ಕಾಂಗರೂಗಳ 'ಶಿಖಾರಿ'
ಮೊಹಾಲಿ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಶನಿವಾರ ಸಂಭ್ರಮದ ದಿನ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್, ದಾಖಲೆಯ ಶತಕ ಗಳಿಸಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೊಸ ತಾರೆಯಾಗಿ ಉದಯಿಸಿದರು. 168 ಎಸೆತಗಳಲ್ಲಿ ಅಜೇಯ 183 ರನ್ ಗಳಿಸಿದ ಅವರು ಚೊಚ್ಚಲ ಪಂದ್ಯದಲ್ಲಿ ವೇಗದ ಶತಕ ಗಳಿಸಿದ ಹಿರಿಮೆಗೆ ಪಾತ್ರರಾದರಲ್ಲದೇ, ಆಸ್ಟ್ರೇಲಿಯಾ ಬೌಲರ್‌ಗಳನ್ನು ಪರದಾಡಿಸಿದರು.
ಶುಕ್ರವಾರ ದಿನಾಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 273 ರನ್ ಗಳಿಸಿದ್ದ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್ ಅನ್ನು 408 ರನ್‌ಗಳಿಗೆ ನಿಯಂತ್ರಿಸಿದ ಭಾರತ, ಮಧ್ಯಾಹ್ನ ಭೋಜನ ವಿರಾಮಕ್ಕೆ ಕೊಂಚ ಮುನ್ನವೇ ತನ್ನ ಪ್ರಥಮ ಇನಿಂಗ್ಸ್ ಆರಂಭಿಸಿತು. ಆರಂಭಿಕರಾದ ಮುರಳಿ ವಿಜಯ್ ಹಾಗೂ ಶಿಖರ್ ಧವನ್ ಇಬ್ಬರೂ ಭರ್ಜರಿ ಆಟವಾಡಿ, ದಿನಾಂತ್ಯದ ಹೊತ್ತಿಗೆ ಭಾರತದ ಮೊತ್ತವನ್ನು ವಿಕೆಟ್ ನಷ್ಟವಿಲ್ಲದೇ 283 ರನ್‌ಗಳಿಗೆ ಕೊಂಡೊಯ್ದರು. ದಿನದ “ÁÚ«é ÔÚ¶¹’¥ÚÆÇ ಮುರಳಿ ವಿಜಯ್ ಅವರು 10 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ ಅಜೇಯ 83 ರನ್ ಗಳಿಸಿದರು. ದಿನಾಂತ್ಯಕ್ಕೆ 283 ರನ್ ಗಳಿಸಿದ್ದರೂ, ಆತಿಥೇಯರ ಪಡೆ ಪ್ರವಾಸಿಗರಿಗಿಂತ 181 ರನ್‌ಗಳ ಹಿನ್ನಡೆ ಹೊಂದಿದೆ.
ಶನಿವಾರ ದಿನದಾಟದಲ್ಲಿ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಶಿಖರ್ ಧವನ್ ಅಕ್ಷರಶಃ ಕಾರುಬಾರು ನಡೆಸಿದರು. 27 ವಯಸ್ಸಿನ ದೆಹಲಿಯ ಈ ಎಡಗೈ ಬ್ಯಾಟ್ಸ್‌ಮನ್, ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಹಲವು ದಾಖಲೆಗಳನ್ನು ಮಾಡಿದರು. ಕೇವಲ 85 ಎಸೆತಗಳಲ್ಲಿ ಶತಕ ಗಳಿಸಿದ ಶಿಖರ್ ಧವನ್, ಚೊಚ್ಚಲ ಪಂದ್ಯದಲ್ಲೇ ವೇಗದ ಶತಕ ಗಳಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆ ಬರೆದರಲ್ಲದೇ, ಈ ಹಿಂದೆ ವೆಸ್ಟ್ ಇಂಡೀಸ್‌ನ ಡ್ವೇನ್ ಸ್ಮಿತ್ ಅವರು ಮಾಡಿದ್ದ ದಾಖಲೆಯನ್ನು ಅಳಿಸಿ ಹಾಕಿದರು.
2004ರ ಜನವರಿಯಲ್ಲಿ ಡ್ವೇನ್ ಸ್ಮಿತ್ ಅವರು, ಕೇಪ್‌ಟೌನ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 93 ಎಸೆತಗಳಲ್ಲಿ ಶತಕ ಪೂರೈಸಿ, ದಾಖಲೆ ಬರೆದಿದ್ದರು.
ಸ್ಮಿತ್ ಅವರ ದಾಖಲೆ ಮುರಿದದ್ದೇ ಅಲ್ಲ, ದಿನಾಂತ್ಯದ ಹೊತ್ತಿಗೆ ಅಜೇಯ 185 ರನ್ ಗಳಿಸಿದ ಧವನ್, ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1969-70ರಲ್ಲಿ ಗುಂಡಪ್ಪ ವಿಶ್ವನಾಥ್ ಅವರು, ಈಡನ್ ಗಾರ್ಡನ್ ಕ್ರೀಡಾಂಣದಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದಿದ್ದ ಟೆಸ್ಟ್‌ನಲ್ಲಿ 137 ರನ್ ಗಳಿಸಿದ್ದು, ಈವರೆಗಿನ ದಾಖಲೆಯಾಗಿತ್ತು.
ಅಲ್ಲದೇ, ಇನಿಂಗ್ಸ್‌ನ ಮೊದಲ 23 ಓವರ್‌ಗಳಲ್ಲಿ 19 ಬೌಂಡರಿ ಬಾರಿಸಿದ ಧವನ್, ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಯ್ಲ್ ಅವರ ದಾಖಲೆಯನ್ನು ಸರಿಗಟ್ಟಿದರು.
ಹೀಗೆ, ದಣಿವರಿಯದೇ ಬ್ಯಾಟ್ ಬೀಸಿದ ಧವನ್ ದಿನದಾಟದಲ್ಲಿ 33 ಬೌಂಡರಿ, 2 ಸಿಕ್ಸರ್ ಬಾರಿಸಿದರಲ್ಲದೇ, ಚೆಂಡಿಗೆ ಕ್ರೀಡಾಂಗಣದ ಮೂಲೆ ಮೂಲೆಗಳ ದರುಶನ ಮಾಡಿಸಿದರು.
ಇದಲ್ಲದೇ, ವಿಜಯ್ ಹಾಗೂ ಧವನ್ ಇಬ್ಬರೂ ದಿನಾಂತ್ಯಕ್ಕೆ ಈ ಇಬ್ಬರೂ ಸೇರಿಸಿರುವ 283 ರನ್‌ಗಳ ಜೊತೆಯಾಟ, ಆಸ್ಟ್ರೇಲಿಯಾ ವಿರುದ್ಧ ಭಾರತ ಮೊಹಾಲಿಯಲ್ಲಿ ಪೇರಿಸಿದ ಅತಿ ದೊಡ್ಡ ಮೊತ್ತದ ಜೊತೆಯಾಟವಾಗಿದೆ. ಈ ಇಬ್ಬರೂ ಅಂತಿಮ ಅವಧಿಯಲ್ಲಿ 127 ರನ್ ಗಳಿಸಿದ್ದು ಭಾರತದ ಮೊತ್ತ ಗಣನೀಯವಾಗಿ ಹೆಚ್ಚಲು ಸಹಕಾರಿಯಾಯಿತು.
ಅದರಲ್ಲೂ ದಿನದ ಅಂತಿಮ ಅವಧಿಯಲ್ಲಿ ಧವನ್, ವೈಯಕ್ತಿಕವಾಗಿ 105 ರನ್‌ನಿಂದ 12 ಬೌಂಡರಿ, 2 ಸಿಕ್ಸರ್‌ಗಳ ಸಹಾಯದಿಂದ 185 ರನ್ ಗಳಿಸಿದರು.
ವಿಜಯ್- ಧವನ್ ಇಬ್ಬರ ಬಿರುಸಿನ ಆಟದಿಂದ ಕಾಂಗರೂ ಬೌಲರ್‌ಗಳಿಗೆ ಸಿಕ್ಕಿದ್ದು ನಿಟ್ಟುಸಿರು, ಬೇಸರಗಳು ಮಾತ್ರ.
ಭಾರತದ ಇನಿಂಗ್ಸ್‌ಗೂ ಮುನ್ನ, ತನ್ನ ಪ್ರಥಮ ಇನಿಂಗ್ಸ್ ಮುಂದುರವರೆಸಿದ ಆಸ್ಟ್ರೇಲಿಯಾಕ್ಕೆ ಸ್ಮಿತ್ ಹಾಗೂ ಸ್ಟಾರ್ಕ್ ಇಬ್ಬರೂ ಆಸರೆಯಾದರು. 8ನೇ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡಿದ ಈ ಇಬ್ಬರೂ, ಇದೇ ಕ್ರೀಡಾಂಗಣದಲ್ಲಿ 8ನೇ ವಿಕೆಟ್‌ಗೆ ಆಸೀಸ್ ನೀಡಿದ್ದ ಜೊತೆಯಾಟದ ದಾಖಲೆಯನ್ನು ಮುರಿದರು. ಶೇನ್ ವ್ಯಾಟ್ಸನ್ ಹಾಗೂ ಬ್ರೆಟ್ ಲೀ ಇಬ್ಬರೂ 8ನೇ ವಿಕೆಟ್‌ಗೆ 73 ರನ್ ಸೇರಿಸಿದ್ದು ಈವರೆಗೆ ಮೊಹಾಲಿ ಕ್ರೀಡಾಂಗಣದಲ್ಲಿ 8ನೇ ವಿಕೆಟ್‌ಗೆ ಆಸೀಸ್‌ನ ಉತ್ತಮ ಜೊತೆಯಾಟವಾಗಿತ್ತು.
ಆದರೆ, ಸ್ಟಾರ್ಕ್ ಅವರು ಶತಕದಿಂದ ವಂಚಿತವಾದರು. 99 ರನ್‌ಗೆ ಔಟಾದ ಅವರಿಗೆ, ಈ ಹಿಂದೆ 9ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ, ಶತಕ ಸಿಡಿಸಿದ್ದ ರೇ ಲಿಂಡ್‌ವಾಲ್ ಅವರ ದಾಖಲೆಯನ್ನು ಮುರಿಯಲಾಗಲಿಲ್ಲ. 1947ರಲ್ಲಿ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ರೇ ಲಿಂಡ್‌ವಾಲ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಎಂಟನೇ ವಿಕೆಟ್ ರೂಪದಲ್ಲಿ ಸ್ಮಿತ್ ಔಟಾದರೆ, 9ನೇ ವಿಕೆಟ್ ರೂಪದಲ್ಲಿ ಸ್ಟಾರ್ಕ್ ವಿಕೆಟ್ ಒಪ್ಪಿಸಿದರು.
ಇನ್ನು, 11ನೇ ಕ್ರಮಾಂಕದ ಡೊಹಾರ್ಟಿ ಅವರ ವಿಕೆಟ್ ಉರುಳುವಲ್ಲಿಗೆ ಆಸೀಸ್ ಪ್ರಥಮ ಇನಿಂಗ್ಸ್ ಮುಕ್ತಾಯಗೊಂಡಿತು. ಸ್ಮಿತ್ ಔಟಾದಾಗ ಕ್ರೀಸ್‌ಗೆ ಬಂದಿದ್ದ ಲಿಯಾನ್ ಅಜೇಯರಾಗಿ ಉಳಿದರು.
ಸ್ಕೋರ್ ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 408
ಸ್ಮಿತ್ ಸ್ಟಂಪ್ ಧೋನಿ ಬಿ ಓಜಾ 92, ಸ್ಟಾರ್ಕ್ ಸಿ ಧೋನಿ ಬಿ ಶರ್ಮಾ 99, ಲಿಯಾನ್ ಅಜೇಯ 9, ಡೊಹಾರ್ಟಿ ಎಲ್‌ಬಿಡಬ್ಲ್ಯೂ ಅಶ್ವಿನ್ 5. ಇತರೆ 23.
ವಿಕೆಟ್ ಪತನ: 8-348, 9-399, 10-408.
ಬೌಲಿಂಗ್: ಭುವನೇಶ್ವರ್ 9-0-44-0, ಇಶಾಂತ್ ಶರ್ಮಾ 30-8-72-3, ಅಶ್ವಿನ್ 43.5-9-97-2, ಓಜಾ 28-5-98-2, ಜಡೇಜಾ 31-7-77-3.
ಭಾರತ ಪ್ರಥಮ ಇನಿಂಗ್ಸ್ 283/0 (58 ಓವರ್)
ಮುರಳಿ ವಿಜಯ್ ಅಜೇಯ 83, ಸತೀಶ್ ಧವನ್ ಅಜೇಯ 185, ಇತರೆ 15
ಬೌಲಿಂಗ್: ಸ್ಟಾರ್ಕ್ 11-1-46-0, ಸಿಡ್ಲ್ 12-3-35-0, ಹೆನ್ರೀಕೆಸ್ 7-0-38-0, ಲಿಯಾನ್ 15-3-69-0, ಡೊಹಾರ್ಟಿ 10-2-57-0, ಸ್ಮಿತ್ 3-0-24-0.