ಪ.ವಲಯ ಚಾಂಪಿಯನ್
ಗುವಾಹತಿ: ಉತ್ತಮ ಬ್ಯಾಟಿಂಗ್ ಪ್ರದರ್ಶನದ ಸಹಾಯದಿಂದ ಪಶ್ಚಿಮ ವಲಯವು ಇಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ದೇವ್‌ಧರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ. ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಉತ್ತರ ವಲಯದ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಪಶ್ಚಿಮ ವಲಯ ಈ ವರ್ಷ ಚಾಂಪಿಯನ್ ಆಗಿ ಹೊರ ಹೊಮ್ಮಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆಮಾಡಿಕೊಂಡ ಪಶ್ಚಿಮ ವಲಯ, ಉತ್ತರ ವಲಯಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಅವಕಾಶವನ್ನು ಬಳಸಿಕೊಂಡ ಉತ್ತರ ವಲಯ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 289 ರನ್‌ಗಳಿಸಿತು.
ಉತ್ತರ ವಲಯಕ್ಕೆ ಆರಂಭಿಕರಾದ ಉನ್ಮುಕ್ತ್ ಚಂದ್ ಹಾಗೂ ಮದನ್ 59 ರನ್‌ಗಳ ಸಾಧಾರಣ ಆರಂಭ ನೀಡಿದರು. ಈ ವೇಳೆ 17 ರನ್‌ಗಳಿಸಿದ್ದ ಮದನ್ ಅಭಿಶೇಕ್ ನಾಯರ್ ಎಸೆತದಲ್ಲಿ ಪಾರ್ಥೀವ್ ಪಟೇಲ್‌ಗೆ ಕ್ಯಾಚ್ ನೀಡಿದರು. ನಂತರ ಬಂದ ಗಂಭೀರ್ ಕೂಡ9 ರನ್‌ಗಳಿಸಿ ಧ್ರುವ್‌ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಜತೆಯಾದ ಚಂದ್ ಹಾಗೂ ಯುವರಾಜ್ ಸಿಂಗ್ 120 ರನ್‌ಗಳ ಉತ್ತಮ ಜತೆಯಾಟ ನೀಡಿ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೋಯ್ದರು. ಈ ವೇಳೆ 52 ಎಸೆತಗಳಲ್ಲಿ 67 ರನ್‌ಗಳಿಸಿದ್ದ ಯುವರಾಜ್ ಸಿಂಗ್ ಮುನಾಫ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಚಂದ್ 124 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 88 ರನ್ ಗಳಿಸಿ ಉನಾದ್ಕತ್‌ಗೆ ವಿಕೆಟ್ ನೀಡಿದರು. ನಂತರ ಕೆಳ ಕ್ರಮಾಂಕದಲ್ಲಿ ಬಂದ ಗೋನಿ ಅಜೇಯ 32 ಹಾಗೂ ಕೌಲ್ ಅಜೇಯ 25 ರನ್‌ಗಳಿಸಿದರು. ಅಂತಿಮವಾಗಿ ಉತ್ತರ ವಲಯ 289 ರನ್ ಕಲೆಹಾಕಿತು.
ಈ ಮೊತ್ತವನ್ನು ಬೆನ್ನಟ್ಟಿದ ಪಶ್ಚಿಮ ವಲಯ 48.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 293 ರನ್‌ಗಳಿಸುವ ಮೂಲಕ ಗೆಲುವಿನ ದಡ ಸೇರಿತು.
ಪಶ್ಚಿಮ ವಲಯದ ಪರ ಪಾರ್ಥೀವ್ ಪಟೇಲ್ 58, ಜುನೇಜಾ 56, ಅಂಬಟಿ ರಾಯುಡು ಅಜೇಯ 78 ಹಾಗೂ ಜಾಧವ್ ಅಜೇಯ 57 ರನ್‌ಗಳಿಸುವ ಮೂಲಕ ಉತ್ತಮವಾಗಿ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿನ ರೂವಾರಿಯಾದರು.
ಸಂಕ್ಷಿಪ್ತ ಸ್ಕೋರ್
ಉತ್ತರ ವಲಯ 289/8 (50 ಓವರ್)
ಉನ್ಮುಕ್ತ್ ಚಂದ್ 88 (124)
ಯುವರಾಜ್ 67 (52)
ಬೌಲಿಂಗ್: ಉನಾದ್ಕತ್ 73/2, ನಾಯರ್ 28/1
ಪಶ್ಚಿಮ ವಲಯ 293/5
(48.2 ಓವರ್)
ರಾಯುಡು ಅಜೇಯ 78 (89)
ಪಾರ್ಥೀವ್ ಪಟೇಲ್ 58 (52)
ಬೌಲಿಂಗ್: ಮಿಶ್ರಾ 63/2, ಗೋನಿ 52/1