Formula 1 ಪೈಪೋಟಿ
ಆಸ್ಟ್ರೇಲಿಯಾದಲ್ಲಿ 2013ರ ಋತುವಿನ ಮೊದಲ ಫಾರ್ಮುಲಾ 1 ರೇಸ್ ಮಾ.15ರಿಂದ ಆರಂಭ.
ಮಿಂಚಿನ ವೇಗ, ಚಾಲಕರ ಚಾಕಚಕ್ಯತೆ, ತಾರೆಗಳ ಸಮಾಗಮ, ಬೆಡಗಿಯರ ಸೊಬಗು, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುವ ಕುತೂಹಲ ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವ ಫಾರ್ಮುಲಾ- 1 ರೇಸ್ ಮತ್ತೆ ಅಭಿಮಾನಿಗಳಲ್ಲಿ ಕಿಚ್ಚು ಹಚ್ಚಿಸಲು ವೇದಿಕೆ ಸಜ್ಜಾಗುತ್ತಿದೆ.
ಕಳೆದ ನವೆಂಬರ್ನಲ್ಲಿ ಗ್ರ್ಯಾನ್ ಪ್ರಿ ಅಂತ್ಯಗೊಂಡ ನಂತರ ತಣ್ಣಗಾಗಿದ್ದ ಅಭಿಮಾನಿಗಳು, ಈಗ ಮತ್ತೆ ಆ ರೋಚಕ ಕ್ಷಣಗಳನ್ನು ಅನುಭವಿಸಲು ಕಾತರದಿಂದ ಎದುರು ನೋಡುತ್ತಿದ್ದಾರೆ. ಮಾ.15ರಿಂದ ಮಾ.17ರವರೆಗೆ ಆಸ್ಟ್ರೇಲಿಯಾದಲ್ಲಿ 2013ರ ಋತುವಿನ ಮೊದಲ ರೇಸ್ ಆರಂಭವಾಗುತ್ತಿದ್ದು, ಈ ಮೂಲಕ ಪ್ರಸಕ್ತ ಸಾಲಿನ ರೋಚಕ ಕ್ಷಣಗಳಿಗೆ ನಾಂದಿಯಾಗಲಿದೆ.
ಈ ವರ್ಷ ಒಟ್ಟು 20 ರೇಸ್ಗಳು. ಮಾರ್ಚ್ನಿಂದ ನವೆಂಬರ್ವರೆಗೆ ಫಾರ್ಮುಲಾ-1ರದ್ದೇ ಸದ್ದು. ಋತುವಿನ 17ನೇ ರೇಸ್ ಭಾರತದಲ್ಲಿ ಅಕ್ಟೋಬರ್ 25ರಿಂದ 27ರ ವರೆಗೆ ನಡೆಯುತ್ತಿರೋದು ಇನ್ನೊಂದು ಖುಷಿಯ ಸಂಗತಿ.
ಈ ಬಾರಿಯೂ ವಿಶ್ವದ ಖ್ಯಾತ ರೇಸರ್ಗಳು ಪಾಲ್ಗೊಳ್ಳುತ್ತಾರೆ. ಫಾರ್ಮುಲಾ-1ರ ತಾರೆ ಮೈಕಲ್ ಶೂಮಾಕರ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದು ಈ ಋುತುವಿನಿಂದ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ಕೋಟ್ಯಂತರ ಅಭಿಮಾನಿಗಳಿಗೆ ಒಂಥರಾ ನಿರಾಶೆ. ಆದರೂ ಹ್ಯಾಟ್ರಿಕ್ ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್, ಲಿವಿ ಹ್ಯಾಮಿಲ್ಟನ್, ವೆಬರ್, ಅಲಾನ್ಸೋ, ಬಟನ್ರಂಥ ಖ್ಯಾತ ರೇಸರ್ಗಳು ಅಮೋಘ ಮನರಂಜನೆ ನೀಡಲಿದ್ದಾರೆ.
ಸಹರಾ ಮೇಲೆ ನಿರೀಕ್ಷೆ
ಎಫ್1ನಲ್ಲಿ ಬಲಿಷ್ಠವಾಗಿರುವ ಫೆರಾರಿ, ಮರ್ಸಿಡಿಸ್, ರೆಡ್ಬುಲ್ನಂಥ ತಂಡಗಳ ನಡುವೆ ಭಾರತದ ಸಹರಾ ಫೋರ್ಸ್ ಇಂಡಿಯಾ ಪ್ರತಿ ವರ್ಷವೂ ಉತ್ತಮ ಸಾಧನೆಯೊಂದಿಗೆ ಮೇಲೇಳುತ್ತಲೇ ಇದೆ. ಕಳೆದ ಋುತುವಿನಲ್ಲಿ 109 ಅಂಕಗಳೊಂದಿಗೆ 7ನೇ ಸ್ಥಾನಕ್ಕೇರಿದ್ದ ಸಹರಾ, ಈ ಬಾರಿ ಯಾವ ರೀತಿಯ ಪ್ರದರ್ಶನ ಮಾಡುತ್ತದೋ ಗೊತ್ತಿಲ್ಲ. ಸಹರಾ ತಂಡದಲ್ಲಿದ್ದ ನಿಕೊ ಹಲ್ಕೆನ್ಬರ್ಗ್ ಈ ಸಾಲಿನಲ್ಲಿ ಸೌಬರ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿ 46 ಅಂಕಗಳೊಂದಿಗೆ 14ನೇ ಸ್ಥಾನದಲ್ಲಿದ್ದ ಪೌಲ್ ಡಿ ರೆಸ್ಟಾ ಜತೆಗೆ ಆ್ಯಡ್ರಿಯಾನ್ ಸುಟಿಲ್ ಮತ್ತೆ ಸಹರಾ ತಂಡಕ್ಕೆ ಮರಳಿ ಕಣಕ್ಕಿಳಿಯಲಿದ್ದಾರೆ.
2008ರಿಂದ 11ರವರೆಗೆ ಸಹರಾ ತಂಡದಲ್ಲಿದ್ದ ಸುಟಿಲ್, 2011ರಲ್ಲಿ ಮಹಿಳೆ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಆರೋಪಕ್ಕೆ ಸಿಲುಕಿದ್ದರು. ಈ ವರ್ಷ ತಂಡಕ್ಕೆ ಮತ್ತೆ ಮರಳಿರುವುದರಿಂದ ತಂಡಕ್ಕೆ ಉತ್ಸಾಹ ಬಂದಿದೆ. ಒಟ್ಟಿನಲ್ಲಿ ಮೂರು ತಿಂಗಳ ಕಾಲ ಬಿಡುವಿನಲ್ಲಿದ್ದ ಅಭಿಮಾನಿಗಳಿಗೆ ಮುಂದಿನ 9 ತಿಂಗಳುಗಳ ಕಾಲ ಸಂಪೂರ್ಣ ರೋಚಕ ಕ್ಷಣಗಳು ಸಿಗಲಿವೆ.
ತಂಡ ಮತ್ತು ಆಟಗಾರರು
ರೆಡ್ ಬುಲ್: ಸೆಬಾಸ್ಟಿಯನ್ ವೆಟ್ಟಲ್, ಮಾರ್ಕ್ ವೆಬರ್
ಫೆರಾರಿ: ಫರ್ನಾಡೊ ಆಲೊನ್ಸೊ, ಫೆಲಿಪ್ ಮಸ್ಸಾ
ಮೆಕ್ಲಾರೆನ್: ಜೆನ್ಸನ್ ಬಟನ್, ಸರ್ಗಿಯೊ ಫೆರೆಜ್
ಲೋಟಸ್: ಕಿಮಿ ರೈಕೊನೆನ್, ರೊಮೈನ್ ಗ್ರೊಸ್ಜೀನ್
ಮರ್ಸಿಡೀಸ್: ನಿಕೊಲ್ ರೋಸ್ಬರ್ಗ್, ಲಿವಿ ಹ್ಯಾಮಿಲ್ಟನ್
ಸೌಬರ್: ನಿಕೊ ಹಲ್ಕೆನ್ಬರ್ಗ್, ಎಸ್ಟೆಬಾನ್ ಗುಟಿರೆಜ್
ಫೋರ್ಸ್ ಇಂಡಿಯಾ: ಪೌಲ್ ಡಿ ರೆಸ್ಟಾ, ಆ್ಯಂಡ್ರಿಯಾನ್ ಸುಟಿಲ್
ವಿಲಿಯಮ್ಸ್: ಪಾಸ್ಟರ್ ಮಲ್ಡೊನಾಲ್ಡೊ, ವಾಲ್ಟೆರಿ ಬೊಟ್ಟಸ್
ಟೊರೊ ರೊಸ್ಸೊ: ಡೇನಿಯಲ್ ರಿಕಿಯಾರ್ಡೊ
ಕ್ಯಾತೆರ್ಹಾಮ್: ಚಾರ್ಲ್ಸ್ ಪಿಕ್, ವ್ಯಾನ್ ಡರ್ ಗಾರ್ಡೆ
ಮರುಸ್ಸಿಯಾ: ಜುಲೆಸ್ ಬೈಂಚಿ, ಮ್ಯಾಕ್ಸ್ ಚಿಲ್ಟನ್.
ಪ್ರಮುಖ ಆಟಗಾರರು
ಸೆಬಾಸ್ಟಿಯನ್ ವೆಟ್ಟಲ್: ರೆಡ್ ಬುಲ್- 3 ಬಾರಿ ಚಾಂಪಿಯನ್, 26 ಜಯ, 46 ಪೋಡಿಯಂ ಫಿನಿಷ್.
ಫರ್ನಾಂಡೊ ಆಲಾನ್ಸೋ: ಫೆರಾರಿ- 2 ಬಾರಿ ಚಾಂಪಿಯನ್, 30 ಜಯ, 86 ಪೋಡಿಯಂ ಫಿನಿಷ್.
ಲೀವಿಸ್ ಹ್ಯಾಮಿಲ್ಟನ್: ಮರ್ಸಿಡೀಸ್- 1 ಬಾರಿ ಚಾಂಪಿಯನ್, 21 ಜಯ, 49 ಪೋಡಿಯಂ ಫಿನಿಷ್.
ಕಿಮಿ ರೈಕೋನೆನ್: ಲೋಟಸ್ ರೆನಾಲ್ಟ್- 1 ಬಾರಿ ಚಾಂಪಿಯನ್, 19 ಜಯ, 69 ಪೋಡಿಯಂ ಫಿನಿಷ್.
ಜೆನ್ಸನ್ ಬಟನ್: ಮೆಕ್ಲಾರೆನ್- 1 ಬಾರಿ ಚಾಂಪಿಯನ್, 15 ಜಯ, 49 ಪೋಡಿಯಂ ಫಿನಿಷ್.
- ಸೋಮಶೇಖರ ಪಿ. ಭದ್ರಾವತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.