ಆಲ್ ಇಂಗ್ಲೆಂಡ್: ಸೆಮಿ ಫೈನಲ್ನಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್
ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ...
ಬರ್ಮಿಂಗ್ಹ್ಯಾಮ್ (ಇಂಗ್ಲೆಂಡ್): ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದ ಸೈನಾ ನೆಹ್ವಾಲ್ ಚೊಚ್ಚಲ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ ಗೆಲ್ಲುವ ಕನಸು ಭಗ್ನಗೊಂಡಿದೆ.
ವಿಶ್ವದ ನಂ.3 ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳೆಯರ ಸಿಂಗಲ್ಸ್ನ ಸೆಮಿಫೈನಲ್ ಪಂದ್ಯದಲ್ಲಿ, ವಿಶ್ವದ ನಂ.8 ಆಟಗಾರ್ತಿ ಥಾಯ್ಲೆಂಡ್ನ ಇಂತಾನಾನ್ ರಾಚನೋಕ್ ವಿರುದ್ಧ 15-21, 19-21 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿದರು. ಇದರೊಂದಿಗೆ ಸೈನಾ ಇಂತಾನಾನ್ ವಿರುದ್ಧ 3ನೇ ಬಾರಿಗೆ ಪರಾಭವ ಹೊಂದಿದ್ದಾರೆ. ಈ ಮುನ್ನ 2011ರ ಸುದೀರ್ಮನ್ ಕಪ್ ಮತ್ತು ಕಳೆದ ವರ್ಷ ನಡೆದ ಸೂಪರ್ ಸಿರೀಸ್ ಫೈನಲ್ನಲ್ಲಿ ಸೈನಾ ಇಂತಾನಾನ್ ವಿರುದ್ಧ ಕೈಚೆಲ್ಲಿದ್ದರು.
18 ವರ್ಷದ ಇಂತಾನಾನ್ ಪಂದ್ಯದಲ್ಲಿ ಸೈನಾ ವಿರುದ್ಧ ಮೇಲುಗೈ ಪಡೆಯಲು ಮಿಶ್ರ ಬಗೆಯ ಹೊಡೆತಗಳನ್ನು ಉಪಯೋಗಿಸಿದರು. ಪಂದ್ಯದ ಮೊದಲ ಸೆಟ್ನಲ್ಲಿ ಮೇಲುಗೈ ಸಾಧಿಸಿದ ನಂತರ ಇಂತಾನಾನ್, 2ನೇ ಸೆಟ್ನಲ್ಲೂ ಜಯ ಕಾಣುವಲ್ಲಿ ಯಶಸ್ವಿಯಾದರು.
ಎರಡನೇ ಸೆಟ್ನಲ್ಲಿ ಸೈನಾ ಕೊಂಚ ತಿರುಗೇಟು ನೀಡುವ ಮೂಲಕ ಆರಂಭದಲ್ಲಿ 5-3 ಅಂತರದಿಂದ ಮುನ್ನಡೆ ಕಂಡುಕೊಂಡಿದ್ದರಾದರೂ, ಸತತವಾಗಿ 5 ಅಂಕ ಗಳಿಸುವಲ್ಲಿ ಯಶಸ್ವಿಯಾದ ಇಂತಾನಾನ್ ನಿಧಾನವಾಗಿ ಮುನ್ನಡೆ ಕಂಡುಕೊಳ್ಳುವ ಮೂಲಕ ಅಂತಿಮವಾಗಿ ಜಯದ ಕೇಕೆ ಹಾಕಿದರು.