ಹಿಂದುಸ್ತಾನ್ ಎಫ್‌ಸಿಗೆ ಸೋಲು
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಹಿಂದುಸ್ತಾನ್ ಎಫ್‌ಸಿ ತಂಡ ಕಾಲಿಘಾಟ್ ವಿರುದ್ಧ 0-1 ಗೋಲಿನ ಅಂತರದಿಂದ ಸೋಲನುಭವಿಸಿತು. ಪಂದ್ಯದ 50ನೇ ನಿಮಿಷದಲ್ಲಿ ಕಾಲಿಘಾಟ್ ಪರ ಜೇಮ್ಸ್ ಜಿಬಿಲೀ ಗೋಲು ದಾಖಲಿಸಿದರು.
ತೀವ್ರ ಹಣಾಹಣಿಯಿಂದ ನಡೆದ ದಿನದ ಇನ್ನೊಂದು ಪಂದ್ಯದಲ್ಲಿ ಮುಂಬೈ ಟೈಗರ್ಸ್ ಮತ್ತು ಈಗಲ್ಸ್ ತಂಡಗಳು 1-1 ಗೋಲಿನಿಂದ ಡ್ರಾ ಸಾಧಿಸಿದವು. ಪಂದ್ಯದ 79ನೇ ನಿಮಿಷದಲ್ಲಿ ಮುಂಬೈ ಟೈಗರ್ಸ್ ತಂಡದ ದೆಂಬಾ ದಿಖತೆ ಗೋಲು ದಾಖಲಿಸಿದರೆ, ಈಗಲ್ ಪರ ಪಂದ್ಯದ 73ನೇ ನಿಮಿಷದಲ್ಲಿ ಬ್ರಿಟ್ಟೋ ಪಿ.ಎಂ ಗೋಲು ದಾಖಲಿಸಿದರು. ಈಗಲ್ ಪರ ಆಡಿದ ಸ್ಥಳೀಯ ಆಟಗಾರ ಸೂಜಿ ಕುಮಾರ್ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಸೂಜಿ ಕುಮಾರ್‌ಗೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಬುಧವಾರ ಒಂದು ಪಂದ್ಯ ಮಾತ್ರ ನಡೆಯಲಿದ್ದು, ಸ್ಥಳೀಯ ಸೌಥ್ ಯುನೈಟೆಡ್ ಮತ್ತು ವಾಸ್ಕೋ ನಡುವೆ ನಡೆಯಲಿದೆ. ಸಂಜೆ 4 ಗಂಟೆಯಿಂದ ಪಂದ್ಯ ನಡೆಯಲಿದೆ.