ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರನ್ ಮಳೆಗೆ ಡ್ರಾ ಬ್ರೇಕ್

Mainashree
Updated On : 13 Mar 2013, 12:20 pm

ಗಾಲೆ: ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಹೆಚ್ಚಾದ ಹಿನ್ನಲೆಯಲ್ಲಿ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ.
ಈ ಪಂದ್ಯದಲ್ಲಿ ಎರಡೂ ತಂಡದ ಬ್ಯಾಟ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದ್ದು, ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು. ಪಂದ್ಯದ ಮೊದಲ ದಿನದಿಂದ ಅಂತಿಮ ದಿನದವರೆಗೂ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲವಾದ ಹಿನ್ನಲೆಯಲ್ಲಿ ಪಂದ್ಯ ನಿರೀಕ್ಷಿತ ಡ್ರಾ ಫಲಿತಾಂಶ ಕಂಡಿತು.

ಮೊದಲು ಬ್ಯಾಟಿಂಗ್ ನಡೆಸಿದ ಆತಿಥೇಯ ಶ್ರೀಲಂಕಾ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 570 ರನ್‌ಗಳಿಸಿ ತಮ್ಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ನಂತರ ಬಾಂಗ್ಲಾದೇಶ ತಂಡ ತಮ್ಮ ಮೊದಲ ಇನಿಂಗ್ಸ್‌ನಲ್ಲಿ 638 ರನ್‌ಗಳಿಸುವ ಮೂಲಕ 68ರನ್ ಮುನ್ನಡೆ ಸಾಧಿಸಿ ಉತ್ತಮ ಪ್ರತಿರೋಧ ನೀಡಿತ್ತು.
ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಐದನೇ ದಿನ ಎರಡನೇ ಅವಧಿಯ ಅಂತ್ಯದಲ್ಲಿ 335ರನ್‌ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ 267 ರನ್‌ಗಳ ಗುರಿ ನೀಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ದಿನಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 70 ರನ್‌ಗಳಿಸಿತು.

ಸಂಗಕ್ಕಾರ, ದಿಲ್ಷಾನ್ ಶತಕ: ನಾಲ್ಕನೇ ದಿನಾಂತ್ಯಕ್ಕೆ ಶ್ರೀಲಂಕಾ ತಂಡ 1 ವಿಕೆಟ್ ಕಳೆದುಕೊಂಡು 116 ರನ್‌ಗಳಿಸಿತ್ತು. ದಿಲ್ಷಾನ್ ಅಜೇಯ 63 ಹಾಗೂ ಸಂಗಕ್ಕಾರ ಅಜೇಯ 49 ರನ್‌ಗಳೊಂದಿಗೆ ತಮ್ಮ ಬ್ಯಾಟಿಂಗ್ ಅನ್ನು ಐದನೇ ದಿನಕ್ಕೆ ಕಾಯ್ದಿರಿಸಿದರು.
ಐದನೇ ದಿನ ಬ್ಯಾಟಿಂಗ್ ಮುಂದುವರಿಸಿದ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ತಮ್ಮ ಉತ್ತಮ ಜತೆಯಾಟವನ್ನು ಮುಂದುವರಿಸಿ ತಮ್ಮ ಶತಕಗಳನ್ನು ಪೂರೈಸಿಕೊಂಡರು. ದಿಲ್ಷಾನ್ 126 ರನ್‌ಗಳಿಸಿದರೆ, ಸಂಗಕ್ಕಾರ 105 ರನ್‌ಗಳಿಸಿದರು. ಈ ವೇಳೆ ಮಹಮದ್ದುಲ್ಲಾ ಎಸೆತದಲ್ಲಿ ಜಹುರುಲ್‌ಗೆ ಕ್ಯಾಚ್ ನೀಡಿದ ಸಂಗಕ್ಕಾರ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

ಇದಾದ ಕೆಲ ಹೊತ್ತಿನಲ್ಲೇ ಶತಕಗಳಿಸಿದ್ದ ದಿಲ್ಷಾನ್ ಕೂಡ ಮಹಮದ್ದುಲ್ಲಾ ಎಸೆತದಲ್ಲಿ ಅಬುಲ್ ಹಸನ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ವಿತಂಗೆ 59 ರನ್‌ಗಳಿಸಿ ಮಹಮದ್ದುಲ್ಲಾ ಎಸೆತದಲ್ಲಿ ಬೌಲ್ಡ್ ಆದರು. ಆಮೇಲೆ ಜತೆಯಾದ ನಾಯಕ ಆ್ಯಂಜಲೊ ಮ್ಯಾಥ್ಯೂಸ್ ಅಜೇಯ 38 ಹಾಗೂ ತಿರಿಮನ್ನೆ ಅಜೇಯ 2ರನ್‌ಗಳಿಸಿದರು. ಈ ವೇಳೆ ನಾಯಕ ಮ್ಯಾಥ್ಯೂಸ್ ತಮ್ಮ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಆರಂಭಿಕ ಆಘಾತ ಎದುರಿಸಿತು. ತಂಡದ ಮೊತ್ತ ಕೇವಲ 2ರನ್ ಆಗಿದ್ದಾಗ, 1 ರನ್‌ಗಳಿಸಿದ್ದ ಅನಾಮುಲ್ ಹಕ್ ಎರಾಂಗ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಆತಂಕ ಮೂಡಿಸಿದರು. ನಂತರ ಜತೆಯಾದ ಜಹುರುಲ್ ಇಸ್ಲಾಂ ಹಾಗೂ ಮಹಮದ್ ಅಶ್ರಫುಲ್ ಮುರಿಯದ 68 ರನ್‌ಗಳ ಜತೆಯಾಟವಾಡುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. ಜಹುರುಲ್ ಅಜೇಯ 41 ರನ್‌ಗಳಿಸಿದರೆ, ಅಶ್ರಫುಲ್ ಅಜೇಯ 22 ರನ್‌ಗಳಿಸಿದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ ಪ್ರಥಮ ಇನಿಂಗ್ಸ್ 570/4 ಡಿ
ಬಾಂಗ್ಲಾದೇಶ ಪ್ರಥಮ ಇನಿಂಗ್ಸ್ 638/10
ಶ್ರೀಲಂಕಾ ಎರಡನೇ ಇನಿಂಗ್ಸ್ 335/4 ಡಿ
ದಿಲ್ಷಾನ್ 126
ಸಂಗಾಕ್ಕಾರ 105
ಬೌಲಿಂಗ್: ಮಹಮದ್ದುಲ್ಲಾ 70/3, ಹೊಸೈನ್ 33/1
ಬಾಂಗ್ಲಾದೇಶ ಎರಡನೇ ಇನಿಂಗ್ಸ್ 70/1
ಜಹುರುಲ್ ಅಜೇಯ 41
ಅಶ್ರಫುಲ್ ಅಜೇಯ 22
ಬೌಲಿಂಗ್: ಎರಾಂಗ 10/1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement