ಶೂಟಿಂಗ್ ರ್ಯಾಂಕಿಂಗ್: ವಿಜಯ್‌ಗೆ 2ನೇ ಸ್ಥಾನ
ನವದೆಹಲಿ: ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ವಿಶ್ವ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ ಹಾಗೂ ಏಷ್ಯಾದ 25 ಮೀ. ರ್ಯಾಪಿಡ್‌ಫೈರ್ ಪಿಸ್ತೂಲ್ ವಿಭಾಗದ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಫೆಡರೇಷನ್ (ಐಎಸ್‌ಎಸ್‌ಎಫ್) ಹೊಸ ರ್ಯಾಂಕಿಂಗ್ ಪಟ್ಟಿಗಳನ್ನು ಬುಧವಾರ ಬಿಡುಗಡೆಗೊಳಿಸಿದೆ.
ಏಷ್ಯನ್ ವಿಭಾಗದಲ್ಲಿ, ತಮ್ಮ ಪ್ರತಿಸ್ಪರ್ಧಿಯಾಗಿದ್ದ ಚೀನಾದ ಫೆಂಗ್ ಡಿಂಗ್‌ಗಿಂತ ಮೂನ್ನಡೆ ಸಾಧಿಸಿದ ವಿಜಯ್ ಕುಮಾರ್, ಒಟ್ಟು 2321 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಗಳಿಸಿದ್ದಾರೆ. ಅತ್ತ, ಡಿಂಗ್ ಅವರು 2015 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.
ಹಿಮಾಚಲ ಪ್ರದೇಶದ ಹಮೀರ್‌ಪುರದ ಪ್ರತಿಭೆಯಾಗಿರುವ ವಿಜಯ್ ಕುಮಾರ್, ವಿಶ್ವ ರ್ಯಾಂಕಿಂಗ್ ವಿಭಾಗದಲ್ಲಿ ಒಟ್ಟು 2197 ಅಂಕ ಗಳಿಸಿದ್ದಾರೆ. ಈ ವಿಭಾಗದಲ್ಲಿ, 2806 ಅಂಕ ಗಳಿಸಿರುವ ಕ್ಯೂಬಾದ ಪ್ಯುಪೋ ಲ್ಯೂರಿಸ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಪ್ಯುಪೋ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಗಗನ್ ನಾರಂಗ್ ಅವರು, ವಿಶ್ವ ರ್ಯಾಂಕಿಂಗ್ ವಿಭಾಗದಲ್ಲಿ, ನಾಲ್ಕನೇ ಸ್ಥಾನಕ್ಕೇರಿದ್ದಾರೆ. 10 ಮೀ. ಏರ್ ರೈಫಲ್ ವಿಭಾಗದಲ್ಲಿ ಒಟ್ಟು 1407 ರೇಟಿಂಗ್ ಅಂಕಗಳನ್ನು ಗಳಿಸಿರುವ ಅವರು, ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ವಿಜೇತ ಅಭಿನವ್ ಬಿಂದ್ರಾ (17ನೇ ಸ್ಥಾನ) ಅವರನ್ನು ಹಿಂದಿಕ್ಕಿದ್ದಾರೆ.
ಇನ್ನು, ಡಬಲ್ ಟ್ರಾಪ್ ಶೂಟರ್ ರಂಜನ್ ಸಿಂಗ್ ಸೋಧಿ ಅವರು ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 904 ಅಂಕಗಳೊಂದಿಗೆ, 7ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.
ಇನ್ನು, ಭಾರತದ ಮತ್ತೊಬ್ಬ ಶೂಟರ್‌ಗಳಾದ ಗುರ್‌ಪ್ರೀತ್ ಸಿಂಗ್ ಅವರು ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 11ನೇ ಸ್ಥಾನ (101 ಅಂಕ) ಪಡೆದರೆ, ಪೆಂಬಾ ತಮಂಗ್ 23ನೇ ಸ್ಥಾನ (47 ಅಂಕ) ಪಡೆದಿದ್ದಾರೆ.
ಈ ವರ್ಷ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ವಿಜಯ್ ಕುಮಾರ್ ಅವರು ಉತ್ತಮ ಪ್ರದರ್ಶನ ತೋರಿದರೆ, ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರುವ ಸಾಧ್ಯತೆಗಳಿವೆ.