ಆಂಗ್ಲರಿಗೆ ಆಘಾತ ನೀಡಿದ ಕಿವೀಸ್
ಡುನೆದಿನ್: ನ್ಯೂಜಿಲೆಂಡ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದ ಹುಮ್ಮಸ್ಸಿನಲ್ಲಿ ಟೆಸ್ಟ್ ಸರಣಿಗೆ ಕಾಲಿಟ್ಟ ಇಂಗ್ಲೆಂಡ್ ತಂಡ, ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 167 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿದೆ.
ನ್ಯೂಜಿಲೆಂಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತಾದರೂ ಮಳೆಯ ಆರ್ಭಟಕ್ಕೆ ಪಂದ್ಯದ ಮೊದಲ ದಿನ ಬಲಿಯಾಯಿತು. ನಂತರ ಎರಡನೇ ದಿನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ ಕಾಡಿದ ನ್ಯೂಜಿಲೆಂಡ್ ವೇಗಿಗಳು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಕ್ರಿಸ್ನಲ್ಲಿ ನಿಲ್ಲಲು ಬಿಡಲಿಲ್ಲ.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕುಕ್ ಹಾಗೂ ಕಾಂಪ್ಟನ್ ಜೋಡಿ ತಂಡಕ್ಕೆ ನೀಡಿದ ಕಾಣಿಕೆ ಕೇವಲ 5 ರನ್. ಈ ವೇಳೆ ಖಾತೆ ತೆರೆಯದಿದ್ದ ಕಾಂಪ್ಟನ್ ಸೌಥೀ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ವಿಕೆಟ್ ಪತನಕ್ಕೆ ನಾಂದಿಯಾಡಿದರು. ನಂತರ ತಂಡದ ಮೊತ್ತ 18 ರನ್ಆಗಿದ್ದಾಗ ನಾಯಕ ಕುಕ್ ಹಾಗೂ ಕೆವಿನ್ ಪೀಟರ್ಸನ್ ವಾಂಗ್ನರ್ನ ಎರಡು ಎಸೆತದಲ್ಲಿ ಸತತವಾಗಿ ವಿಕೆಟ್ ಒಪ್ಪಿಸಿದರು. ನಂತರ ಟ್ರಾಟ್ 44 ಹಾಗೂ ಬೆಲ್ 24 ರನ್ಗಳಿಸಿದ್ದು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳಲ್ಲಿ ಗರಿಷ್ಠ ರನ್. ಉಳಿದಂತೆ ರೂಟ್ 4, ಪ್ರಯಾರ್ 23, ಬ್ರಾಡ್ 10, ಫಿನ್ 20, ಆ್ಯಂಡರ್ಸನ್ 23 ರನ್ಗಳಿಸಿ ಔಟಾದರು. ಅಂತಿಮವಾಗಿ ಇಂಗ್ಲೆಂಡ್ ತಂಡ 55 ಓವರ್ಗಳಲ್ಲಿ 167 ರನ್ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ತಂಡದ ಪರ ವಾಂಗ್ನರ್ ಹಾಗೂ ಮಾರ್ಟೀನ್ ತಲಾ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡ ಭರ್ಜರಿ ಆರಂಭವನ್ನೇ ಪಡೆದಿದೆ. ಆರಂಭಿಕರಾಗಿ ಕಣಕ್ಕಿಳಿದಿರುವ ಫುಲ್ಟಾನ್ ಹಾಗೂ ರೂಥರ್ಫೋರ್ಡ್ ಎರಡನೇ ದಿನಾಂತ್ಯಕ್ಕೆ ಮುರಿಯದ 131 ರನ್ಗಳ ಜತೆಯಾಟ ನೀಡಿದ್ದಾರೆ. ಫುಲ್ಟಾನ್ 46 ಹಾಗೂ ರೂಥರ್ಫೋರ್ಡ್ 77 ರನ್ಗಳಿಸಿ ಮೂರನೇ ದಿನಕ್ಕೆ ತಮ್ಮ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 167/10
ಟ್ರಾಟ್ 45, ಬೆಲ್ 24
ಬೌಲಿಂಗ್: ವಾಂಗ್ನರ್ 42/4, ಮಾರ್ಟೀನ್ 43/4
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್ 131/0 (2ನೇ ದಿನಾಂತ್ಯಕ್ಕೆ)
ಫುಲ್ಟಾನ್ ಅಜೇಯ 46
ರೂಥರ್ಫೋರ್ಡ್ ಅಜೇಯ 77
ಬೌಲಿಂಗ್: ಪನೇಸರ್ 26/0, ಬ್ರಾಡ್ 30/0