ಬೆಳೆಯುವ ಪ್ರತಿಭೆಗೆ ಆರ್ಥಿಕ ಅಡಚಣೆ
ಸೇಲಂ: ಹಣಕಾಸಿನ ಮುಗ್ಗಟ್ಟಿನಿಂದಾಗಿ, ಅಂಡರ್ 17 ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿರುವ ಬಾಲಕಿಯೊಬ್ಬಳಿಗೆ ಈ ಅವಕಾಶವು ಕೈತಪ್ಪುವ ಸಂಕಷ್ಟ ಎದುರಾಗಿದೆ. 15ರ ಪ್ರಾಯದ ಲಾವಣ್ಯ ಎಂಬ ಬಾಲಕಿ, ಇಲ್ಲಿನ ಶ್ರೀ ರಾಮಕೃಷ ಶಾರದಾ ಶಾಲೆಯಲ್ಲಿ ಓದುತ್ತಿದ್ದಾಳೆ. ಫುಟ್ಬಾಲ್‌ನಲ್ಲಿ ಪ್ರತಿಭೆ ಹೊಂದಿರುವ ಈಕೆ, ಇದೀಗ ಅಂಡರ್ 17 ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇಡೀ ತಮಿಳುನಾಡಿನಿಂದ ಅಂಡರ್ 17 ತಂಡಕ್ಕೆ ಆಯ್ಕೆಯಾಗಿರುವುದು ಲಾವಣ್ಯ ಒಬ್ಬರೇ.
ಮುಂದಿನ ವಾರದಿಂದ, ಪುಣೆಯಲ್ಲಿ ತಂಡದ ತರಬೇತಿ ಶಿಬಿರ ಆರಂಭವಾಗಲಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಸ್ಥಿತಿಯಲ್ಲಿ ಆಕೆ ಇಲ್ಲ. ತರಬೇತಿಗಾಗಿ ಆಕೆ ರು. 2 ಲಕ್ಷ ಶುಲ್ಕವನ್ನು ಪಾವತಿಸಬೇಕಿರುವುದರಿಂದ ಆಕೆ, ಈ ಅವಕಾಶದಿಂದ ಹಿಂದೆ ಸರಿಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಲಾವಣ್ಯ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆಕೆಯ ತಂದೆ, ತೆಂಗಿನ ನಾರು ತೆಗೆಯುವ ಘಟಕವೊಂದರಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬಕ್ಕೆ ರು. 2 ಲಕ್ಷ ಶುಲ್ಕ ಭರಿಸುವ ಶಕ್ತಿಯಿಲ್ಲ. ಹಾಗಾಗಿ, ಈಗ ಲಾವಣ್ಯ, ತಮಿಳುನಾಡು ಕ್ರೀಡಾ ಇಲಾಖೆಯ ಹಾಗೂ ದಾನಿಗಳ ನೆರವನ್ನು ಎದುರು ನೋಡುತ್ತಿದ್ದಾರೆ.