ಚುಟುಕು ಕ್ರಿಕೆಟ್ ಹಬ್ಬಕ್ಕೆ ಮಲೆನಾಡು ಸಜ್ಜು
- ಹೊನ್ನಾಳಿ ಚಂದ್ರಶೇಖರ್
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮಾ.16
ಕೆಲವೇ ತಿಂಗಳ ಹಿಂದೆ ರಣಜಿ ಪಂದ್ಯಾವಳಿ ನೋಡಿದ್ದ ಮಲೆನಾಡ ನಗರಿಯಲ್ಲಿ ಈಗ ಚುಟುಕು ಕ್ರಿಕೆಟ್ ಸಂಭ್ರಮ. ಜಿಲ್ಲೆಯ ಮೂರು ಕ್ರೀಡಾಂಗಣಗಳಲ್ಲಿ ಭಾನುವಾರದಿಂದ ಆರು ದಿನಗಳ ಕಾಲ ಸೈಯದ್ ಮಷ್ತಾಕ್ ಆಲಿ ಟ್ರೋಫಿ ದಕ್ಷಿಣ ವಲಯ ಅಂತರರಾಜ್ಯ ಟಿ-20 ಪಂದ್ಯಾವಳಿ ನಡೆಯಲಿದೆ.
ಟೂರ್ನಿಯು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದ್ದು, ಎಲ್ಲಾ ತಂಡಗಳು ಇತರೆ ಎಲ್ಲಾ ತಂಡಗಳ ವಿರುದ್ಧ ಆಟಬೇಕಾಗಿದೆ. ಒಟ್ಟು 15 ಪಂದ್ಯಗಳು ನಡೆಯಲಿವೆ. ದಿನಕ್ಕೊಂದು ಪಂದ್ಯದಂತೆ ಪ್ರತಿ ತಂಡವು ಒಟ್ಟು 5 ಪಂದ್ಯಗಳನ್ನಾಡಲಿವೆ. ಮಾ.20ರಂದು ಪಂದ್ಯಗಳು ನಡೆಯುವುದಿಲ್ಲ.
ರಾಂಚಿಯಲ್ಲಿ ನಾಕ್ ಔಟ್ ಪಂದ್ಯ: ಹೆಚ್ಚು ಅಂಕ ಪಡೆವ ಎರಡು ತಂಡಗಳು ರಾಂಚಿಯಲ್ಲಿ ನಡೆಯುವ ನಾಕ್ ಔಟ್ ಹಂತದ ಪಂದ್ಯಾವಳಿಯಲ್ಲಿ ಭಾಗವಹಿಸುವ ಅರ್ಹತೆ ಪಡೆಯುತ್ತವೆ. ಅಲ್ಲಿ ನಾಲ್ಕು ವಲಯದಿಂದ ಬರುವ 8 ತಂಡಗಳು ಹಣಾಹಣಿ ನಡೆಸಲಿವೆ.
ಕೇರಳ, ಹೈದ್ರಾಬಾದ್, ಗೋವಾ, ಕರ್ನಾಟಕ, ಆಂಧ್ರ, ತಮಿಳುನಾಡು ತಂಡಗಳ ಆಟಗಾರರು ಈಗಾಗಲೇ ನಗರಕ್ಕೆ ಆಗಮಿಸಿದ್ದು, ಎಲ್ಲಾ ತಂಡಗಳ ಆಟಗಾರರು ಶನಿವಾರ ಬೆಳಿಗ್ಗೆ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಬಿರುಸಿನ ಅಭ್ಯಾಸ ನಡೆಸಿದರು. ಇಡೀ ಪಂದ್ಯಾವಳಿಯ ಆಟಗಳು ಬೆಳಗಿನ ಅವಧಿಯಲ್ಲಿ ನಡೆಯಲಿದ್ದು, ಈ ವಾತಾವರಣಕ್ಕೆ ಹೊಂದಿಕೊಳ್ಳುವ ಪ್ರಯತ್ನವನ್ನು ನಡೆಸಿದರು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ ಐಪಿಎಲ್ ತಂಡದಲ್ಲಿ ಅವಕಾಶವಿರುವುದರಿಂದ ತುರುಸಿನ ಸ್ಪರ್ಧೆ ನಡೆಯುವುದರಲ್ಲಿ ಅನುಮಾನವಿಲ್ಲ.
- ಎಲ್ಲಾ ಸಿದ್ಧತೆ ನಡೆದಿದ್ದು, ಆರು ದಿನ ಮಲೆನಾಡಿಗರಿಗೆ ಆಟದ ರಂಜನೆ ಸಿಗಲಿದೆ. ಉಚಿತ ಪ್ರವೇಶವಿದೆ- ಎಂದು ಕೆಎಸ್ಸಿಎ ವಲಯ ಸಂಚಾಲಕ ಡಿ.ಆರ್. ನಾಗರಾಜಜ್ಹಾಗೂ ಆಯೋಜಕ ಸಮಿತಿಯ ಡಿ.ಎಸ್. ಅರುಣ್ ಹೇಳುತ್ತಾರೆ.
ಖ್ಯಾತ ಕ್ರಿಕೆಟ್ ಆಟಗಾರನ ನೆನಪಿನಲ್ಲಿ...
ಸೈಯದ್ ಮಶ್ತಾಕ್ ಆಲಿ ಅವರು ಸ್ವಾತಂತ್ರ್ಯಪೂರ್ವದಲ್ಲಿಯೇ ಭಾರತ ತಂಡವನ್ನು ಪ್ರತಿನಿಧಿಸಿದ್ದು, ವಿದೇಶದಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ. 1936ರಲ್ಲಿ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಮೊದಲ ವಿಕೆಟ್ ಜೋಡಿಯಾಗಿ ವಿಜಯ್ ಮರ್ಚೆಂಟ್ ಅವರ ಜತೆ ಮುಶ್ತಾಕ್ ಆಲಿ ಅವರು ಕಣಕ್ಕಿಳಿಯುತ್ತಿದ್ದ ಇವರು ಅಂದಿನ ಕ್ರಿಕೆಟ್ ಸೂಪರ್ಸ್ಟಾರ್.
ಇವರದು ನಿಧಾನ ಶೈಲಿ ಅಲ್ಲ. ಇವತ್ತು ಟಿ-20ಯಲ್ಲಿ ಹೇಗೆ ಕಡಿಮೆ ಓವರ್ನಲ್ಲಿ ಹೆಚ್ಚು ರನ್ ಪಡೆಯುತ್ತಾರೋ ಹಾಗೆ ಅವತ್ತು ಮುಶ್ತಾಕ್ ಆಲಿ ಅವರ ಬ್ಯಾಟ್ನಿಂದ ರನ್ ಹೊಳೆ ಹರಿಯುತ್ತಿತ್ತು. ಕ್ರಿಕೆಟ್ ವಿರಳವಾಗಿದ್ದ ಕಾಲದಲ್ಲಿ ಇವರು ಆಡಿದ್ದು ಕೇವಲ 11 ಟೆಸ್ಟ್. ಅದರಲ್ಲಿ ಎರಡು ಶತಕ, ಮೂರು ಅರ್ಧ ಶತಕ ಭಾರಿಸಿದ್ದರು.
ಪಡೆದ ಒಟ್ಟು ರನ್ 612. ಆದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 30 ಶತಕ ಸಾಧಿಸಿದ್ದು, 12 ಸಾವಿರಕ್ಕೂ ಮಿಕ್ಕಿ ರನ್ ಹೊಡೆದಿದ್ದಾರೆ. ಈ ಎಡಗೈ ಬೌಲರ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 162 ವಿಕೆಟ್ ಗಳಿಸಿದ್ದಾರೆ.
ಭಾರತ ಸರ್ಕಾರ 1964ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿತ್ತು. ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ಆಜೀವ ಸದಸ್ಯರನ್ನಾಗಿ ಮಾಡಿಕೊಂಡಿತ್ತು.
ಇವರು ತಮ್ಮ 90ನೇ ವಯಸ್ಸಿನಲ್ಲಿ 2006ರಲ್ಲಿ ನಿಧನರಾದರು. ನಂತರ 2008- 09ರಲ್ಲಿ ಆರಂಭವಾದ ದೇಶೀಯ- 20 ಪಂದ್ಯಾವಳಿ ಟ್ರೋಫಿಗೆ ಇವರ ಹೆಸರನ್ನೇ ಇಡಲಾಯಿತು. ಮುಶ್ತಾಕ್ ಆಲಿ ಅವರ ಆಟದ ಶೈಲಿಗೂ, ಇವರ ಹೆಸರಿನ ಪಂದ್ಯಾವಳಿಯ ಶೈಲಿಗೂ ಪರಸ್ಪರ ಪೂರಕವಾಗಿಯೇ ಇದೆ.