ಆಶಸ್ಗೆ ಸ್ವಾನ್ ಲಭ್ಯ
ವೆಲ್ಲಿಂಗ್ಟನ್: ಇಂಗ್ಲೆಂಡ್ನ ಇನ್ಫಾರ್ಮ್ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ತಮ್ಮ ಬಲ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಶಸ್ತ್ರಚಿಕಿತ್ಸೆ ನಂತರ 2 ತಿಂಗಳ ವಿಶ್ರಾಂತಿ ಪಡೆಯಲಿದ್ದು ಮುಂಬರುವ ಆ್ಯಶಸ್ ಸರಣಿಗೆ ಲಭ್ಯರಾಗುವ ಭರವಸೆ ಹೆಚ್ಚಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ನ ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ತನ್ನ ಮೊಣಕೈನಲ್ಲಿ ಸಮಸ್ಯೆ ಎದುರಾದ ಕಾರಣ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಸ್ವಾನ್ ಹೊರಗುಳಿಯಬೇಕಾಯಿತು. ಈ ಹಿನ್ನಲೆಯಲ್ಲಿ ಸ್ವಾನ್ ಆ್ಯಶಸ್ ಸರಣಿಗೆ ಲಭ್ಯರಾಗುವರೇ ಎಂಬ ಆತಂಕ ಇಂಗ್ಲೆಂಡ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಸ್ವಾನ್ ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, 6-8 ವಾರಗಳ ವಿಶ್ರಾಂತಿಯ ಅಗತ್ಯವಿದೆ. ಆನಂತರ ಆ್ಯಶಸ್ ಸರಣಿಗೂ ಮುನ್ನ ಸ್ವಾನ್ ತಮ್ಮ ಬೌಲಿಂಗ್ಗೆ ಮರಳುತ್ತಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ. 2015ರಲ್ಲಿ ವಿಶ್ವಕಪ್ ಇರುವ ಕಾರಣ ಮುಂಬರುವ 2 ಆವೃತ್ತಿಯ ಆ್ಯಶಸ್ ಸರಣಿಯನ್ನು ಸತತವಾಗಿ ಆಡಲು ನಿರ್ಧರಿಸಿದ್ದು, ಮೊದಲ ಆವೃತ್ತಿ ಜು.10ರಿಂದ ಆರಂಭವಾಗಲಿದೆ. ಇನ್ನು ನಂತರದ ಆವೃತ್ತಿ ನ.21 ರಿಂದ ಆರಂಭವಾಗಲಿದೆ.