ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದೇವಧರ ಟ್ರೋಫಿ: ಸೆಮೀಸ್‌ಗೆ ದಕ್ಷಿಣ ವಲಯ

Mainashree
Updated On : 10 Mar 2013, 11:24 am

ಗುವಾಹಟಿ: ಯುವ ಆಟಗಾರ ಬಾಬಾ ಅಪರಾಜಿತ್ ದಾಖಲಿಸಿದ ಶತಕದ ಸಹಾಯದಿಂದಾಗಿ, ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ ತಂಡ, ಪೂರ್ವ ವಲಯ ತಂಡವನ್ನು 11 ರನ್‌ಗಳ ಅಂತರದಿಂದ ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತು.
ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯ ತಂಡ, ಪಶ್ಚಿಮ ವಲಯದ ವಿರುದ್ಧ ಸೆಣೆಸಲಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ, 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತ್ತು. ಸೀಮಿತ ಓವರ್‌ಗಳ ಪಂದ್ಯದಲ್ಲಿ ಮೊಟ್ಟ ಮೊದಲ ಶತಕ ಸಿಡಿಸಿದ ಅಪರಾಜಿತ್, ತಾವು ಎದುರಿಸಿದ ಒಟ್ಟು 129 ಎಸೆತಗಳಲ್ಲಿ 121 ರನ್ ಸಿಡಿಸಿದರು.
ದಕ್ಷಿಣ ವಲಯ ಗಳಿಸಿದ್ದ ಮೊತ್ತವನ್ನು ಬೆನ್ನಟ್ಟಿದ ಪೂರ್ವ ವಲಯ, 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಲಷ್ಟೇ ಶಕ್ತವಾಯಿತು. ಪೂರ್ವ ವಲಯ ತಂಡದ ನಾಯಕ ವೃದ್ಧಿಮಾನ್ ಸಾಹಾ ಗಳಿಸಿದ 77 ರನ್, ಆ ತಂಡದ ಪರ ದಾಖಲಾದ ಗರಿಷ್ಠ ಮೊತ್ತ.
ದಕ್ಷಿಣ ವಲಯದ ಇನಿಂಗ್ಸ್‌ನ ಕೊನೆಯ ಹತ್ತು ಓವರ್‌ಗಳಲ್ಲಿ, ಪೂರ್ವ ವಲಯದ ಬೌಲರ್‌ಗಳು 89 ರನ್ ನೀಡಿದ್ದು, ದಕ್ಷಿಣ ವಲಯದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಅಪರಾಜಿತ್ ಹೊರತುಪಡಿಸಿದಂತೆ, ರಾಬಿನ್ ಉತ್ತಪ್ಪ ಕೂಡ 75 ಎಸೆತಗಳಲ್ಲಿ ಆರು ಬೌಂಡರಿಸೇರಿದಂತೆ 48 ರನ್ ಗಳಿಸಿ, ಗಮನ ಸೆಳೆದರು.
ಆರಂಭಿಕ ಲೋಕೇಶ್ ರಾಹುಲ್ ಅವರನ್ನು ಬೇಗನೇ ಕಳೆದುಕೊಂಡಿದ್ದ ದಕ್ಷಿಣ ವಲಯಕ್ಕೆ ಮತ್ತೊಬ್ಬ ಆರಂಭಿಕ ಉತ್ತಪ್ಪ ಹಾಗೂ ಮೂರನೇ ಕ್ರಮಾಂಕದ ಅಪರಾಜಿತ್ 2ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ಆಡಿದರು. ಇನಿಂಗ್ಸ್‌ನ 23ನೇ ಓವರ್‌ನ ಕೊನೆಯ ಎಸೆತದಲ್ಲಿ, ಉತ್ತಪ್ಪ ಗಾಯಕ್ಕೆ ತುತ್ತಾಗಿ ಮೈದಾನದಿಂದ ಆಚೆ ನಡೆದರು. ಆಗ, ಬ್ಯಾಟ್ ಮಾಡಲು ಬಂದ ನಾಯಕ ದಿನೇಶ್ ಕಾರ್ತಿಕ್, ಅಪರಾಜಿತ್ ಅವರ ಜೊತೆ ಸೇರಿ ಮೂರನೇ ವಿಕೆಟ್‌ಗೆ 59 ರನ್ ಜೊತೆಯಾಟವಾಡಿದರು.
ಆದರೆ, ಕಾರ್ತಿಕ್ ಹೆಚ್ಚು ಆಡಲಿಲ್ಲ. 33 ರನ್ ಗಳಿಸಿದ ಅವರು 36ನೇ ಓವರ್‌ನಲ್ಲಿ ರನೌಟ್ ಆಗಿ ಹೊರನಡೆದರು. ಅವರ ನಂತರ ಬಂದ ಸ್ಟುವರ್ಟ್ ಬಿನ್ನಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಲ್ಲಲಿಲ್ಲ. 41ನೇ ಓವರ್‌ನಲ್ಲಿ ಬಿನ್ನಿ ಔಟಾದ ಮೇಲೆ, ಅಪರಾಜಿತ್ ಕೂಡ ಪೆವಿಲಿಯನ್‌ಗೆ ಮರಳಿಸಿದರು.  ಆಗ, ಕ್ರೀಸ್‌ನಲ್ಲಿ ಜೊತೆಯಾಗಿದ್ದು ಸಿ.ಎಂ. ಗೌತಮ್ ಹಾಗೂ ಕೇರಳ ತಂಡದ ನಾಯಕ ಸಚಿನ್ ಬೇಬಿ. ಈ ಇಬ್ಬರೂ, 5ನೇ ವಿಕೆಟ್‌ಗೆ 21 ರನ್ ಸೇರಿಸಿ ಬೇರ್ಪಟ್ಟರು.
ಆಗ, ಸಚಿನ್‌ಗೆ ಜೋಡಿಯಾದ ವಿನಯ್ ಕುಮಾರ್, ತಂಡದ ಮೊತ್ತವನ್ನು 284 ರನ್‌ವರೆಗೆ ಕೊಂಡೊಯ್ದರು. 19 ಎಸೆತಗಳಲ್ಲಿ 33 ರನ್ ಗಳಿಸಿದ ಸಚಿನ್ ಹಾಗೂ ವಿನಯ್ (12) ಅಜೇಯರಾಗಿ ಉಳಿದರು.
ಮಿಂಚಿನ ಮಿಥುನ್: ಗೆಲುವಿಗಾಗಿ ಒಟ್ಟು 285 ರನ್‌ಗಳ ಗುರಿಯನ್ನು ಪಡೆದ ಪೂರ್ವ ವಲಯಕ್ಕೆ ಅಭಿಮನ್ಯು ಮಿಥುನ್ ಮೊದಲ ಪೆಟ್ಟು ನೀಡಿದರು. ತಂಡದ ಮೊತ್ತ ಕೇವಲ 21 ರನ್ ಆಗಿದ್ದಾಗಲೇ ಆರಂಭಿಕ ಪಲ್ಲವಕುಮಾರ್ ದಾಸ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ ಮಿಥುನ್, ಆನಂತರ, ಮಧ್ಯಮ ಕ್ರಮಾಂಕದ ವೃದ್ಧಿಮಾನ್ ಸಾಹಾ (77) ಹಾಗೂ ಸಮಾಂತ್ರೇ (0) ವಿಕೆಟನ್ನೂ ಕಬಳಿಸಿದರು.
ಇವರ ದಾಳಿಗೆ ಕೈ ಜೋಡಿಸಿದ ಅಪರಾಜಿತ್ ಆರಂಭಿಕ ರಾಯ್ ಅವರ ವಿಕೆಟ್ ಕೆಡವಿದರೆ, ಸುಧಾಕರ್ ಅವರು ಶಮಿ ಅಹ್ಮದ್ ಅವರ ವಿಕೆಟ್ ಕಬಳಿಸಿದರು. ಇನ್ನು, ರನ್ ಗಳಿಸುವ ಭರದಲ್ಲಿ ಮೂರನೇ ಕ್ರಮಾಂಕದ ಜಗ್ಗಿ (55), ಪೊದ್ದೆರ್ (20) ರನೌಟ್ ಆಗಿದ್ದು ಪೂರ್ವ ವಲಯದ ಹಿನ್ನಡೆಗೆ ಕಾರಣವಾಯಿತು.
ಅಂತಿಮ ಓವರ್‌ಗಳಲ್ಲಿ ಗೋಕುಲ್ ಶರ್ಮಾ (ಅಜೇಯ 40) ಹಾಗೂ ಅಬು ಅಹ್ಮದ್ (ಅಜೇಯ 26), ತಂಡಕ್ಕೆ ಜಯ ತಂದುಕೊಡುವಲ್ಲಿ ಸತತ ಪ್ರಯತ್ನ ನಡೆಸಿದರಾದರೂ, ಅದು ಸಾಧ್ಯವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್:
ದಕ್ಷಿಣ ವಲಯ: 284/5 (50 ಓವರ್)
ಅಪರಾಜಿತ್ 121 (129), ಉತ್ತಪ್ಪ 48 (75)
ಬೌಲಿಂಗ್: ಶಮಿ ಅಹ್ಮದ್ 60/2, ಮೊಹಾಂತಿ 35/1
ಪೂರ್ವ ವಲಯ: 272/7 (50 ಓವರ್)
ವೃದ್ಧಿಮಾನ್ ಸಾಹಾ 77 (72), ಜಗ್ಗಿ 55 (67)
ಬೌಲಿಂಗ್: ಅಭಿಮನ್ಯು ಮಿಥುನ್ 40/3, ಅಪರಾಜಿತ್ 26/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement