 12:09 pm

ಆಸ್ಟ್ರೇಲಿಯಾ ಆಟಗಾರರಿಗೆ ಕಠಿಣ ಸವಾಲಾಗಿರುವ ಭಾರತೀಯ ಪಿಚ್‌ಗಳು

ಹೈದರಾಬಾದ್: ಭಾರತದ ವಿರುದ್ಧ ಸೋತ ಎರಡೂ ಟೆಸ್ಟ್ ಪಂದ್ಯಗಳಲ್ಲಿ  ಪಿಚ್ ಸಮಸ್ಯೆಯನ್ನು ಎದುರಿಸಿದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಬುಧವಾರ ಕಠಿಣ ಅಭ್ಯಾಸ ನಡೆಸಿದರು. ಹೈದರಾಬಾದ್‌ನಲ್ಲಿ 2ನೇ ಟೆಸ್ಟ್ ಪಂದ್ಯ 4ನೇ ದಿನಕ್ಕೆ ಮುಕ್ತಾಯವಾದ ಹಿನ್ನೆಲೆಯಲ್ಲಿ 5ನೇ ದಿನ ಆಸೀಸ್ ಆಟಗಾರರು ಅಭ್ಯಾಸ ನಡೆಸಿದರು.
ಮೊದಲ ಟೆಸ್ಟ್ ಪಂದ್ಯದ 5ನೇ ದಿನ ಕೇವಲ 9 ಓವರ್ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ, 2ನೇ ಟೆಸ್ಟ್ ಪಂದ್ಯದಲ್ಲಿ ಮೂರೂವರೆ ದಿನಕ್ಕೆ ತಮ್ಮ ಆಟ ಮುಕ್ತಾಯಗೊಳಿಸಿದ್ದರು. ಹೀಗಾಗಿ ಬಾಕಿ ಉಳಿದಿದ್ದ 5ನೇ ದಿನ ಭಾರತೀಯ ಪಿಚ್‌ಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಅಭ್ಯಾಸ ನಡೆಸಿದರು.
ಅಭ್ಯಾಸದಲ್ಲಿ ಆಸ್ಟ್ರೇಲಿಯಾ ಆಟಗಾರರು ಹೆಚ್ಚಾಗಿ ಸ್ಪಿನ್ ಬೌಲರ್‌ಗಳನ್ನು ಎದುರಿಸುವ ಬಗ್ಗೆ ಗಮನಹರಿಸಿದರು. ಆದರೆ, ಟೆಸ್ಟ್ ಪಂದ್ಯ ನಡೆದ ಪಿಚ್‌ನಲ್ಲೇ ಆಸ್ಟ್ರೇಲಿಯಾ ಅಗ್ರ ಬ್ಯಾಟ್ಸ್‌ಮನ್‌ಗಳು ಅಭ್ಯಾಸ ನಡೆಸಿದ್ದು, ಗಮನ ಸೆಳೆಯಿತು.
ಪಿಚ್‌ನ ಎರಡೂ ಬದಿ ಹಾಳಾಗಿದ್ದರೂ, ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ಅವರು ನಥಾನ್ ಲೇಯಾನ್, ಕ್ಷೇವಿಯರ್ ಡೊಹಾರ್ಟಿ ಹಾಗೂ ಸ್ಟೀವ್ ಸ್ಮಿತ್ ಬೌಲಿಂಗ್‌ಗೆ ದೀರ್ಘಕಾಲದವರೆಗೆ ಅಭ್ಯಾಸ ನಡೆಸಿದರು.
ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್ ಸಹ ಸ್ಪಿನ್ ಬೌಲರ್‌ಗಳ ವಿರುದ್ಧ ಕಠಿಣ ಅಭ್ಯಾಸ ನಡೆಸಿದರು. ಆಸೀಸ್ ತಂಡದಲ್ಲಿರುವ ವ್ಯಾಟ್ಸನ್ ಮತ್ತು ವಾರ್ನರ್ ಭಾರತದ ಸ್ಪಿನ್ ತ್ರಿಮೂರ್ತಿಗಳ ವಿರುದ್ಧ ಹೋರಾಟ ನಡೆಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪಂದ್ಯದ ನಂತರ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಅಭ್ಯಾಸದತ್ತ ಗಮನ ಹರಿಸಿದ್ದು, ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಅವರು ವೈಫಲ್ಯ ಕಂಡಿದ್ದಕ್ಕೆ ಸಾಕ್ಷಿಯಾಗಿತ್ತು.
'ಯಾವುದೇ ಪಂದ್ಯದ 5ನೇ ದಿನದ ಪಿಚ್‌ನಲ್ಲಿ ಅಭ್ಯಾಸ ಮಾಡಲು ನಾವು ಬಯಸುತ್ತೇವೆ. ಈ ಪಿಚ್‌ನಲ್ಲಿ ಅಭ್ಯಾಸ ನಡೆಸುವುದು ನಮಗೆ ಹೆಚ್ಚಿನ ಲಾಭವನ್ನು ಒದಗಿಸಿಕೊಡುತ್ತದೆ. ನಾನು ಮೊದಲೇ ಹೇಳಿದಂತೆ, ಅಗ್ರ 8 ಬ್ಯಾಟ್ಸ್‌ಮನ್‌ಗಳಲ್ಲಿ ವ್ಯಾಟ್ಸನ್ ಮತ್ತು ಕ್ಲಾರ್ಕ್ ಪ್ರಮುಖರು. ಇಬ್ಬರಿಗೂ ಭಾರತದ ಪಿಚ್‌ಗಳಲ್ಲಿ ಆಡಿದ ಅನುಭವ ಇದೆ. ಅಲ್ಲದೆ 5ನೇ ದಿನದ ಪಿಚ್‌ನಲ್ಲಿ ಅಭ್ಯಾಸ ನಡೆಸುವುದು ಇತರ ಬ್ಯಾಟ್ಸ್‌ಮನ್‌ಗಳ ವೃತ್ತಿ ಜೀವನಕ್ಕೆ ಅನುಕೂಲವಾಗಲಿದೆ' ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ತರಬೇತುದಾರ ಮಿಕಿ ಅರ್ಥರ್ ಹೇಳಿದರು. 5ನೇ ದಿನದ ಪಿಚ್‌ನಲ್ಲಿ ಅಭ್ಯಾಸ ನಡೆಸಿದ್ದಕ್ಕೆ ಕಾರಣ ಕೇಳಿದ್ದಕ್ಕೆ ಅವರು ಈ ಉತ್ತರ ನೀಡಿದರು.
'ಸ್ಪಿನ್ ಬೌಲಿಂಗ್ ವಿರುದ್ಧ ನಮ್ಮ ಬ್ಯಾಟ್ಸ್‌ಮನ್‌ಗಳು ಚೇತರಿಸಿಕೊಳ್ಳಬೇಕು. ಭಾರತ ತಂಡ, ಆಸ್ಟ್ರೇಲಿಯಾಕ್ಕೆ ಆಗಮಿಸಿದಾಗಲೂ ಇದೇ ರೀತಿ ಆಗುತ್ತದೆ. ನಮ್ಮ ಬ್ಯಾಟ್ಸ್‌ಮನ್‌ಗಳು ಇನ್ನೂ ಯುವಕರಾಗಿದ್ದಾರೆ, 5ನೇ ದಿನದ ಪಿಚ್‌ನಲ್ಲಿ ಅವರು ಕಲಿಕೆಗಾಗಿ ಅಭ್ಯಾಸ ನಡೆಸುತ್ತಾರೆ' ಎಂದರು.
ಅಭ್ಯಾಸದ ಸಮಯದಲ್ಲಿ ಆಸೀಸ್ ನಾಯಕ ಕ್ಲಾರ್ಕ್ ಇತರ ಆಟಗಾರರೊಂದಿಗೆ ಮಾತುಕತೆ ನಡೆಸಿದ್ದು ಕಂಡುಬಂದಿತು. ಮಿಚೆಲ್ ಜಾನ್ಸನ್ ಎಸೆತದಲ್ಲಿ ಕ್ಲಾರ್ಕ್‌ಗೆ ತರಚು ಗಾಯವಾಯಿತು. ಆದರೆ, ಅದನ್ನು ನಿರ್ಲಕ್ಷಿಸಿದ ಅವರು ಅಭ್ಯಾಸದಲ್ಲಿ ಮಗ್ನರಾಗಿದ್ದರು.
ಅಂಪೈರ್ ಸ್ಥಾನದಲ್ಲಿ ನಿಂತಿದ್ದ ಕ್ಲಾರ್ಕ್, ವ್ಯಾಟ್ಸನ್ ಮತ್ತು ವಾರ್ನರ್ ಬ್ಯಾಟಿಂಗ್ ಅಭ್ಯಾಸವನ್ನು ವೀಕ್ಷಿಸಿದರು. ಅಲ್ಲದೆ ಇತರ ಆಟಗಾರರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದು ಕಂಡುಬಂದಿತು.
'ತಂಡದ ಆಟಗಾರರೊಂದಿಗೆ ನಾಯಕ ಕ್ಲಾರ್ಕ್ ಮಾತನಾಡಿದರು. ಅಲ್ಲದೆ ಜತೆಯಾಟದ ಬಗ್ಗೆಯೂ ಆಟಗಾರರ ಅಭಿಪ್ರಾಯ ಕೇಳಿದರು. ಜಯ ಸಾಧಿಸುವುದೊಂದೇ ನಮ್ಮ ಗುರಿ ಎಂದು ತಂಡದ ಇತರ ಆಟಗಾರರು ಕ್ಲಾರ್ಕ್‌ಗೆ ಹೇಳಿದ್ದಾಗಿ' ಅರ್ಥರ್ ತಿಳಿಸಿದರು.
'ಭಾರತದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದಕ್ಕೂ ಆಸ್ಟ್ರೇಲಿಯಾದಲ್ಲಿ ಎದುರಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಆಸ್ಟ್ರೇಲಿಯಾದಲ್ಲಿ ರನ್ ಗಳಿಕೆ ವೇಗವಾಗಿ ಸಾಗುತ್ತದೆ. ಆದರೆ, ಭಾರತದಲ್ಲಿ ಪಂದ್ಯ ಆರಂಭದಲ್ಲಿ ರನ್ ಗಳಿಕೆ ನಿಧಾನಗತಿಯಲ್ಲಿರುತ್ತದೆ. ಆದರೆ, ಪಂದ್ಯದ 4ನೇ ಮತ್ತು 5ನೇ ದಿನ ಹೆಚ್ಚು ವೇಗ ಪಡೆದುಕೊಳ್ಳುತ್ತದೆ. ಹೀಗಾಗಿ ಉಭಯ ರಾಷ್ಟ್ರಗಳಲ್ಲಿನ ಸ್ಥಿತಿಗತಿಯ ಬಗ್ಗೆ ಆಟಗಾರರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಅರ್ಥರ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement