ಪದಕದ ಸುತ್ತಿಗೆ ದೆಬೋರಾ ಲಗ್ಗೆ
ಸೈಕ್ಲಿಂಗ್: ಸ್ಪ್ರಿಂಟ್ ಸೆಮೀಸ್ನಲ್ಲಿ ಫರೀಹಾ ಹಿಂದಿಕ್ಕಿದ ಭಾರತೀಯ ಸೈಕ್ಲಿಸ್ಟ್
ನವದೆಹಲಿ: ಭಾರತದ ಭರವಸೆಯ ಸೈಕ್ಲಿಸ್ಟ್ ದೆಬೋರಾ ಅವರು ಶನಿವಾರ ನಡೆದ ವೈಯಕ್ತಿಕ ಸ್ಪ್ರಿಂಟ್ ವಿಭಾಗದಲ್ಲಿ ಜಯಗಳಿಸಿ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ವೈಯಕ್ತಿಕ ಸ್ಪ್ರಿಂಟ್ ವಿಭಾಗದ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ರೇಸ್ನಲ್ಲಿ ತಮಗೆ ತೀವ್ರ ಸ್ಪರ್ಧೆ ನೀಡಿದ್ದ ಮಲೇಷ್ಯಾದ ಫರೀಹಾ ಶಾ ಮಹಮ್ಮದ್ ಅದ್ಮಾನ್ ಅವರನ್ನು ಹಿಂದಿಕ್ಕಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದ ದೆಬೋರಾ, ಪದಕದ ಸುತ್ತಿಗೆ ಕಾಲಿಟ್ಟರು.
ಮೂರು ಲ್ಯಾಪ್ಗಳಿದ್ದ ರೇಸ್ನಲ್ಲಿ, ಅರ್ಧ ಹಾದಿ ಸವೆಸುವವರೆಗೂ ದೆಬೋರಾ ಅವರು ಫರೀಹಾಗಿಂತಲೂ ಕೂದಲೆಳೆಯ ಅಂತರದಲ್ಲಿ ಹಿಂದಿದ್ದರು. ಆನಂತರ, 16ರ ಪ್ರಾಯದ ದೆಬೋರಾ ಕೊಂಚ ಹೆಚ್ಚಿನ ಪರಿಶ್ರಮ ಹಾಕಿ, ಫರಿಹಾಹ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದರು. ಕೇವಲ 0.066 ಸೆಕೆಂಡ್ಗಳಲ್ಲಿ ನಿಗದಿತ ದೂರವನ್ನು ಕ್ರಮಿಸಿದ ಅವರು, ಮೊದಲ ಹೀಟ್ಸ್ನಲ್ಲಿ ಮೊದಲಿಗರಾಗಿ ಹೊರಹೊಮ್ಮಿದರು.
ಆನಂತರ, ದ್ವಿತೀಯ ಹೀಟ್ಸ್ನಲ್ಲಿ ದೆಬೋರಾ ಅವರು, ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು. ಆದರೆ, ವೇಗವಾಗಿ ಸಾಗುತ್ತಿದ್ದ ದೆಬೋರಾ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾದ ಫರಿಹಾಹ್, ದೆಬೋರಾಗೆ ತೀವ್ರ ಪ್ರತಿಸ್ಪರ್ಧೆ ನೀಡಿದರು.
ಆದರೆ, ಮತ್ತಷ್ಟು ಪೆಡಲ್ ಮಾಡಿದ ದೆಬೋರಾ ಅವರು ಕೇವಲ 0.005 ಸೆಕೆಂಡ್ ಅಂತರದಲ್ಲಿ ಫರಿಹಾಹ್ ಅವರನ್ನು ಹಿಂದಿಕ್ಕಿ ಪದಕದ ಸುತ್ತಿಗೆ ಕಾಲಿಟ್ಟರು.
ಪದಕದ ಸುತ್ತು
ಇದೀಗ ವೈಯಕ್ತಿಕ ಸ್ಪ್ರಿಂಟ್ಗೆ ಕಾಲಿಟ್ಟಿರುವ ಸುನಾಮಿ ಗೆದ್ದ ಮಹಿಳೆ ದೆಬೋರಾ, ಸೋಮವಾರ ನಡೆಯಲಿರುವ ಫೈನಲ್ ಸುತ್ತಿನಲ್ಲಿ ಕೊರಿಯಾದ ಯೆವಾನ್ಹೀ ಜಾಂಗ್ ಅವರನ್ನು ಎದುರಿಸಲಿದ್ದಾರೆ. 500 ಮೀ. ಟೈಮ್ ಟ್ರಯಲ್ ವಿಭಾಗದಲ್ಲಿ ಭಾರತಕ್ಕೆ ಈಗಾಗಲೇ ಕಂಚು ತಂದಿರುವ ದೆಬೋರಾ, ಸೋಮವಾರದ ಸ್ಪರ್ಧೆಯಲ್ಲಿ ಭಾರತಕ್ಕೆ ಸ್ವರ ತರುವರೇ ಎಂಬುದನ್ನು ಕ್ರೀಡಾಭಿಮಾನಿಗಳು ಕಾತುರದಿಂದ ನೋಡುತ್ತಿದ್ದಾರೆ.