ಐಒಸಿ ಜಂಟಿ ಸಭೆಗೆ ಮುಹೂರ್ತ ಫಿಕ್ಸ್
ನವದೆಹಲಿ: ಒಲಿಂಪಿಕ್ಸ್ನಿಂದ ದೇಶದ ಅಮಾನತಿನ ವಿಷಯವನ್ನು ಬಗೆಹರಿಸಿಕೊಳ್ಳುವ ಸಲುವಾಗಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮತ್ತು ಕ್ರೀಡಾ ಸಚಿವಾಲಯ ಜತೆಗೆ ಜಟಿ ಸಭೆ ನಡೆಸಲು ಮುಂದಾಗಿದ್ದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ, ಈ ಸಭೆಗೆ ಸಮಯವನ್ನು ನಿಗದಿಪಡಿಸಿದೆ.
ಏ.11, 12, 13 ಅಥವಾ 16 ರಂದು ಲುಸಾನೆಯಲ್ಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕೇಂದ್ರ ಕಚೇರಿಯಲ್ಲಿ ಜಂಟಿ ಸಭೆಯನ್ನು ನಡೆಸಲು ಐಒಸಿ ನಿರ್ಧರಿಸಿದ್ದು, ಈ ಕುರಿತು ಐಒಸಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಮುಖ್ಯಸ್ಥ ವಿ.ಕೆ ಮಲ್ಹೋತ್ರಾ ಹಾಗೂ ಭಾರತದ ಐಒಸಿ ಸದಸ್ಯ ರಣಿಂಧರ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಮಾ.6 ರಂದು ಬರೆದ ಪತ್ರಕ್ಕೆ ಧನ್ಯವಾದಗಳು. ನಾವು ಏ.11, 12, 13 ಅಥವಾ 16 ರಂದು ಲುಸಾನೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಜಂಟಿ ಸಭೆ ನಡೆಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನೀವು ಕ್ರೀಡಾ ಸಚಿವಾಲಯದ ಜತೆ ಚರ್ಚೆ ನಡೆಸಿ, ಜಂಟಿ ಸಭೆಗೆ ಸೂಕ್ತ ದಿನಾಂಕವನ್ನು ನಿಗದಿಪಡಿಸಿ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಐಒಎಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.