ಫೂಂಚಾ ಜಂಪ್
ಈಜು ಬಿಟ್ಟು ಗಾಲ್ಫ್ ಸ್ಟಿಕ್ ಹಿಡಿದವರು ರೆಹಾನ್ ಜಹಾಂಗೀರ್ ಫೂಂಜಾ. ಈಜಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ತವರಾದ ಮಹಾರಾಷ್ಟ್ರದ ಪುಣೆಗೆ ವಾಸ್ತವ್ಯ ಬದಲಿಸಿದ್ದಾರೆ. 'ಬೈಟುಕಾಫಿ'ಗೆ ಫೂಂಚಾ ಮಾತಿಗೆ ಸಿಕ್ಕರು...
ಈಜು ಇವರಿಗೆ ರಾಷ್ಟ್ರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಬ್ಯಾಕ್‌ಸ್ಟ್ರೋಕ್ ಮತ್ತು ಬಟರ್‌ಫ್ಲೈ ವಿಭಾಗಗಳಲ್ಲಿ ಐದು ಬಾರಿ ರಾಷ್ಟ್ರೀಯ ಚಾಂಪಿಯನ್ ಬೇರೆ. ಆರು ಬಾರಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ ಸವ್ಯಸಾಚಿ. 2009ರ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ, 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಒದಗಿಸಿಕೊಟ್ಟಿದ್ದೂ ಅದೇ ಈಜು.
ಇಷ್ಟೆಲ್ಲ ಅವಕಾಶ ಹಾಸಿದ ಈಜನ್ನು ಬಿಟ್ಟು ಇವರು ದಿಢೀರನೆ ಗಾಲ್ಫ್ ಸ್ಟಿಕ್‌ನಲ್ಲಿ ಹೊಸ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾರೆ. ಇದುವರೆಗೂ ಈಜಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ತಮ್ಮ ತವರಾದ ಮಹಾರಾಷ್ಟ್ರದ ಪುಣೆಗೆ ವಾಸ್ತವ್ಯ ಬದಲಿಸಿದ್ದಾರೆ. ಅವರು ರೆಹಾನ್ ಜಹಾಂಗೀರ್ ಫೂಂಜಾ! 'ಬೈಟುಕಾಫಿ'ಯೊಂದಿಗೆ ಮಾತಿಗೆ ಸಿಕ್ಕರು...
ನೀವೇಕೆ ಸ್ಟಿಕ್ ಹಿಡಿದಿರಿ?
ಈಜಿನಿಂದ ನಾನು ಬ್ರೇಕ್ ತೆಗೆದುಕೊಳ್ಳಬೇಕಾಗಿತ್ತು. ಹೀಗಾಗಿ ಗಾಲ್ಫ್ ಆಯ್ಕೆ ಮಾಡಿಕೊಂಡೆ. 6 ತಿಂಗಳ ಹಿಂದೆ ಗಾಲ್ಫ್ ಬಗ್ಗೆ ವಿಚಾರವನ್ನೇ ಮಾಡಿರಲಿಲ್ಲ. ಅಲ್ಲದೆ ಈ ಹಿಂದೆ ಯಾವತ್ತೂ ನಾನು ಗಾಲ್ಫ್ ಆಡಿಲ್ಲ. ಗಾಲ್ಫ್ ಮೈದಾನಕ್ಕೆ ಭೇಟಿಯನ್ನೂ ನೀಡಿರಲಿಲ್ಲ. ಆದರೆ, ಆಪ್ತರಲ್ಲಿ ಕೆಲವರು ನನಗೆ ಗಾಲ್ಫ್ ಆಯ್ಕೆಮಾಡಿಕೊಳ್ಳಲು ಸಲಹೆ ನೀಡಿದರು. ಆಗ ನಾನು ಗಾಲ್ಫ್ ಕೋರ್ಸ್‌ಗೆ ಹೋಗಿ ಸ್ಟಿಕ್ ಹಿಡಿಯಲು ಪ್ರಯತ್ನಿಸಿದೆ. ಯಶಸ್ವಿಯಾಗಬಹುದು ಎನಿಸಿತು. ಈಜಿಗೆ ಗುಡ್‌ಬೈ ಹೇಳಲು ತೀರ್ಮಾನಿಸಿದೆ.
ಈಜು ಬಿಟ್ಟಿದ್ದಕ್ಕೆ ಬೇಸರವಾಗಿದೆಯೇ?
ಈಜಿನಲ್ಲಿ ಪ್ರತಿ ಕ್ಷಣವೂ ಮಹತ್ವದ್ದು, ಹೀಗಾಗಿ ಪ್ರತಿ ಪಂದ್ಯಾವಳಿಯಲ್ಲೂ ನಾವು ಉಸಿರು ಬಿಗಿಹಿಡಿದುಕೊಂಡೇ ಇರಬೇಕಾಗುತ್ತದೆ. ಆದರೆ, ಗಾಲ್ಫ್‌ನಲ್ಲಿ ತುಂಬಾ ಶಾಂತ ಚಿತ್ತರಾಗಿ ವರ್ತಿಸಬೇಕಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಈಜುಕೊಳವನ್ನು ಇಂಚಿಂಚಾಗಿ ಅಳೆದಿದ್ದೇನೆ. ಅಲ್ಲದೆ, ಅರ್ಜುನ್ ಪ್ರಶಸ್ತಿ ಪಡೆಯುವುದರೊಂದಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೇನೆ. ಇಷ್ಟೆಲ್ಲ ಸಾಧನೆ ಮಾಡಿರುವ ನನಗೆ ಈಜನ್ನು ತೊರೆಯಲು ತುಂಬಾ ಬೇಸರವಾಗುತ್ತದೆ. ಆದರೆ, ಕ್ರೀಡಾಪಟುವೊಬ್ಬ ಕೊನೆಯವರೆಗೂ ಒಂದೇ ಕ್ರೀಡೆಯಲ್ಲಿ ಇರಬೇಕು ಎಂಬ ನಿಯಮವೇನೂ ಇಲ್ಲವಲ್ಲಾ.
ಗಾಲ್ಫ್‌ನಲ್ಲಿ ಸಕ್ಸಸ್ ಸಾಧ್ಯವಾ?
ಗಾಲ್ಫ್ ಸಿರಿವಂತರ ಆಟ ಎನ್ನುವುದು ಸಾಮಾನ್ಯ ಮಾತು. ಈ ಕ್ರೀಡೆಯಲ್ಲಿ ಒಂದು ದಿನ ಉತ್ತುಂಗಕ್ಕೇರಿದವರು ನಾಳೆಯೇ ಕಡಿಮೆ ಸಾಧನೆ ಮಾಡಬಹುದು. ಆದರೆ, ನಾನು ಯಶಸ್ಸು ಸಾಧಿಸುತ್ತೇನೆ. ವಿಶ್ವಮಟ್ಟದ ಆಟಗಾರರನ್ನು ಸರಿಗಟ್ಟಿ ನಿಲ್ಲುತ್ತೇನೆ ಎಂಬ ವಿಶ್ವಾಸ ಹೊಂದಿದ್ದೇನೆ. ಆ ವಿಶ್ವಾಸದೊಂದಿಗೆ ನಿತ್ಯ ಗಾಲ್ಫ್ ಕೋರ್ಸ್‌ಗೆ ಹೆಜ್ಜೆ ಇಡುತ್ತಿದ್ದೇನೆ.
ಈಜು- ಗಾಲ್ಫ್‌ಗೆ ಏನು ವ್ಯತ್ಯಾಸ?
6 ತಿಂಗಳಿಂದ ಗಾಲ್ಫ್ ತರಬೇತಿ ಪಡೆಯುತ್ತಿದ್ದೇನೆ. ನಿತ್ಯ 6ರಿಂದ 8 ಗಂಟೆ ಅಭ್ಯಾಸ. ಇದುವರೆಗೂ ಯಾವುದೇ ಸ್ಪರ್ಧೆಯಲ್ಲೂ ಭಾಗವಹಿಸಿಲ್ಲ. ಅಲ್ಲದೆ ಸದ್ಯಕ್ಕೆ ಸ್ಪರ್ಧಿಸುವ ಯೋಚನೆಯೂ ಇಲ್ಲ. ನಾನು ಗಾಲ್ಫ್‌ನಲ್ಲಿ ಸಂಪೂರ್ಣ ಪಳಗಿದ್ದೇನೆ ಎಂದು ಖಚಿತಪಟ್ಟ ನಂತರವೇ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತೇನೆ. ಈಜಿಗಿಂತ ಗಾಲ್ಫ್ ಸುಲಭ ಎನಿಸುತ್ತದೆ. ಈಜಿನಲ್ಲಿ ತುಂಬಾ ಶ್ರಮಪಡಬೇಕು. ಆದರೆ, ಗಾಲ್ಫ್‌ನಲ್ಲಿ ಅಷ್ಟೇನೂ ಕಷ್ಟಪಡುವ ಅಗತ್ಯವಿಲ್ಲ. ಆದರೆ, ಸಾಧ್ಯವಾದಷ್ಟು ಮನಸ್ಸಿನ ಏಕಾಗ್ರತೆ ಕಾಪಾಡಿಕೊಳ್ಳಬೇಕು.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದಿರುವುದೇ ಕಾರಣವಾಯಿತೇ?
2012ರ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ
ಅರ್ಹತೆ ಪಡೆಯದಿರುವುದೇ ಫೂಂಚಾ ಈಜು ಕೊಳ ಬಿಟ್ಟು ಗಾಲ್ಫ್ ಬಿಲ ಸೇರಿಕೊಳ್ಳಲು ಕಾರಣ ಎನ್ನುವ ವದಂತಿಗಳೂ ಇವೆ. ಆದರೆ, ಹಾಗಂತ ಫೂಂಚಾ ಒಪ್ಪಿಕೊಳ್ಳುವುದಿಲ್ಲ. ಈ ಕಾರಣ ಇದ್ದರೂ ಇರಬಹುದು. ಏಕೆಂದರೆ, 2008ರ ಬೀಜಿಂಗ್ ಒಲಿಂಪಿಕ್ಸ್ ನಂತರ ರೆಹಾನ್ ಫೂಂಚಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಸಾಧನೆ ಅಷ್ಟಕ್ಕಷ್ಟೆ. ಹೀಗಾಗಿ ಅವರು ಈಜು ಬಿಟ್ಟು ಗಾಲ್ಫ್ ಸ್ಟಿಕ್ ಹಿಡಿದಿರಬಹುದು.
- ಮಲ್ಲಿಕಾರ್ಜುನ ಕರಿಯಪ್ಪನವರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.