ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವೀರೇಂದ್ರ ಸೆಹ್ವಾಗ್ ಗೆ ಕೊಕ್

ಬ್ಯಾಟಿಂಗ್ ನಲ್ಲಿ ಲಯ ಕಳೆದುಕೊಂಡಿರುವ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು...

Rashmi Kasaragodu
Updated On : 8 Mar 2013, 4:33 am

ನವದೆಹಲಿ: ಬ್ಯಾಟಿಂಗ್ ನಲ್ಲಿ ಲಯ ಕಳೆದುಕೊಂಡಿರುವ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3ನೇ ಮತ್ತು 4ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ಕೈಬಿಡಲಾಗಿದೆ. ಹಲವಾರು ದಿನಗಳಿಂದ ರನ್ಗಳಿಸುವಲ್ಲಿ ವೈಫಲ್ಯ ಕಾಣುತ್ತಿರುವ ಸೆಹ್ವಾಗ್ ಈಗ ಅದಕ್ಕೆ ಬೆಲೆ ತೆತ್ತಿದ್ದಾರೆ.
ಆಸೀಸ್ ವಿರುದ್ಧ ಮೂರು ಇನಿಂಗ್ಸ್ ಗಳಲ್ಲಿ ವೀರೇಂದ್ರ ಸೆಹ್ವಾಗ್ ಕೇವಲ 27 ರನ್ ಗಳಿಸಿದ್ದಾರೆ. ಸೆಹ್ವಾಗ್ ಸ್ಥಾನದಲ್ಲಿ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ. ಹೀಗಾಗಿ ಭಾರತ ತಂಡವನ್ನು ಈಗ 14 ಆಟಗಾರರಿಗೆ ಸೀಮಿತಗೊಳಿಸಲಾಗಿದೆ.
ಫಾರ್ಮ್ ಕಂಡುಕೊಳ್ಳಲು ಹೆಣಗುತ್ತಿರುವ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್, ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಪ್ರಕಟಿಸಿದ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.
ಸೆಹ್ವಾಗ್ ಕೈಬಿಟ್ಟಿರುವುದನ್ನು ಹೊರತುಪಡಿಸಿ, ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮೂರನೇ ಪಂದ್ಯ ಮಾರ್ಚ್ 14ರಿಂದ ಮೊಹಾಲಿಯಲ್ಲಿ ನಡೆಯಲಿದೆ. ಇನ್ನು ಅಂತಿಮ ಮತ್ತು 4ನೇ ಪಂದ್ಯ ಮಾರ್ಚ್ 22ರಿಂದ ದೆಹಲಿಯಲ್ಲಿ ನಡೆಯಲಿದೆ. 4 ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿದೆ.
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಇನ್ನೊಬ್ಬ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಅವರನ್ನು ಕೈಬಿಟ್ಟ ಕೆಲವೇ ದಿನಗಳಲ್ಲಿ ಸೆಹ್ವಾಗ್ಗೂ ಬಿಸಿ ಮುಟ್ಟಿಸಲಾಗಿದೆ.
2004ರಿಂದ ಆರಂಭಿಕ ಬ್ಯಾಟ್ಸ್ಮನ್ ಗಳ ಸ್ಥಾನ ಹೊಂದಿದ್ದ ಇಬ್ಬರು ಹಿರಿಯ ಬ್ಯಾಟ್ಸ್ಮನ್ಗಳು ಈಗ ಸ್ಥಾನ ತೆರವುಗೊಳಿಸಿದ್ದಾರೆ. ಹೀಗಾಗಿ ತಂಡದ ಆರಂಭಿಕ ಸ್ಥಾನಗಳನ್ನು ಈಗ ಹೊಸಬರೇ ನಿರ್ವಹಿಸಲಿದ್ದಾರೆ. ಸೆಹ್ವಾಗ್ ಮತ್ತು ಗಂಭೀರ್ ಒಟ್ಟು 87 ಇನಿಂಗ್ಸ್ ಆಡಿದ್ದು, 4412 ರನ್ಗಳನ್ನು ಕಲೆ ಹಾಕಿದ್ದಾರೆ. ಅಲ್ಲದೆ, ಸಾರ್ವಕಾಲಿಕ ಆರಂಭಿಕ ಜೋಡಿಗಳಲ್ಲಿ 52.52 ಸರಾಸರಿಯೊಂದಿಗೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ಈಗ ಸೆಹ್ವಾಗ್ ಸ್ಥಾನದಲ್ಲಿ ಮುರಳಿ ವಿಜಯ್ ಅವರೊಂದಿಗೆ ಶಿಖರ್ ಧವನ್ ಅವಕಾಶ ಗಿಟ್ಟಿಸುವ ಸಾಧ್ಯತೆಗಳಿವೆ. ಅಜಿಂಕ್ಯ ರಹಾನೆ ತಂಡದಲ್ಲಿ ಇನ್ನೊಬ್ಬ ಆರಂಭಿಕ ಆಟಗಾರನಾಗಿದ್ದಾರೆ. ಆದರೆ, ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್, ರಹಾನೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಂಬ ಸೂಚನೆಯನ್ನು ಈ ಮೊದಲೇ ನೀಡಿದ್ದಾರೆ.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ಭಾರಿ ಅಂತರದಿಂದ ಜಯ ಸಾಧಿಸಿದರೂ, ಸೆಹ್ವಾಗ್ ಮತ್ತು ವಿಜಯ್ ಜತೆಯಾಟದಲ್ಲಿ 11, 16, ಹಾಗೂ 17 ರನ್ಗಳನ್ನು ಮಾತ್ರ ಗಳಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಸತತವಾಗಿ ಐದು ಟೆಸ್ಟ್ ಪಂದ್ಯಗಳಲ್ಲಿ ಸೆಹ್ವಾಗ್ ವೈಫಲ್ಯ ಕಂಡಿದ್ದಾರೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅರ್ಧ ಶತಕ ಪೂರೈಸಲೂ ಸೆಹ್ವಾಗ್ ಅವರಿಂದ ಸಾಧ್ಯವಾಗಿರಲಿಲ್ಲ.
ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ರವಿಂದ್ರ ಜಡೇಜಾ, ಶಿಖರ್ ಧವನ್, ರವಿಂಚಂದ್ರನ್ ಅಶ್ವಿನ್, ಅಶೋಕ್ ದಿಂಡಾ, ಹರ್ಭಜನ್ ಸಿಂಗ್, ಭುವನೇಶ್ವರ ಕುಮಾರ್, ಪ್ರಗ್ಯಾನ್ ಓಜಾ ಹಾಗೂ ಇಶಾಂತ್ ಶರ್ಮಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement