ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪಾಕ್‌ ಅಟ್ಟಾಡಿಸಿದ ಭಾರತ

ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಗೋಲುಗಳ...

Mainashree
Updated On : 13 Mar 2013, 12:19 pm

ಐಪೊ (ಮಲೇಷ್ಯಾ): ಆಕ್ರಮಣಕಾರಿ ಪ್ರದರ್ಶನ ನೀಡಿದ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿ, ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲನುಭವಿಸಿದ್ದ ಭಾರತ ಮುಂದಿನ ಸುತ್ತಿಗೆ ಪ್ರವೇಶಿಸುವುದು ಅನಿಶ್ಚಿತವಾಗಿತ್ತು. ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋಲನುಭವಿಸಿದ್ದರೆ, ಲೀಗ್ ಹಂತಕ್ಕೆ ತವರಿಗೆ ಮರಳದೇ ಅನ್ಯ ಮಾರ್ಗವಿರಲಿಲ್ಲ. ಆದರೆ, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಮುಂದಿನ ಹಂತಕ್ಕೆ ಹೋಗುವ ವಿಶ್ವಾಸವನ್ನು ತಂಡ ಉಳಿಸಿಕೊಂಡಿದೆ. ಆದರೆ, ಉಳಿದೆರಡು ಲೀಗ್ ಪಂದ್ಯಗಳಲ್ಲಿ ಅದು ಗೆಲ್ಲುವ ಅಗತ್ಯವಿದೆ.
ಪಂದ್ಯದ 5ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರೂಪಿಂದರ್ ಪಾಲ್ ಸಿಂಗ್, 9ನೇ ನಿಮಿಷದಲ್ಲಿ ಆಕಾಶ್ ದೀಪ್ ಹಾಗೂ 56ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಜಯದ ರೂವಾರಿಗಳೆನಿಸಿದರು. ಆದರೆ, ಎದುರಾಳಿ ಪಾಕಿಸ್ತಾನದ ಪರ ಪಂದ್ಯದ ನಾಲ್ಕನೇ ನಿಮಿಷದಲ್ಲಿ ಮೊಹ್ಮದ್ ವಾಖಸ್ ಮಾತ್ರ ಏಕೈಕ ಗೋಲು ದಾಖಲಿಸಿದರು.
ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಮೂರು ಅಂಕಗಳನ್ನು ಗಳಿಸಿದ ಭಾರತ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಪಂದ್ಯದ ಆರಂಭದಿಂದಲೇ ತೀವ್ರ ಪೈಪೋಟಿ ನಡೆಸಿದ ಏಷ್ಯಾದ ಎರಡು ಬಲಿಷ್ಠ ತಂಡಗಳ ನಡುವೆ ರೋಮಾಂಚನಕಾರಿಯಾಗಿ ನಡೆದ ಪಂದ್ಯಕ್ಕೆ ಅಭಿಮಾನಿಗಳು ಸಾಕ್ಷಿಯಾದರು.
ಪಂದ್ಯದ ರಂಭದ ಕೆಲ ಕ್ಷಣಗಳಲ್ಲಿ ಭಾರತದ ರಕ್ಷಣಾ ವಿಭಾಗದ ಮೇಲೆ ತೀವ್ರ ಒತ್ತಡ ಹೇರಿದ ಪಾಕ್ ಆಟಗಾರರು ಅದ್ಭುತ ಪ್ರದರ್ಶನ ತೋರಿದರು. ಇದರ ಪರಿಣಾಮವೇ 4ನೇ ನಿಮಿಷದಲ್ಲಿ ವಾಖಸ್ ಗೋಲು ದಾಖಲಿಸಲು ಕಾರಣವಾಯಿತು. ಆರಂಭದಲ್ಲೇ ಗೋಲು ದಾಖಲಿಸಿದ್ದ ಪಾಕಿಸ್ತಾನ ಮುನ್ನಡೆ ಕಂಡುಕೊಂಡಿದ್ದು, ಭಾರತ ತಂಡದಲ್ಲಿ ಕೊಂಚ ಆತಂಕ ಮೂಡಿಸಿತ್ತು.
ಆದರೆ, ಭಾರತ ತಕ್ಷಣವೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಟಗಾರರು, ತಿರುಗಿ ಬೀಳುವ ಮೂಲಕ 5 ನಿಮಿಷಗಳಲ್ಲಿ ಎರಡು ಅಮೋಘ ಗೋಲುಗಳನ್ನು ದಾಖಲಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ಜಂಗಾಬಲವನ್ನೇ ಉಡುಗಿಸಿಬಿಟ್ಟರು.

ರೂಪಿಂದರ್ ಪಾಲ್ ಪಂದ್ಯದ 5ನೇ ನಿಮಿಷದಲ್ಲಿ ದೊರಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದರು. ಆಗ ಭಾರತ 1-1 ಅಂತರದಿಂದ ಸಮಬಲ ಸಾಧಿಸಿತ್ತು. ಇದಾಗಿ ನಾಲ್ಕು ನಿಮಿಷಗಳ ನಂತರ ಗೋಲು ದಾಖಲಿಸಿದ ಆಕಾಶ್‌ದೀಪ್ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು.

ಆದರೆ, ಎದುರಾಳಿ ಪಾಕಿಸ್ತಾನ ಪಂದ್ಯದಲ್ಲಿ ಸಿಕ್ಕ 8 ಪೆನಾಲ್ಟಿ ಕಾರ್ನರ್ ವಕಾಶಗಳಲ್ಲಿ ಒಂದರಲ್ಲಿ ಮಾತ್ರ ಗೋಲು ದಾಖಲಿಸುವ ಮೂಲಕ ನೀರಸ ಪ್ರದರ್ಶನ ತೋರಿತು. ಅದ್ಭುತ ಪ್ರದರ್ಶನ ತೋರಿದ ಭಾರತದ ಗೋಲ್ ಕೀಪರ್ ಪಿ. ಆರ್ ಶ್ರೀಜೇಶ್ ಅವರನ್ನು ವಂಚಿಸುವುದು ಪಾಕಿಸ್ತಾನದ ಆಟಗಾರರಿಗೆ ಪಂದ್ಯದಲ್ಲಿ ಕಠಿಣ ಸವಾಲಾಗಿ ಪರಿಣಮಿಸಿತು. ಪಾಕಿಸ್ತಾನಕ್ಕೆ ಗೋಲು ಗಳಿಸಲು ದೊರಕಿದ ಏಳು ಅವಕಾಶಗಳನ್ನು ವಿಫಲಗೊಳಿಸಿದ ಶ್ರೀಜೇಶ್ ಗಮನ ಸೆಳೆದರು.

ಮೊದಲಾರ್ಧ ಪಂದ್ಯ ಮುಕ್ತಾಯವಾದಾಗ ಭಾರತ 2-1 ಗೋಲುಗಳ ಅಂತರದಿಂದ ಮುನ್ನಡೆ ಕಂಡುಕೊಂಡಿದ್ದರು. ದ್ವಿತೀಯಾರ್ಧ ಪಂದ್ಯದಲ್ಲಿ ಪಾಕಿಸ್ತಾನ ತೀವ್ರ ಹೋರಾಟ ನಡೆಸಿತಾದರೂ ಅದಕ್ಕೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.

ಆದರೆ, ಭಾರತದ ಪರ 56ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದ ಮಂದೀಪ್ ಗೋಲುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದರು.

ಬುಧವಾರ ವಿಶ್ರಾಂತಿ ಪಡೆಯಲಿರುವ ಭಾರತ ತಂಡ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ತಂಡ ಮಂಗಳವಾರ ನಡೆದ ಇನ್ನೊಂದು ಪಂದ್ಯದಲ್ಲಿ ಕೊರಿಯಾ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement