ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೈನಾಗೆ ಹಿಂಬಡ್ತಿ, ಕಶ್ಯಪ್ಗೆ ಬಡ್ತಿ

Rashmi Kasaragodu
Updated On : 7 Mar 2013, 10:46 am

ನವದೆಹಲಿ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತದ ಸೈನಾ ನೆಹ್ವಾಲ್, ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ಗುರುವಾರ ಬಿಡುಗಡೆಗೊಳಿಸಿದ ರ್ಯಾಂಕಿಂಗ್ ಪಟ್ಟಿಯಲ್ಲಿ 1 ಸ್ಥಾನ ಹಿಂಬಡ್ತಿ ಪಡೆದು, 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಪುರುಷರ ವಿಭಾಗದಲ್ಲಿ ಪರುಪಲ್ಲಿ ಕಶ್ಯಪ್ ಎರಡು ಸ್ಥಾನ ಬಡ್ತಿ ಪಡೆದಿದ್ದು 9ನೇ ಸ್ಥಾನಕ್ಕೇರಿದ್ದಾರೆ. ಮಾರ್ಚ್ 17ಕ್ಕೆ 23ನೇ ವಸಂತಕ್ಕೆ ಕಾಲಿಡುತ್ತಿರುವ ಸೈನಾ ನೆಹ್ವಾಲ್, ಮಹಿಳೆಯರ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ ವಿಶ್ವ ಚಾಂಪಿಯನ್ ಯಿಹಾನ್ ವಾಂಗ್ ಅವರನ್ನು ಹಿಂದಿಕ್ಕಿದ್ದರು. ಈಗ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸೈನಾ ಆಕೆಯನ್ನು ಮತ್ತೆ ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ವಾಂಗ್ ಮತ್ತು ಒಲಿಂಪಿಕ್ಸ್ ಚಾಂಪಿಯನ್ ಲಿ ಕ್ಸ್ಯೂರಿ ಪಂದ್ಯಾವಳಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ. ಇನ್ನು ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು 16ನೇ ಸ್ಥಾನಕ್ಕೆ ಮರಳಿದ್ದಾರೆ. ಸೈನಾ ಬಿಟ್ಟರೆ, ಟಾಪ್50ರ ರ್ಯಾಂಕಿಂಗ್ ಪಟ್ಟಿಯಲ್ಲಿರುವ ಭಾರತದ ಆಟಗಾರ್ತಿ ಸಿಂಧು ಆಗಿದ್ದಾರೆ. ಆರ್.ಎಂ.ವಿ ಗುರುಸಾಯಿದತ್ 38ನೇ ಸ್ಥಾನಕ್ಕೆ ಕುಸಿದರೆ, ಮಧ್ಯಪ್ರದೇಶದ ಸೌರಭ್ ವರ್ಮಾ 43ನೇ ಸ್ಥಾನಕ್ಕೇರಿದ್ದಾರೆ.
ಮುಂಬೈನ ಆನಂದ್ ಪವಾರ್ 6 ಸ್ಥಾನ ಬಡ್ತಿ ಪಡೆದಿದ್ದು 45ನೇ ಸ್ಥಾನಕ್ಕೇರಿದ್ದಾರೆ. ಮಿಶ್ರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ತರುಣ್ ಕೋನಾ ಜೋಡಿ 2 ಸ್ಥಾನ ಬಡ್ತಿ ಪಡೆದಿದ್ದು 29ನೇ ಸ್ಥಾನದಲ್ಲಿದೆ. ಇನ್ನು ಜ್ವಾಲಾ ಗುಟ್ಟು ಜತೆಯಾಟಗಾರ ವಿ. ಡಿಜು ಅವರೊಂದಿಗೆ 2 ಸ್ಥಾನ ಹಿಂಬಡ್ತಿ ಪಡೆದಿದ್ದು, 41ನೇ ಸ್ಥಾನದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement