ಕಿವೀಸ್ಗೆ ಆಸರೆಯಾದ ರದರ್ಫೋರ್ಡ್
ಡ್ಯುನೇಡಿನ್: ರೂಕಿ ರದರ್ಫೋರ್ಡ್ ಅವರ ಆಕರ್ಷಕ ಶತಕದಿಂದಾಗಿ, ಆತಿಥೇಯ ನ್ಯೂಜಿಲೆಂಡ್ ತಂಡ, ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದೆ. ಪಂದ್ಯದ ಎರಡನೇ ದಿನವಾದ ಗುರುವಾರ ಇಂಗ್ಲೆಂಡ್ನ ಮೊದಲ ಇನಿಂಗ್ಸ್ ಅನ್ನು 167ಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದ ನ್ಯೂಜಿಲೆಂಡ್, ಪಂದ್ಯದ ಮೂರನೇ ದಿನವಾದ ಶುಕ್ರವಾರ ದಿನಾಂತ್ಯಕ್ಕೆ ತನ್ನ ಮೊದಲನೇ ಇನಿಂಗ್ಸ್ನಲ್ಲಿ 7 ವಿಕೆಟ್ ನಷ್ಟಕ್ಕೆ 402 ರನ್ ಗಳಿಸಿದೆ.
ಶುಕ್ರವಾರ ದಿನಾಂತ್ಯಕ್ಕೆ ಪುಲ್ಟನ್ ಅವರೊಂದಿಗೆ ಅಜೇಯರಾಗಿ ಉಳಿದಿದ್ದ ರದರ್ಫೋರ್ಡ್, ಶನಿವಾರ ತನ್ನ ಆಟವನ್ನು ಮುಂದುವರೆಸಿ ಭರ್ಜರಿ 171 ರನ್ ಗಳಿಸಿದರು.
ಏಳನೇ ಕ್ರಿಕೆಟಿಗ: ತಾವು ಆಡುತ್ತಿರುವ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ ರದರ್ಫೋರ್ಡ್, ಈ ಸಾಧನೆ ಮಾಡಿದ ಏಳನೇ ಕ್ರಿಕೆಟರೆಂಬ ಹೆಗ್ಗಳಿಕೆ ಪಡೆದರು.
ರದರ್ಫೋರ್ಡ್ ಹಾಗೂ ಫುಲ್ಟನ್ ಜೋಡಿ ಮೊದಲ ವಿಕೆಟ್ಗೆ 158 ರನ್ ಕಲೆಹಾಕಿತು. ಇನಿಂಗ್ಸ್ನ 51ನೇ ಓವರ್ನಲ್ಲಿ ಫುಲ್ಟನ್ (55) ಔಟಾದರೆ, ರದರ್ಫೋರ್ಡ್ ಆನಂತರ, ವಿಲಿಯಮ್ಸನ್ ಅವರೊಂದಿಗೆ 2ನೇ ವಿಕೆಟ್ಗೆ 91 ರನ್ ಸೇರಿಸಿದರು.
ತಂಡದ ಮೊತ್ತ 249 ರನ್ ಆಗಿದ್ದಾಗ, ವಿಲಿಯಮ್ಸನ್ (24) ವಿಕೆಟ್ ಒಪ್ಪಿಸಿದರು. ಈ ಸಂದರ್ಭದಲ್ಲಿ, ಕ್ರೀಸ್ಗೆ ಕಾಲಿಟ್ಟಿದ್ದು ರಾಸ್ ಟೇಲರ್. ಮೂರನೇ ವಿಕೆಟ್ಗೆ ಈ ಜೋಡಿ, 18 ರನ್ ಸೇರಿಸುವಷ್ಟರಲ್ಲಿ ರದರ್ಫೋರ್ಡ್ ವಿಕೆಟ್ ಒಪ್ಪಿಸಿದರು.
ಇಲ್ಲಿಂದ ನ್ಯೂಜಿಲೆಂಡ್, ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಬ್ರೆಂಡಾನ್ ಮೆಕಲಂ (ಅಜೇಯ 44) ಬಿಟ್ಟರೆ ಮತ್ಯಾರೂ ಅಂಥಾ ದೊಡ್ಡ ಮೊತ್ತದ ವೈಯಕ್ತಿಕ ಕಾಣಿಕೆಯನ್ನು ನೀಡಲಿಲ್ಲ. ಟೇಲರ್ (31), ಬ್ರೌನ್ಲಿ (27), ಸೌಥೀ (25), ವ್ಯಾಟ್ಲಿಂಗ್ (0) ಎಲ್ಲರೂ ಬೇಗನೇ ವಿಕೆಟ್ ಒಪ್ಪಿಸಿದರು.
ಅಂತಿಮವಾಗಿ, ದಿನಾಂತ್ಯಕ್ಕೆ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 402 ರನ್ ಗಳಿಸಿತು. ಮೆಕಲಂ ಅವರೊಂದಿಗೆ ಮಾರ್ಟಿನ್ (17) ಕ್ರೀಸ್ನಲ್ಲಿದ್ದಾರೆ.
ಉತ್ತಮ ಮುನ್ನಡೆ: ಇದೀಗ, ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ಗಿಂತ 235 ರನ್ಗಳ ಮುನ್ನಡೆ ಹೊಂದಿದ್ದು, 3 ವಿಕೆಟ್ಗಳನ್ನು ಹೊಂದಿದೆ.