ಸೈನಾ, ಕಶ್ಯಪ್ ಕ್ವಾರ್ಟರ್‌ಫೈನಲ್‌ಗೆ
ಭಾರತದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್: ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.
ವಿಶ್ವದ ನಂ.3 ಆಟಗಾರ್ತಿ ಸೈನಾ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಇಂಡೋನೇಷ್ಯಾದ ಬೇಲಾಟ್ರಿಕ್ಸ್ ಮಾನುಪುತಿ ಅವರನ್ನು 21-16, 21-11 ನೇರ ಸೆಟ್‌ಗಳ ಅಂತರದಿಂದ ಸೋಲಿಸುವ ಮೂಲಕ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. 22 ವರ್ಷದ ಸೈನಾ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 6ನೇ ಶ್ರೇಯಾಂಕ ಪಡೆದಿರುವ ಚೀನಾದ ಶಿಕ್ಸಿಯಾನ ವಾಂಗ್ ಅವರನ್ನು ಎದುರಿಸಲಿದ್ದಾರೆ.
ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದ ಕಶ್ಯಪ್ ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ನಂ. 6 ಆಟಗಾರ ಜಪಾನ್‌ನ ಕೆನಿಚಿ ಟಾಗೋ ಅವರನ್ನು 21-18, 21-12 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿದರು. 2011ರ ಚೀನಾ ಓಪನ್‌ನಲ್ಲಿ ಕಶ್ಯಪ್ ಈ ಆಟಗಾರ ವಿರುದ್ಧ ಸೋಲನುಭವನಿಸಿದ್ದರು.
ಕಶ್ಯಪ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಚೀನಾದ ಚೆನ್ ಲಾಂಗ್ ಅವರನ್ನು ಎದುರಿಸಲಿದ್ದಾರೆ. ಕಶ್ಯಪ್ ಮೂರು ಪಂದ್ಯಗಳಲ್ಲಿ ಲಾಂಗ್ ವಿರುದ್ಧ ಸೋಲನುಭವಿಸಿದ್ದಾರೆ. ಆದರೆ, ಇತ್ತೀಚೆಗೆ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಕಶ್ಯಪ್ ಜಯ ಸಾಧಿಸಿದ್ದರು.
ಆದರೆ, ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆಗಳಾದ ಪಿ. ವಿ ಸಿಂಧು ಮತ್ತು ಸೌರಭ್ ವರ್ಮಾ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ್ದಾರೆ. ವಿಶ್ವದ ನಂ.16 ಆಟಗಾರ್ತಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ ವಿರುದ್ಧ 17-21, 14-21 ನೇರ ಸೆಟ್‌ಗಳ ಅತಂರದಿಂದ ಸೋಲನುಭವಿಸಿದರು.
ಇನ್ನು ವಿಶ್ವದ ನಂ. 43ನೇ ಆಟಗಾರ ಸೌರಭ್ ವರ್ಮಾ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವೀಯಟ್ನಾಂನ ಟೀನ್ ಮಿನ್ಹಾ ವಿರುದ್ಧ 19-21, 19-21 ಸೆಟ್‌ಗಳ ಅಂತರದಿಂದ ಸೋಲುವ ಮುನ್ನ ಪ್ರಬಲ ಪೈಪೋಟಿ ನೀಡಿದರು.
ಇನ್ನು ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಗುಟ್ಟಾ ಮತ್ತು ವಿ. ಡಿಜು ಜೋಡಿ, ಪೊಲೆಂಡ್‌ನ ರಾಬರ್ಟ್ ಮಾಟೆಸೀಕ್ ಮತ್ತು ನಾದಿದಾ ಜೀಬಾ ಜೋಡಿ ವಿರುದ್ಧ 17-21, 16-21 ಸೆಟ್‌ಗಳ ಅಂತರದಿಂದ ಸೋಲನುಭವಿಸಿತು.
ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಸೈನಾ ಇಂಡೋನೇಷ್ಯಾ ಆಟಗಾರ್ತಿಯನ್ನು ಸುಲಭವಾಗಿ ಮಣಿಸಿದರು. ಮೊದಲ ಸೆಟ್‌ನ ಆರಂಭದಲ್ಲೇ 7-3 ಅಂತರದಿಂದ ಮುನ್ನಡೆ ಪಡೆದುಕೊಂಡ ಸೈನಾ, ನಂತರ 11-7ರಿಂದ ಅಂತರವನ್ನು ಹೆಚ್ಚಿಸಿಕೊಂಡರು. ಆದರೆ, ಎದುರಾಳಿ 12-12 ಅಂತರದಿಂದ ಸಮಬಲ ಸಾಧಿಸಿದರು.
ನಿಧಾನಗತಿಯಲ್ಲಿ ಎದುರಾಳಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಸೈನಾ ಪಂದ್ಯದಲ್ಲಿ ಜಯ ಕಂಡುಕೊಂಡರು. 2ನೇ ಸೆಟ್‌ನಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಸೈನಾ ಆರಂಭದಲ್ಲೇ 11-2 ಅಂತರದಿಂದ ಮುನ್ನಡೆ ಕಂಡುಕೊಂಡರು.
ನಂತರ ಇಂಡೋನೇಷ್ಯಾ ಆಟಗಾರ್ತಿ ಎದುರೇಟು ನೀಡಲು ಯತ್ನಿಸಿದರು. ಆದರೆ, ಯಶಸ್ವಿಯಾಗಲಿಲ್ಲ.