ವಿಜೇಂದರ್ ಮುಗ್ಧ: ಪ್ರಾಥಮಿಕ ತನಿಖೆ
ಚಂದಿಗಡ: ಭಾರತೀಯ ಮೂಲದ ವ್ಯಕ್ತಿಯೊಬ್ಬರ ಜಿರಾಕ್ಪುರದ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ರು. 130 ಕೋಟಿ ಮೊತ್ತದ 26ಕೆಜಿ ಹೆರಾಯಿನ್ ಪ್ರಕರಣದೊಂದಿಗೆ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ ಹೆರಾಯಿನ್ ಇರಿಸಿಕೊಂಡಿದ್ದ ಎನ್ನಲಾಗಿರುವ ಆರೋಪಿಯ ನಿವಾಸದ ಬಳಿ ವಿಜೇಂದರ್ ಸಿಂಗ್ ಕಾರನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದರು.
'ಬಂಧಿತನಾಗಿರುವ ಭಾರತೀಯ ಮೂಲದ ನಿವಾಸಿಯ ಮನೆಯ ಸಮೀಪದಲ್ಲಿ ವಿಜೇಂದರ್ ಕಾರನ್ನು ನಾವು ವಶಪಡಿಸಿಕೊಂಡಿದ್ದೇವೆ. ಪ್ರಾಥಮಿಕ ತನಿಖೆಯಿಂದ ಇದಕ್ಕಿಂತ ಹೆಚ್ಚಿನದು ಏನೂ ಗೊತ್ತಾಗಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.
'ಪ್ರಾಥಮಿಕ ತನಿಖೆಯಿಂದ ವಿಜೇಂದರ್ ಸಿಂಗ್ ಹೇರಾಯಿನ್ ಅಕ್ರಮ ಸಾಗಾಣಿಕೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಹೆರಾಯಿನ್ ವಶಪಡಿಸಿಕೊಂಡಿರುವ ಪ್ರಕರಣದೊಂದಿಗೆ ವಿಜೇಂದರ್ ಸಂಪರ್ಕ ಹೊಂದಿದ್ದಾರೆ ಎಂಬ ಕುರಿತು ಯಾವುದೇ ಸುಳಿವು ದೊರೆತಿಲ್ಲ' ಎಂದು ಅವರು ಹೇಳಿದರು.
ಮೊಹಾಲಿ ಜಿಲ್ಲೆಯ ಜಿರಾಕ್ಪುರ ನಗರದ ಹೊರ ವಲಯದಲ್ಲಿರುವ ಭಾರತೀಯ ಮೂಲದ ನಿವಾಸಿ ಅನೂಪ್ ಸಿಂಗ್ ಕೊಹ್ಲೋನ್ ನಿವಾಸ 'ಸಾವಸ್ತಿಕ್ ವಿಹಾರ'ದಲ್ಲಿ ಶುಕ್ರವಾರ ಬೆಳಗ್ಗೆ ಪಂಜಾಬ್ ಪೊಲೀಸರು 26ಕೆಜಿ ಹೇರಾಯಿನ್ ವಶಪಡಿಸಿಕೊಂಡಿದ್ದಾರೆ.
ಬಾಕ್ಸರ್ಗಳಾದ ವಿಜೇಂದರ್ ಸಿಂಗ್ ಮತ್ತು ರಾಮ್ ಸಿಂಗ್ ಅವರಿಗೆ ನಾನು ಹೇರಾಯಿನ್ ಪೂರೈಸುತ್ತಿದ್ದೆ ಎಂದು ವಿಚಾರಣೆ ಸಂದರ್ಭ ಬಂಧಿತ ಭಾರತೀಯ ಮೂಲದ ನಿವಾಸಿ ಅನೂಪ್ ಸಿಂಗ್ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಆದರೆ, ಅಂತಾರಾಷ್ಟ್ರೀಯ ಬಾಕ್ಸರ್ ವಿಜೇಂದರ್ ಸಿಂಗ್ ಈ ಆರೋಪವನ್ನು ಆಲ್ಲಗಳೆದಿದ್ದು, ಅನೂಪ್ ಸಿಂಗ್ ಪರಿಚಯವೇ ನನಗೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.