ಆಡಳಿತ ಮಂಡಳಿ ನಿರ್ಧಾರಕ್ಕೆ ಸಿಎ ಬೆಂಬಲ
ಮೆಲ್ಬರ್ನ್: ವಿಶ್ವ ಕ್ರಿಕೆಟ್ ವಲಯದಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಚಿಂತಕರು ಆಸ್ಟ್ರೇಲಿಯಾ ತಂಡದಿಂದ ನಾಲ್ವರು ಆಟಗಾರರನ್ನು ಅಮಾನತು ಮಾಡಿದ ನಿರ್ಧಾರವನ್ನು ಪ್ರಶ್ನಿಸಿರಬಹುದು, ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಮಾತ್ರ ತಂಡದ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ತಂಡದ ಆಡಳಿತ ಮಂಡಳಿ ಜತೆಗೆ ಟೆಲಿಕಾನ್ಫರೆನ್ಸ್ ಮೂಲಕ ಆಟಗಾರರ ಅಮಾನತ್ತಿನ ನಿರ್ಧಾರದ ಪ್ರಮುಖ ಮಾಹಿತಿಯನ್ನು ಪಡೆದ ಕ್ರಿಕೆಟ್ ಆಸ್ಟ್ರೇಲಿಯಾ, ನಂತರ ಆಡಳಿತ ಮಂಡಳಿ ಸರಿಯಾದ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ.
ನಾವು ಈ ವಿಷಯದ ಕುರಿತು ಆಡಳಿತ ಮಂಡಳಿಯಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಟೆಲಿಕಾನ್ಫರೆನ್ಸ್ನಲ್ಲಿ ಕ್ರಿಕೆಟ್ ಮಂಡಳಿಯ ಸದಸ್ಯರು ಆಡಳಿತ ಮಂಡಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು, ಆಡಳಿತ ಮಂಡಳಿಯಿಂದ ಮಾಹಿತಿ ಪಡೆಯಲಾಯಿತು. ಆನಂತರ ಚರ್ಚೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾದ ಸದಸ್ಯರು, ಆಡಳಿತ ಮಂಡಳಿ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಬೆಂಬಲ ವ್ಯಕ್ತಪಡಿಸಲಾಯಿತು ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ವ್ಯಾಲ್ಲಿ ಎಡ್ವರ್ಡ್ಸ್ ತಿಳಿಸಿದರು.
ತಂಡದಿಂದ ಅಮಾನತುಗೊಂಡಿರುವ ನ್ವಾಲ್ವರು ಆಟಗಾರರಲ್ಲಿ ಮೂವರು ಆಟಗಾರರು ತಂಡದ ಸದಸ್ಯರೊಂದಿಗೆ ಇದ್ದು, ಆಲ್ರೌಂಡರ್ ಶೇನ್ ವಾಟ್ಸನ್ ತವರಿಗೆ ಮರಳಿದ್ದಾರೆ.
ಪ್ಯಾಟಿನ್ಸನ್, ವಾಟ್ಸನ್ ತಪ್ಪೊಪ್ಪಿಗೆ: ಆಸ್ಟ್ರೇಲಿಯಾ ತಂಡದ ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾದರೂ ಅಮಾನತುಗೊಂಡ ಆಟಗಾರರಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಹಾಗೂ ಶೇನ್ ವ್ಯಾಟ್ಸನ್ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ನನ್ನ ಅಗೌರವದ ವರ್ತನೆಗಾಗಿ ಈ ಕ್ರಮ ಜರುಗಿಸಲಾಗಿದ್ದು, ನಾನು ಶಿಕ್ಷೆಗೆ ಅರ್ಹ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ. ನಮ್ಮ ವರ್ತನೆ ಕೋಚ್ ಸೇರಿದಂತೆ ನಾಯಕ ಹಾಗೂ ಈಡೀ ತಂಡದ ಮೇಲೆ ನಮಗಿರುವ ಅಗೌರವವನ್ನು ತೋರಿಸುತ್ತದೆ. ಒಂದು ವೇಳೆ ನಾನು ತಂಡದ ಸದಸ್ಯನಾಗಿ ಅವರ ಜಾಗದಲ್ಲಿದ್ದರೆ, ನಾನು ಕೂಡ ಬೇಸರಗೊಳ್ಳುತ್ತಿದೆ ಎಂದು ಪ್ಯಾಟಿನ್ಸನ್ ಆಸೀಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಕಠಿಣ ನಿರ್ಧಾರದ ಬಗ್ಗೆ ಜನ ಮಾತನಾಡುತ್ತಾರೆ ಆದರೆ ವಿಷಯವನ್ನು ಆಳವಾಗಿ ಅವಲೋಕಿಸಿದರೆ ನಿಜವಾದ ಅಂಶ ತಿಳಿಯಬಹುದು. ನೀವು ಆಸ್ಟ್ರೇಲಿಯಾ ತಂಡದ ಸದಸ್ಯನಾಗಿರಬೇಕಾದರೆ ಎಲ್ಲಾ ವಿಷಯದಲ್ಲೂ ಸರಿಯಾಗಿರಬೇಕು. ಹಾಗಾಗಿ ಇದು ಸರಿಯಾದ ನಿರ್ಧಾರ ಎಂದು ಪ್ಯಾಟಿನ್ಸನ್ ತಿಳಿಸಿದ್ದಾರೆ.
ನಾನು ತಪ್ಪು ಮಾಡಿರುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ನನ್ನ ದೇಶಕ್ಕಾಗಿ ಆಡುವಾಗ ಟೆಸ್ಟ್ ತಂಡದಿಂದ ಅಮಾನತು ಮಾಡಿರುವುದನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ತವರಿಗೆ ಮರಳಿದ ಶೇನ್ ವಾಟ್ಸನ್ ತಿಳಿಸಿದರು. ನಾನು ಗಾಯದ ಸಮಸ್ಯೆಯಿಂದ ನನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ರಾಷ್ಟ್ರೀಯ ತಂಡಕ್ಕೆ ಆಡಲು ಸಾಕಷ್ಟು ಕಠಿಣ ಪರಿಶ್ರಮ ನೀಡಿದ್ದೇ. ಆದರೆ ಅದನ್ನು ಕಸಿದುಕೊಂಡಾಗ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ವಾಟ್ಸನ್ ತಿಳಿಸಿದರು.
ನಿರ್ಧಾರ ಬೆಂಬಲಿಸಿದ ಬಾಂಡ್: ಅಶಿಸ್ತಿನ ಕಾರಣ ಆಸ್ಟ್ರೇಲಿಯಾ ತಂಡದ ನಾಲ್ವರು ಆಟಗಾರರನ್ನು ಅಮಾನತು ಮಾಡಿರುವ ತಂಡದ ಆಡಳಿತ ಮಂಡಳಿಗೆ ನ್ಯೂಜಿಲೆಂಡ್ನ ಮಾಜಿ ವೇಗಿ ಶೇನ್ ಬಾಂಡ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರದಿಂದ ತಂಡದ ಭವಿಷ್ಯದಲ್ಲಿ ಉತ್ತಮ ಫಲಿತಾಂಶ ಬರಲಿದೆ. ಭಾರತದ ಸರಣಿಯ ನಂತರ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನಾಡಲಿದೆ. ಆಟಗಾರರ ಮೇಲಿನ ಈ ಕಠಿಣ ನಿರ್ಧಾರ ಬಹು ದೀರ್ಘಾವಧಿಯವರೆಗೆ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು. ಭಾರತ ಪ್ರವಾಸದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಆಸೀಸ್ ಹೆಚ್ಚು ಆಘಾತ ಅನುಭವಿಸಿದೆ. ಹೀಗಾಗಿ ತಂಡ ಉತ್ತಮ ಹಾದಿಯಲ್ಲಿ ಸಾಗಲು ತಂಡದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು.
ಮಾಧ್ಯಮಗಳ ಮಿಶ್ರ ಪ್ರತಿಕ್ರಿಯೆ: ಕೋಚ್ ಮಿಕಿ ಆರ್ಥರ್ರ ಈ ನಿರ್ಧಾರವನ್ನು ಕ್ರಿಕೆಟ್ ಪಂಡಿತರು ಟೀಕಿಸಿದರು, ಕೆಲ ರಾಷ್ಟ್ರೀಯ ಮಾಧ್ಯಮಗಳು ಆಸ್ಟ್ರೇಲಿಯಾ ತಂಡದಲ್ಲಿ ಆಟಗಾರರ ಅತಿರೇಕದ ನಿಲುವುಗಳು ವೃತ್ತಿಪರತೆಗೆ ಧಕ್ಕೆಯುಂಟು ಮಾಡುವುದರಿಂದ ಇದು ಉತ್ತಮ ನಿರ್ಧಾರ ಎಂದು ಬೆಂಬಲಿಸಿವೆ.
ವೃತ್ತಿಪರ ಕ್ರೀಡಾಪಟುವಿಗೆ ಮಕ್ಕಳಿಗೆ ನೀಡುವಂತೆ ಶಿಸ್ತಿನ ಕ್ರಮ ಜರುಗಿಸಲು ಹೇಗೆ ಸಾಧ್ಯ? ತಮ್ಮ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಿರುವುದು ಎಷ್ಟು ಸರಿ? ಇದು ಏಪ್ರಿಲ್ ಮುಂಚೆಯೇ ನಮ್ಮನ್ನು ಫೂಲ್ ಮಾಡುವ ಪ್ರಯತ್ನವೇ? ಎಂದು ಮಾಧ್ಯಮಗಳು ಪ್ರಶ್ನಿಸಿವೆ.