ಭಾರತದ ದಾಳಿಗೆ ಮತ್ತೆ ಕುಸಿದ ಆಸೀಸ್
ಆಕರ್ಷಕವಾಗಿ ಇನಿಂಗ್ಸ್ ಆರಂಭಿಸಿದ್ದರೂ, ದಿನದ ಅಂತಿಮ...
ಮೊಹಾಲಿ: ಆಕರ್ಷಕವಾಗಿ ಇನಿಂಗ್ಸ್ ಆರಂಭಿಸಿದ್ದರೂ, ದಿನದ ಅಂತಿಮ ಅವಧಿಯಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ, ಭಾರತ ವಿರುದ್ಧದ ಮೂರನೇ ಟೆಸ್ಟ್ನ ಎರಡನೇ ದಿನವಾದ ಶುಕ್ರವಾರ ಆತಂಕದ ಪರಿಸ್ಥಿತಿಯಲ್ಲಿದೆ.
ದಿನಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಪರವಾಗಿ, ಸ್ಟೀವನ್ ಸ್ಮಿತ್ (58) ಹಾಗೂ ಮಿಚೆಲ್ ಸ್ಟಾರ್ಕ್ (20) ಕ್ರೀಸ್ನಲ್ಲಿದ್ದಾರೆ.
ಶುಕ್ರವಾರದ ದಿನದಾಟದಲ್ಲಿ ಮಿಂಚಿದ ರವೀಂದ್ರ ಜಡೇಜಾ, ಮೂರು ವಿಕೆಟ್ ಕಬಳಿಸಿದರೆ, ಸರಣಿಯಲ್ಲಿ ನಿಧಾನವಾಗಿ ಲಯ ಕಂಡುಕೊಳ್ಳುತ್ತಿರುವ ವೇಗಿ ಇಶಾಂತ್ ಶರ್ಮಾ ಎರಡು ವಿಕೆಟ್ ಕಬಳಿಸಿ, ಆಸೀಸ್ ತಂಡವನ್ನು ಕಂಗಾಲಾಗಿಸಿದರು.
ಉತ್ತಮ ಆರಂಭ: ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಎಡ್ವರ್ಡ್ ಕೋವನ್ ಹಾಗೂ ಡೇವಿಡ್ ವಾರ್ನರ್ ಇಬ್ಬರೂ ಇನಿಂಗ್ಸ್ ಆರಂಭಿಸಿದರು. ಕ್ರೀಸ್ಗೆ ಕಾಲಿಟ್ಟಾಗಿನಿಂದಲೂ ಭಾರತೀಯ ಬೌಲರ್ಗಳ ವಿರುದ್ಧ ಸಮರ ಸಾರಿದ ಈ ಇಬ್ಬರೂ, ಮೊದಲ ವಿಕೆಟ್ಗೆ ಬರೋಬ್ಬರಿ 139 ಸೇರಿಸಿದರು.
ಆರಂಭಿಕರಾಗಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದ ಕೋವನ್, ತಮ್ಮ ವಿರುದ್ಧದ ಟೀಕೆಗಳಿಗೆ ಬ್ಯಾಟ್ನಿಂದಲೇ ಉತ್ತರ ನೀಡುತ್ತಾ ಹೋದರು. ಎಂಟು ಬೌಂಡರಿ ಸೇರಿದಂತೆ 86 ರನ್ಗಳನ್ನು ಗಳಿಸಿದ ಅವರು, ಡೇವಿಡ್ ವಾರ್ನರ್ ಅವರೊಂದಿಗೆ ಇನಿಂಗ್ಸ್ಗೆ ಉತ್ತಮ ಅಡಿಪಾಯ ಹಾಕಿದರು.
ಕ್ರೀಸ್ನಲ್ಲಿ ಅವರಿಗೆ ಉತ್ತಮ ಜೊತೆಯಾಟವಾಡಿದ ವಾರ್ನರ್, 147 ಎಸೆತಗಳಲ್ಲಿ, 9 ಬೌಂಡರಿ ಸಹಿತ 71 ರನ್ ಗಳಿಸಿದರು. ಹೀಗೆ, ತಂಡಕ್ಕೆ ಉತ್ತಮ ಆರಂಭ ಒದಗಿಸಿದ ಕೋವನ್, ಎರಡು ಬಾರಿ ಜೀವದಾನವನ್ನು ಪಡೆದರಾದರೂ, ಶತಕ ಪೂರೈಸಲಾಗಲಿಲ್ಲ.
ಆದರೆ, ಈ ಇಬ್ಬರೂ ನೀಡಿದ್ದ ಉತ್ತಮ ಆರಂಭದ ಸದುಪಯೋಗ ಪಡೆದುಕೊಳ್ಳುವಲ್ಲಿ ಆಸೀಸ್ನ ಉಳಿದ ಬ್ಯಾಟ್ಸ್ಮನ್ಗಳು ವಿಫಲರಾದರು. ಕೊನೆಯ ಎರಡು ಅವಧಿಗಳಲ್ಲಿ ಆಸೀಸ್ ಒಟ್ಟು ಏಳು ವಿಕೆಟ್ಗಳನ್ನು ಕಳೆದುಕೊಂಡಿತು.
ಇನಿಂಗ್ಸ್ನ 48ನೇ ಓವರ್ನಲ್ಲಿ ಕೋವನ್ ಹಾಗೂ ವಾರ್ನರ್ ಇಬ್ಬರ ಜೊತೆಯಾಟ ಮುರಿಯಿತು. ಜಡೇಜಾ ಬೌಲಿಂಗ್ನಲ್ಲಿ ಕೀಪರ್ ಧೋನಿಗೆ ಕ್ಯಾಚ್ ಇತ್ತ, ವಾರ್ನರ್ ಹೊರನಡೆದರು.
ಅವರ ನಂತರ, ಕ್ರೀಸ್ಗೆ ಆಗಮಿಸಿದ್ದು ನಾಯಕ ಮೈಕಲ್ ಕ್ಲಾರ್ಕ್. ಆದರೆ, ಜಡೇಜಾ ಬೌಲಿಂಗ್ನಲ್ಲಿ ಕ್ಲಾರ್ಕ್ ಖಾತೆ ತೆರೆಯದೇ ಸ್ಟಂಪ್ಡ್ ಔಟ್ ಆಗಿ ಹೊರನಡೆದರು. ಅವರ ನಂತರ, ಪೆವಿಲಿಯನ್ಗೆ ತೆರಳುವ ಸರದಿ ಫಿಲಿಪ್ ಹ್ಯೂಸ್ ಅವರದ್ದು. ಪ್ರಗ್ಯಾನ್ ಓಜಾ ಎಸೆತದಲ್ಲಿ ಅವರು, ಧೋನಿ ಅವರಿಗೆ ಕ್ಯಾಚ್ ನೀಡಿ ಹೊರನಡೆದರು.
ಈ ಇಬ್ಬರೂ ಹೊರನಡೆದ ಮೇಲೆ, ಇಶಾಂತ್ ಶರ್ಮಾ ಅವರು, ಬ್ರಾಡ್ ಹ್ಯಾಡಿನ್ ಹಾಗೂ ಮೋಯ್ಸಿಸ್ ಹೆನ್ರೀಕೆಸ್ ಅವರನ್ನು ಕ್ಲೀನ್ಬೌಲ್ಡ್ ಮಾಡಿ ಆಚೆ ಹಾಕಿ, ಭಾರತಕ್ಕೆ ನೆರವಾದರು. ಹೆನ್ರೀಕೆಸ್ ಅವರು ವಿಕೆಟ್ ಒಪ್ಪಿಸಿದಾಗ, ಆಸೀಸ್ನ ಮೊತ್ತ... 244 ರನ್ಗಳಿಗೆ 6 ವಿಕೆಟ್.
ಇಷ್ಟರಲ್ಲಿ ಪುನಃ ಆಕ್ರಮಣಕ್ಕಿಳಿದ ರವೀಂದ್ರ ಜಡೇಜಾ, ಪೀಟರ್ ಸಿಡ್ಲ್ ಅವರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು.
ಸ್ಮಿತ್ ಕೆಚ್ಚೆದೆಯ ಆಟ: ಎರಡು ವರ್ಷಗಳ ನೇಪಥ್ಯದ ನಂತರ, ತಂಡಕ್ಕೆ ಆಗಮಿಸಿದ ಸ್ಮಿತ್ ಅವರು ಭಾರತದ ಬೌಲರ್ಗಳಿಗೆ ದಿಟ್ಟ ಉತ್ತರ ನೀಡುವಲ್ಲಿ ಯಶಸ್ವಿಯಾದರು. ಹ್ಯೂಸ್ ವಿಕೆಟ್ ಪತನಗೊಂಡಾಗ, ಕ್ರೀಸ್ನಲ್ಲಿದ್ದ ಕೋವನ್ ಜೊತೆ ಸೇರಿ, ಇನಿಂಗ್ಸ್ ಭಾರ ಹೊತ್ತ ಸ್ಮಿತ್, ದಿನವಿಡೀ ಭಾರತದ ಬೌಲರ್ಗಳನ್ನು ಕಾಡುತ್ತಾ ಸಾಗಿದರು. ಅದರಲ್ಲೂ, ಇನಿಂಗ್ಸ್ನ 76ನೇ ಓವರ್ನಲ್ಲಿ ಸ್ಲಿಪ್ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಕೋವನ್ ಹೊರನಡೆದ ನಂತರ, ಕ್ರೀಸ್ಗೆ ಕಾಲಿಟ್ಟ ಹ್ಯಾಡಿನ್ ಜೊತೆ ಉತ್ತಮವಾಗಿ ಆಡಿದ 23ರ ಪ್ರಾಯದ ಸೌತ್ ವೇಲ್ಸ್ನ ಬ್ಯಾಟ್ಸ್ಮನ್ ಸ್ಮಿತ್, 5ನೇ ವಿಕೆಟ್ಗೆ 46 ರನ್ ಸೇರಿಸಿದರು. ಆದರೆ, 94ನೇ ಓವರ್ನಲ್ಲಿ ಕ್ಲೀನ್ಬೌಲ್ಡ್ ಮಾಡುವ ಮೂಲಕ ಹ್ಯಾಡಿನ್ ಅವರ ವಿಕೆಟ್ ಉರುಳಿಸಿದರ ಇಶಾಂತ್ ಶರ್ಮಾ, ಭಾರತದ ತಾತ್ಕಾಲಿಕ ವಿಕೆಟ್ ಬರವನ್ನು ನೀಗಿಸಿದರು.
ಆನಂತರ, ಅವರೇ ಹೆನ್ರೀಕೆಸ್ ಅವರ ವಿಕೆಟ್ ಅನ್ನೂ ಕಬಳಿಸಿದರು. ನಂತರ, ಸಿಡ್ಲ್ ಅವರು ಜಡೇಜಾ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು.
ಅಂತಿಮವಾಗಿ, ದಿನಾಂತ್ಯದ ಹೊತ್ತಿಗೆ 273 ರನ್ ಗಳಿಸಿದ ಆಸ್ಟ್ರೇಲಿಯಾ, 7 ವಿಕೆಟ್ಗಳನ್ನು ಕಳೆದುಕೊಂಡು, ಗೆಲ್ಲಲೇಬೇಕಾದ ಪಂದ್ಯದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸ್ಮಿತ್ ಹಾಗೂ ಮಿಚೆಲ್ ಸ್ಟಾರ್ಕ್, ಶನಿವಾರ ಆಸೀಸ್ ಇನಿಂಗ್ಸ್ ಮುಂದುವರೆಸಲಿದ್ದಾರೆ.
ಸ್ಕೋರ್ ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 273/7 (104 ಓವರ್)
ಎಡ್ವರ್ಡ್ ಕೋವನ್ ಸಿ ಕೊಹ್ಲಿ ಬಿ ಅಶ್ವಿನ್ 86, ಡೇವಿಡ್ ವಾರ್ನರ್ ಸಿ ಧೋನಿ ಬಿ ಜಡೇಜಾ 71, ಕ್ಲಾರ್ಕ್ ಸ್ಟಂಪ್ ಧೋನಿ ಬಿ ಜಡೇಜಾ 0, ಫಿಲಿಪ್ ಹ್ಯೂಸ್ ಸಿ ಧೋನಿ ಬಿ ಓಜಾ 2, ಸ್ಮಿತ್ ಅಜೇಯ 58, ಹದಿನ್ ಬಿ ಇಶಾಂತ್ 21, ಹೆನ್ರೀಕೆಸ್ ಬಿ ಇಶಾಂತ್ 0, ಪೀಟರ್ ಸಿಡ್ಲ್ ಎಲ್ಬಿಡಬ್ಲ್ಯೂ ಬಿ ಜಡೇಜಾ 0, ಮಿಚೆಲ್ ಸ್ಟಾರ್ಕ್ ಅಜೇಯ 20. ಇತರೆ 15.
ವಿಕೆಟ್ ಪತನ: 1-139, 2-139, 3-151, 4-198, 5-244, 6-244, 7-251.
ಬೌಲಿಂಗ್: ಭುವನೇಶ್ವರ್ ಕುಮಾರ್ 7-0-38-0, ಇಶಾಂತ್ ಶರ್ಮಾ 21-7-41-2, ರವಿಚಂದ್ರನ್ ಅಶ್ವಿನ್ 33-8-64-1, ಪ್ರಗ್ಯಾನ್ ಓಜಾ 21-4-62-1, ರವೀಂದ್ರ ಜಡೇಜಾ 22-6-56-3.