ನ್ಯೂಜಿಲೆಂಡ್ ವಿರುದ್ಧ ಸೋತ ಭಾರತ
ಈ ಬಾರಿಯ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ಫೈನಲ್ ತಲುಪವ ಭಾರತದ ಆಸೆ ಭಗ್ನಗೊಂಡಿದೆ. ಹಾಲಿ ಚಾಂಪಿಯನ್...
ಆಜ್ಲಾನ್ ಶಾ: 4ನೇ ಸೋಲು ಕಾಣುವ ಮೂಲಕ ಫೈನಲ್ ಅವಕಾಶ ವಂಚಿತ
ಐಪೋ: ಈ ಬಾರಿಯ ಆಜ್ಲಾನ್ ಶಾ ಹಾಕಿ ಪಂದ್ಯಾವಳಿಯ ಫೈನಲ್ ತಲುಪವ ಭಾರತದ ಆಸೆ ಭಗ್ನಗೊಂಡಿದೆ. ಹಾಲಿ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ 0-2 ಗೋಲುಗಳ ಅಂತರದಿಂದ ಸೋಲುವ ಮೂಲಕ, ಭಾರತ ಪ್ರಸಕ್ತ ಪಂದ್ಯಾವಳಿಯಲ್ಲಿ ನಾಲ್ಕನೇ ಸೋಲು ದಾಖಲಿಸಿತು.
ಆಜ್ಲಾನ್ ಶಾ ಪಂದ್ಯಾವಳಿಯನ್ನು ಐದು ಬಾರಿ ಗೆದ್ದಿರುವ ಭಾರತ ತಂಡ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿತ್ತು. ಆದರೆ, ಕಿವೀಸ್ ಆಟಗಾರರು ದ್ವಿತೀಯಾರ್ಧದಲ್ಲಿ ಗಳಿಸಿದ ಎರಡು ಗೋಲು, ಭಾರತಕ್ಕೆ ಸೋಲು ತಂದಿತು.
ಪಂದ್ಯದ 40ನೇ ನಿಮಿಷದಲ್ಲಿ, ನ್ಯೂಜಿಲೆಂಡ್ನ ಆ್ಯಂಡಿ ಹೇವರ್ಡ್ ಅವರು, ತಮ್ಮ ತಂಡಕ್ಕೆ ಸಿಕ್ಕ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ತಂದಿತ್ತರು. ಇದಾದ ಬಳಿಕ, ಪಂದ್ಯದ 55ನೇ ನಿಮಿಷದಲ್ಲಿ, ಕೋನಿ ಬೆನೆಟ್ ಅವರು, ಮತ್ತೊಂದು ಗೋಲು ದಾಖಲಿಸಿದರು.
ಈ ಪಂದ್ಯಕ್ಕೂ ಮುನ್ನ ನಡೆದ ಆಸ್ಟ್ರೇಲಿಯಾ ಹಾಗೂ ಕೊರಿಯಾ ವಿರುದ್ಧದ ಪಂದ್ಯ 3-3ರ ಸಮಬಲದಲ್ಲಿ ಡ್ರಾ ಆಗಿತ್ತು. ಆದರೂ, ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆನಂತರದ ಸ್ಥಾನಗಳಲ್ಲಿ, ಮಲೇಷ್ಯಾ (7 ಅಂಕ), ನ್ಯೂಜಿಲೆಂಡ್ (6 ಅಂಕ) ಇವೆ. ಈ ಮೊದಲು ಅಂಕಪಟ್ಟಿಯಲ್ಲಿ ಯಾವುದೇ ಉನ್ನತ ಸ್ಥಾನಗಳಿಸದ್ದ ನ್ಯೂಜಿಲೆಂಡ್, ಭಾರತ ವಿರುದ್ಧದ ಪಂದ್ಯ ಗೆದ್ದ ಮೇಲೆಯೇ ಮೂರನೇ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.
ಪಂದ್ಯದಲ್ಲಿ ಗೋಲು ಗಳಿಸುವ ಅವಕಾಶ ಲಭ್ಯವಾಗಿದ್ದು ನ್ಯೂಜಿಲೆಂಡ್ಗೆ. ಕಿವೀಸ್ ತಂಡದ ಫಾರ್ವರ್ಡ್ ಆಟಗಾರ ಸ್ಟೀಫನ್ ಜೆನ್ನೀಸ್ ಅವರ ಪ್ರಯತ್ನವನ್ನು ಪಿ.ಆರ್. ಶ್ರೀಜೇಶ್ ಅವರು ವಿಫಲಗೊಳಿಸಿದರು. ಇದೊಂದೇ ಅಲ್ಲ, ಪಂದ್ಯದ ಮೊದಲಾರ್ಧದಲ್ಲಿ ನ್ಯೂಜಿಲೆಂಡ್ ತಂಡ, ಮತ್ತೆರಡು ಬಾರಿ ಗೋಲು ಗಳಿಸುವ ಸನಿಹಕ್ಕೆ ಬಂದು ಸೇರಿತ್ತು. ಆದರೆ, ಈ ಎಲ್ಲಾ ಪ್ರಯತ್ನಗಳನ್ನೂ ವ್ಯರ್ಥಗೊಳಿಸಿದ್ದು ಶ್ರೀಜೇಶ್. ಅದರಲ್ಲೂ ವಿಶೇಷವಾಗಿ, ಪಂದ್ಯದ ಮೊದಲಾರ್ಧ ಮುಗಿಯುವ ಮುನ್ನ 10 ನಿಮಿಷಗಳಲ್ಲಿ ಕಿವೀಸ್ ಒಂದರ ಹಿಂದೊಂದರಂತೆ ಗಳಿಸಲು ಯತ್ನಿಸಿದ ಎರಡು ಗೋಲುಗಳನ್ನು ತಡೆಯುವಲ್ಲಿ ಶ್ರೀಜೇಶ್ ಸಫಲರಾದದ್ದು ಅವರಲ್ಲಿನ ಪ್ರತಿಭೆಯನ್ನು ಸಾಬೀತುಪಡಿಸಿತು.
ಇದನ್ನು ಹೊರತುಪಡಿಸಿದಂತೆ, ಉಭಯ ತಂಡಗಳ ಡಿಫೆನ್ಸ್ ಆಟಗಾರರ ಅತ್ಯುತ್ತಮ ಪ್ರದರ್ಶನದಿಂದಾಗಿ, ಎರಡೂ ತಂಡಗಳಿಗೆ ಗೋಲು ಗಳಿಸುವ ಎಲ್ಲಾ ಅವಕಾಶಗಳೂ ವ್ಯರ್ಥಗೊಂಡವು.
ಆದರೆ, ದ್ವಿತೀಯಾರ್ಧದಲ್ಲಿ ನ್ಯೂಜಿಲೆಂಡ್ 40ನೇ ನಿಮಿಷದಲ್ಲಿ ತನ್ನ ಮೊದಲ ಗೋಲು ಗಳಿಸುವ ಮೂಲಕ, 'ಗೋಲುಗಳ ಬರ'ವನ್ನು ನೀಗಿಸಿದರು. 40ನೇ ನಿಮಿಷದಲ್ಲಿ, ತಂಡಕ್ಕೆ ಸಿಕ್ಕಿದ್ದ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಈ ಗೋಲು ಸಾಧ್ಯವಾಗಿಸಿದ್ದು ಹೇವರ್ಡ್.
ಹೀಗೆ, 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್ ವಿರುದ್ಧ ಮುಗಿಬಿದ್ದ ಭಾರತದ ಆಟಗಾರರು ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು. ನಿತಿನ್ ತಿಮ್ಮಯ್ಯ ಹಾಗೂ ಚಿಂಗ್ಲೆಸಾನಾ ಸಿಂಗ್ ಅವರು ಭಾರತಕ್ಕೆ ಗೋಲು ಗಳಿಸಲು ಪ್ರಯತ್ನಿಸಿದರಾದರೂ ಈ ಪ್ರಯತ್ನ ವ್ಯರ್ಥವಾಯಿತು.
ಇದಾದ ನಂತರ, ಭಾರತಕ್ಕೆ ಮತ್ತೊಂದು ಗೋಲು ಗಳಿಸುವ ಅವಕಾಶ ಲಭ್ಯವಾಗಿತ್ತು. ನಿತಿನ್ ತಿಮ್ಮಯ್ಯ ಅವರಿಂದ ಪಡೆದ ಚೆಂಡನ್ನು ಧರಮ್ ವೀರ್ ಸಿಂಗ್ ಅವರು, ಕಿವೀಸ್ ಗೋಲು ಪೆಟ್ಟಿಗೆಯ ಕಡೆಗೆ ಹೊಡೆದರಾದರೂ, ಚೆಂಡು ಗೋಲು ಪೆಟ್ಟಿಗೆಯ ಮೇಲಿನಿಂದ ಹಾರಿ ಹೋಗಿದ್ದರಿಂದ, ಈ ಪ್ರಯತ್ನದಲ್ಲೂ ಭಾರತ ಯಶಸ್ವಿಯಾಗಲಿಲ್ಲ.
ಆನಂತರವೂ, ಪಂದ್ಯದಲ್ಲಿ ಸಮಬಲ ಸಾಧಿಸಲು ಭಾರತದ ಆಟಗಾರರು ಪ್ರಯತ್ನಿಸುತ್ತಲೇ ಸಾಗಿದರು. 52ನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಲಭ್ಯವಾಯಿತು. ರೂಪಿಂದರ್ ಸಿಂಗ್ ಅವರಿಗೆ ಈ ಅವಕಾಶ ನೀಡಲಾಯಿತು. ಆದರೆ, ರೂಪಿಂದರ್ ಅವರ ಹೊಡೆತದಲ್ಲಿ ಸಾಕಷ್ಟು ಮೊನಚು ಇರದ ಕಾರಣ, ಕಿವೀಸ್ ಗೋಲ್ ಕೀಪರ್ ಹ್ಯಾಮಿಶ್ ಮ್ಯಾಕ್ಗ್ರೆಗೋರ್ಗೆ ಗೋಲು ತಪ್ಪಿಸಲು ಸುಲಭ ಸಾಧ್ಯವಾಯಿತು. ನಂತರ, ಧರ್ಮವೀರ್ ಸಿಂಗ್ ಅವರ ಮತ್ತೊಂದು ಗೋಲು ಗಳಿಸುವ ಪ್ರಯತ್ನವನ್ನೂ ಹ್ಯಾಮಿಶ್ ವಿಫಲಗೊಳಿಸಿದರು. ಆದರೆ, ಪಂದ್ಯದ 55ನೇ ನಿಮಿಷದಲ್ಲಿ ಬೆನೆಟ್ ಅವರು ನ್ಯೂಜಿಲೆಂಡ್ ತಂಡದ ಪರವಾಗಿ ಗೋಲು ದಾಖಲಿಸಿದ್ದು, ಪಂದ್ಯವು ಸಂಪೂರ್ಣವಾಗಿ ಭಾರತದ ಕೈ ತಪ್ಪುವಂತೆ ಮಾಡಿತು.