ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ
ಮಡಿಕೇರಿ: ಲಕ್ಕಿ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ ಏ.11 ಮತ್ತು 12 ರಂದು ಕುಂಜಿಲ ಕಕ್ಕಬ್ಬೆಯ ಕೆ.ಪಿ. ಬಾಣೆ ಶಾಲಾ ಮೈದಾನದಲ್ಲಿ ಹೊನಲು ಬೆಳಕಿನ ಆಹ್ವಾನಿತ ಅಂತರಾಜ್ಯ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಲಬ್ ಅಧ್ಯಕ್ಷ ಎಂ.ಎ. ಶೌಕತ್ ಆಲಿ, ಪಂದ್ಯಾವಳಿಯಲ್ಲಿ ಇಂಡಿಯನ್ ಒವರ್ಸೀಸ್ ಬ್ಯಾಂಕ್, ಕೇರಳದ ಕೊಚ್ಚಿನ್ ಪೋರ್ಟ್ ತಂಡ, ಕರ್ನಾಟಕದ ಎಚ್ಎಎಲ್, ತಮಿಳುನಾಡಿನ ತಂಡ ಸೇರಿದಂತೆ ಒಟ್ಟು ಎಂಟು ತಂಡಗಳು ಪಾಲ್ಗೊಳ್ಳಲಿವೆ. ತಂಡಗಳನ್ನು ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಲೀಗ್ ಮಾದರಿಯಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತದೆ ಎಂದರು. ಪಂದ್ಯಾವಳಿ ವಿಜೇತ ತಂಡಕ್ಕೆ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 30 ಸಾವಿರ ನಗದು ಮತ್ತು ಟ್ರೋಫಿಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಪಂದ್ಯಾಟಗಳು ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ ಎಂದರು.