ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದಕ್ಷಿಣ ವಲಯಕ್ಕೆ ಶಿವಮೊಗ್ಗ ಸಿದ್ಧ

Mainashree
Updated On : 9 Mar 2013, 12:27 pm

ಕನ್ನಡಪ್ರಭ ವಾರ್ತೆ  ಶಿವಮೊಗ್ಗ  ಮಾ.8-
ಶಿವಮೊಗ್ಗ ಭದ್ರಾವತಿ ಅವಳಿ ನಗರದಲ್ಲಿ ಕ್ರಿಕೆಟ್ ಹಬ್ಬಕ್ಕೆ ವೇದಿಕೆ ಸಜ್ಜಾಗಿದೆ. ಇದೇ ಮಾ.17ರಿಂದ 22ರವರೆಗೆ ಸೈಯದ್ ಮುಶ್ತಾಕ್ ಅಲಿ ಟ್ರೋಫಿ ದಕ್ಷಿಣ ವಲಯ ಅಂತರಾಜ್ಯ ಟಿ-20 ಕ್ರಿಕೆಟ್ ಪಂದ್ಯಾವಳಿ ಈ ಎರಡು ನಗರಗಳಲ್ಲಿ ನಡೆಯಲಿದೆ.
ಈ ಕ್ರಿಕೆಟ್ ಹಬ್ಬದ ಪ್ರಮುಖ ಆಕರ್ಷಣೆ, ಐಪಿಎಲ್ ಆಟಗಾರರಾದ ಮನೀಷ್ ಪಾಂಡೆ, ರಾಬಿನ್ ಉತ್ತಪ್ಪ, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್, ಕೇರಳ ತಂಡದ ಶ್ರೀಶಾಂತ್, ತಮಿಳುನಾಡು ತಂಡದ  ಬದರೀನಾಥ್ ಇನ್ನಿತರರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿ ವಿಶೇಷತೆ ಹಾಗೂ ವೇಳಾಪಟ್ಟಿಯನ್ನು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್‌ನ ಪ್ರತಿನಿಧಿ ವಿಜಯ್ ಭಾರದ್ವಾಜ್ ಬಿಡುಗಡೆ ಮಾಡಿ ಮಾತನಾಡಿದರು.
ಪಂದ್ಯ ಎಲ್ಲೆಲ್ಲಿ?: ಮಾರ್ಚ್ 17ರಿಂದ 22ರವರೆಗೆ ನಡೆಯುವ ರೌಂಡ್ ರಾಬಿನ್ ಹಂತದ ಪಂದ್ಯಗಳು ಮೂರು ಅಂಗಳದಲ್ಲಿ ಏಕಕಾಲದಲ್ಲಿ ನಡೆಯುತ್ತವೆ. ಪ್ರತಿದಿನ 3 ಪಂದ್ಯಗಳು ನಡೆಯುವುದು. ಬೆಳಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮಧ್ಯಾಹ್ನದೊಳಗೆ ಪಂದ್ಯ ಮುಗಿಯುವುದು.
ಶಿವಮೊಗ್ಗದ ಜೆಎನ್‌ಎನ್‌ಸಿಇ ಅಂಗಣ, ಪೆಸೆಟ್ ಕಾಲೇಜು ಅಂಗಣ ಹಾಗೂ ಭದ್ರಾವತಿಯ ವಿಐಎಸ್‌ಎಲ್ ಅಂಕಣದಲ್ಲಿ ಪಂದ್ಯ ನಡೆಸಲು ಈಗಾಗಲೇ ಸಿದ್ಧತೆ ನಡೆದಿದೆ. ಕೇರಳ, ಹೈದ್ರಾಬಾದ್, ಗೋವಾ, ಕರ್ನಾಟಕ, ಆಂಧ್ರ, ತಮಿಳುನಾಡು ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಲಿವೆ.
ಇಲ್ಲಿ ಗೆಲವು ಸಾಧಿಸಿ ಅತಿ ಹೆಚ್ಚು ಅಂಕ ಪಡೆದ ತಂಡಗಳು ರಾಂಚಿಯಲ್ಲಿ ನಡೆಯುವ ಅಂತಿಮ ಹಂತದ ಪಂದ್ಯಾವಳಿಯಲ್ಲಿ ಆಡಲು ಅರ್ಹತೆ ಪಡೆಯಲಿವೆ. ಅದೇ ರೀತಿ ಐಪಿಎಲ್ ಪೂರ್ವಭಾವಿಯಾಗಿ ಈ ಪಂದ್ಯಾವಳಿ ನಡೆಯುತ್ತಿದೆ. ಇಲ್ಲಿಗೆ ಐಪಿಎಲ್ ತಂಡಗಳ ಆಯ್ಕೆಗಾರರು ಆಗಮಿಸುತ್ತಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರಿಗೆ ಐಪಿಎಲ್ ತಂಡದಲ್ಲಿ ಪ್ರಾಧಾನ್ಯತೆಯೂ ಸಿಗಲಿದೆ. ಹೀಗಾಗಿ ಪಂದ್ಯಾವಳಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
ಶಿವಮೊಗ್ಗ ಆಯ್ಕೆ: 2011ರ ಡಿಸೆಂಬರ್‌ನಲ್ಲಿ ಜೆಎನ್‌ಎನ್‌ಸಿಇ ಟರ್ಫ್ ಅಂಕಣದಲ್ಲಿ ನಡೆದ ಕರ್ನಾಟಕ ಮತ್ತು ಉತ್ತರ ಪ್ರದೇಶ ನಡುವಿನ ರಣಜಿ ಪಂದ್ಯ ಪ್ರೇಕ್ಷಕರ ಬಗ್ಗೆ ಆಯೋಜಕರು (ಬಿಸಿಸಿಐ, ಕೆಎಸ್‌ಸಿಎ) ತಳೆದಿದ್ದ ಮನೋಭಾವನೆಯನ್ನೇ ಬದಲಾಯಿಸಿದೆ. ಶಿವಮೊಗ್ಗ ಪಂದ್ಯ ಯಾವುದೇ ಫಲಿತಾಂಶ ತಾರದು ಎಂದು ತಿಳಿದಿದ್ದರೂ ಪ್ರೇಕ್ಷಕರು ನಾಲ್ಕೂ ದಿನಗಳು ಕಿಕ್ಕಿರಿದು ಮೈದಾನದಲ್ಲಿ ಸೇರಿ ಎರಡೂ ತಂಡಗಳ ಆಟಗಾರರನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ್ದು ಉಲ್ಲೇಖನೀಯ. ರಾಜ್ಯ ಕ್ರಿಕೆಟ್ ಸಂಸ್ಥೆ ಸಹ ಪಂದ್ಯದ ಆಯೋಜನೆಯ ಬಗ್ಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿತು ಎಂದು ವಿಜಯ ಭಾರದ್ವಾಜ್ ವಿವರಿಸಿದರು.
ರಾಜ್ಯ ಕ್ರಿಕೆಟ್ ಸಂಸ್ಥೆಯು ಅಂತರ ವಲಯ 19 ಮತ್ತು 16 ವರ್ಷ ವಯೋವುತಿಯೊಳಗಿನ ಕಿರಿಯರ ಕ್ರಿಕೆಟ್ ಪಂದ್ಯಾವಳಿಯನ್ನೂ ಸಹ ಯಶಸ್ವಿಯಾಗಿ ನಡೆಸಲಾಯಿತು. ಇದೇ ಕಾರಣಗಳಿಗಾಗಿ ಈ ಟಿ-20 ಪಂದ್ಯಾವಳಿಯನ್ನು ಶಿವಮೊಗ್ಗಕ್ಕೆ ನೀಡಲು ಆಯೋಜಕರು ನಿರ್ಧರಿಸಿದರು ಎಂದು ಅವರು ಹೇಳಿದರು.
ವೇಳಾಪಟ್ಟಿ
ಮಾ.17: ಕೇರಳ- ಹೈದ್ರಾಬಾದ್, ಜೆಎನ್‌ಎಸ್‌ಸಿಇ ಅಂಗಣ. ಗೋವಾ- ಕರ್ನಾಟಕ, ಪೆಸೆಟ್ ಕಾಲೇಜು ಅಂಗಣ. ಆಂಧ್ರ- ತಮಿಳುನಾಡು, ವಿಐಎಸ್‌ಎಲ್ ಭದ್ರಾವತಿ.
ಮಾ.18: ತಮಿಳುನಾಡು- ಗೋವಾ, ಜೆಎನ್‌ಎನ್‌ಸಿಇ. ಆಂಧ್ರ- ಹೈದ್ರಾಬಾದ್, ಪೆಸೆಟ್. ಕೇರಳ-ಕರ್ನಾಟಕ, ವಿಐಎಸ್‌ಎಲ್.
ಮಾ.19: ತಮಿಳುನಾಡು- ಕರ್ನಾಟಕ, ಜೆಎನ್‌ಎನ್‌ಸಿಇ. ಕೇರಳ-ಆಂದ್ರ, ಪೆಸೆಟ್. ಗೋವಾ- ಹೈದ್ರಾಬಾದ್, ವಿಐಎಸ್‌ಎಲ್.
ಮಾ.20: ಯಾವುದೇ ಪಂದ್ಯ ಇರುವುದಿಲ್ಲ.
ಮಾ.21: ಗೋವಾ- ಆಂಧ್ರ, ಜೆಎನ್‌ಎನ್‌ಸಿಇ. ಕೇರಳ- ತಮಿಳುನಾಡು, ಪೆಸೆಟ್. ಹೈದ್ರಾಬಾದ್- ಕರ್ನಾಟಕ, ವಿಐಎಸ್‌ಎಲ್.
ಮಾ.22: ಆಂಧ್ರ- ಕರ್ನಾಟಕ, ಜೆಎನ್‌ಎನ್‌ಸಿಇ. ಹೈದ್ರಾಬಾದ್- ತಮಿಳುನಾಡು, ಪೆಸೆಟ್. ಕೇರಳ-ಗೋವಾ, ವಿಐಎಸ್‌ಎಲ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement