ಹೋರಾಡಿ ಸೋತ ಭಾರತ
ಆಜ್ಲಾನ್ ಶಾ ಹಾಕಿ: ಆಸ್ಟ್ರೇಲಿಯಾಕ್ಕೆ 4-3 ಗೋಲುಗಳಿಂದ ಜಯ
ಐಪೋ: ಸ್ಫೂರ್ತಿಯ ಹೋರಾಟ ನೀಡಿದ ಭಾರತ ಹಾಕಿ ತಂಡ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 3-4 ಗೋಲುಗಳ ಅಂತರದಿಂದ ಸೋಲನುಭವಿಸಿತು.
ಯುವ ಆಟಗಾರರಿಂದ ಕೂಡಿರುವ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸಮರ್ಥ ಪ್ರದರ್ಶನ ನೀಡಿತು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಎರಡು ನಿಮಿಷಗಳಲ್ಲಿ ಎರಡು ಗೋಲು ಕೈಚೆಲ್ಲಿದ್ದು ಸೋಲಿಗೆ ಕಾರಣವಾಯಿತು.
ಪಂದ್ಯದ 24ನೇ ನಿಮಿಷದಲ್ಲಿ ಮ್ಯಾಟ್ ಗೋಡ್ಸ್ ಗೋಲು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲಾರ್ಧ ಪಂದ್ಯ ಮುಕ್ತಾಯವಾದಾಗ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 39ನೇ ನಿಮಿಷದಲ್ಲಿ ಮ್ಯಾಟ್ ಗೋಡ್ಸ್ ಮತ್ತೊಂದು ಗೋಲು ದಾಖಲಿಸಿದರೆ, 38ನೇ ನಿಮಿಷದಲ್ಲಿ ಗ್ಲೆನ್ ಸಿಂಪ್ಸನ್, 53ನೇ ನಿಮಿಷದಲ್ಲಿ ಟ್ರೆಂಟ್ ಮಿಲ್ಟಾನ್ ಆಸೀಸ್ ಪರ ಗೋಲು ದಾಖಲಿಸಿದರು.
ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಭಾರತದ ಡ್ರ್ಯಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಪಂದ್ಯದ 40 ಮತ್ತು 68ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ನಂತರ 51ನೇ ನಿಮಿಷದಲ್ಲಿ ಮಲಕ್ ಸಿಂಗ್ ಅದ್ಭುತ ಗೋಲು ದಾಖಲಿಸಿದರು.
ಪಂದ್ಯ ಆರಂಭವಾದ ಹತ್ತು ನಿಮಿಷಗಳಲ್ಲೇ ಭಾರತದ ಮೇಲೆ ಆಸೀಸ್ ಆಟಗಾರರು ನಿಯಂತ್ರಣ ಸಾಧಿಸಿದರು. ಆದರೆ, ಉತ್ತಮ ಪ್ರದರ್ಶನ ನೀಡಿದ ಭಾರತದ ಗೋಲ್ ಕೀಪರ್ ಪಿ ಶ್ರೀಜೇಶ್ ಆಸೀಸ್ನ ಎರಡು ಪ್ರಯತ್ನಗಳನ್ನು ತಡೆಯುವಲ್ಲಿ ಯಶಸ್ವಿಯಾದರು.
ಆದರೆ, 24ನೇ ನಿಮಿಷದಲ್ಲಿ ಭಾರತದ ರಕ್ಷಣಾ ಗೋಡೆ ಎದುರಾಳಿಯ ಗೋಲು ತಡೆಯುವಲ್ಲಿ ವೈಫಲ್ಯ ಕಂಡಿತು. ಆಗ ಸಹ ಗೋಲ್ಕೀಪರ್ ಶ್ರೀಜೇಶ್ ಮೊದಲ ಯತ್ನದಲ್ಲಿ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮರು ಪ್ರಯತ್ನ ಮಾಡಿದ ಮ್ಯಾಟ್ ಗೋಡ್ಸ್ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು.
ದ್ವಿತೀಯಾರ್ಧ ಪಂದ್ಯದಲ್ಲಿ ಆಕ್ರಮಣಕಾರಿ ದಾಳಿ ನಡೆಸಿದ ಆಸ್ಟ್ರೇಲಿಯಾ ಎರಡು ನಿಮಿಷಗಳಲ್ಲಿ ಎರಡು ಗೋಲು ದಾಖಲಿಸುವ ಮೂಲಕ 3-0 ಅಂತರದಿಂದ ಮುನ್ನಡೆ ಕಂಡುಕೊಂಡಿತು.
ಆಗ 41ನೇ ನಿಮಿಷದಲ್ಲಿ ರೂಪಿಂದರ್ ಸಿಂಗ್ ಭಾರತದ ಪರ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ನಂತರ ಭಾರತದ ಮಂದೀಪ್ ಸಿಂಗ್ ಮತ್ತು ಚಿಂಗಾಲ್ಸೇನಾ ಆಕ್ರಮಣಕಾರಿ ಪ್ರದರ್ಶನಕ್ಕೆ ಮುಂದಾದರು.
51ನೇ ನಿಮಿಷದಲ್ಲಿ ಮಲಕ್ ಸಿಂಗ್ ದಾಖಲಿಸಿದ ಗೋಲು, ಪಂದ್ಯದಲ್ಲಿ ದಾಖಲಾದ 7 ಗೋಲುಗಳಲ್ಲೇ ಶ್ರೇಷ್ಠ ಗೋಲು ಎನಿಸಿತು.
'ದ್ವಿತೀಯಾರ್ಧ ಪಂದ್ಯದ ಆರಂಭದಲ್ಲಿ ಆಸ್ಟ್ರೇಲಿಯಾ 2 ನಿಮಿಷಗಳಲ್ಲಿ ಎರಡು ಗೋಲು ದಾಖಲಿಸಿದ್ದು ನಮ್ಮ ಸೋಲಿಗೆ ಕಾರಣವಾಯಿತು. ಆದರೆ, ನಮ್ಮ ಆಟಗಾರರು ನೀಡಿದ ಪ್ರದರ್ಶನ ಸಂತಸ ಉಂಟುಮಾಡಿದೆ' ಎಂದು ಭಾರತ ತಂಡದ ಮುಖ್ಯ ತರಬೇತುದಾರ ಮೈಕಲ್ ನಾಬ್ಸ್ ಹೇಳಿದ್ದಾರೆ. ಈ ಭಾನುವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡ ಕೊರಿಯಾ ತಂಡವನ್ನು ಎದುರಿಸಲಿದೆ.