ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ಲೀನ್ ಸ್ವೀಪ್ ನಿರೀಕ್ಷೆಯಲ್ಲಿ ಧೋನಿ ಬಾಯ್ಸ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಇಲ್ಲಿನ...

Parashurama
Updated On : 22 Mar 2013, 11:57 am

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಶುಕ್ರವಾರದಿಂದ ಇಲ್ಲಿನ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ಆರಂಭಗೊಳ್ಳಲಿದೆ. ನಾಲ್ಕು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3-0 ಅಂತರದಲ್ಲಿ ಸರಣಿ ಗೆದ್ದಿರುವ ಭಾರತ, ಆಸೀಸ್ ವಿರುದ್ಧದ ನಾಲ್ಕನೇ ಪಂದ್ಯದಲ್ಲೂ ಜಯಗಳಿಸಿ, ಚಾರಿತ್ರಿಕ ಗೆಲುವು ದಾಖಲಿಸುವ ಹಂಬಲದಲ್ಲಿದೆ. 81 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಭಾರತ, ಈವರೆಗೆ ಸತತ ನಾಲ್ಕು ಪಂದ್ಯಗಳಲ್ಲಿ ಗೆದ್ದಿಲ್ಲ.
1993ರಲ್ಲಿ ಅಜರುದ್ದೀನ್ ನೇತೃತ್ವದ ಭಾರತ ತಂಡ, ಗ್ರಹಾಂ ಗೂಚ್ ನೇತೃತ್ವದ ಆಂಗ್ಲರ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಂಡಿತ್ತು. ಆದರೆ, ಆ ಟೆಸ್ಟ್ ಸರಣಿ ಮೂರು ಪಂದ್ಯಗಳಿಗಷ್ಟೇ ಸೀಮಿತವಾಗಿದ್ದರಿಂದ ಅಜರುದ್ದೀನ್ ತಂಡಕ್ಕೆ 3-0 ಅಂತರದಲ್ಲಿ ಸರಣಿ ಕೈವಶವಾಗಿತ್ತು. ಆದರೆ, 4-0 ಅಂತರದ ಕ್ಲೀನ್‌ಸ್ವೀಪ್ ಇದುವರೆಗೂ ಭಾರತಕ್ಕೆ ಲಭ್ಯವಾಗಿಲ್ಲ. ಇಂಥದ್ದೊಂದು ಚಾರಿತ್ರಿಕ ಸಾಧನೆ ಮಾಡಲು ಸಜ್ಜಾಗಿರುವ ಭಾರತ, ಸರಣಿಯ ಈ ಕೊನೆಯ ಪಂದ್ಯವನ್ನು ತೀವ್ರ ಕುತೂಹಲದಿಂದ ನಿರೀಕ್ಷಿಸುತ್ತಿದೆ.  ಭಾರತ ತಂಡ, ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭಲ್ಲಿ ಆಸೀಸ್, ಭಾರತವನ್ನು ಕ್ಲೀನ್‌ಸ್ವೀಪ್ ಮೂಲಕ ಬಗ್ಗುಬಡಿದಿತ್ತು. ಈಗ, ಬಗ್ಗುಬಡಿಯವ ಅವಕಾಶ ಭಾರತಕ್ಕೆ ಸಿಕ್ಕಿದೆ. 'ಸೇಡು' ಎನ್ನುವ ಪದವನ್ನು ಟೀಂ ಇಂಡಿಯಾ ನಾಯಕ ಧೋನಿ ಬಳಸಲು ಇಷ್ಟಪಡುವುದಿಲ್ಲವಾದರೂ, 'ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ' ಎನ್ನುವ ರೀತಿಯಲ್ಲಿ ಭಾರತ, ಆಸೀಸ್ ಮುಂದೆ ಧೋನಿ ಪಡೆ ಮೆರೆಯುವ ಕಾಲ ಸನ್ನಿಹಿತವಾಗಿದೆಯೆಂದೇ ಹೇಳಬಹುದು.
ಬ್ಯಾಟಿಂಗ್ ಕ್ರಮಾಂಕ ಏರುಪೇರು: ಆಸೀಸ್ ವಿರುದ್ಧ ಕಣಕ್ಕಿಳಿಯಲಿರುವ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಮೊಹಾಲಿ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿ, ಆಕರ್ಷಕ ಶತಕ ಸಿಡಿಸಿದ್ದ ಶಿಖರ್ ಧವನ್ ಗಾಯದಿಂದ ಬಳಲುತ್ತಿರುವ ಕಾರಣ, ಅವರು ಮೈದಾನಕ್ಕಿಳಿಯುತ್ತಿಲ್ಲ. ಅವರ ಬದಲಿಗೆ ಸುರೇಶ್ ರೈನಾ ಅವರು ಕಣಕ್ಕಿಳಿಯಲಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಅಜಿಂಕ್ಯ ರಹಾನೆ ಅವರು ಮುರಳಿ ವಿಜಯ್ ಜೊತೆ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆಯಬಹುದು ಅಲ್ಲದೇ, ಅವರಿಗೆ ಈ ಬಾರಿ ಇನಿಂಗ್ಸ್ ಆರಂಭಿಸುವ ಗುರುತರ ಜವಾಬ್ದಾರಿ ಬೀಳಬಹುದು. ಆದರೆ, ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರಾ ? ಇಲ್ಲವಾ ? ಎಂಬುದರ ಮೇಲೆ ಅದು ನಿರ್ಧಾರವಾಗಲಿದೆ. ಹಾಗೊಂದು ವೇಳೆ, ಅವರಿಗೆ ಅವಕಾಶ ಸಿಕ್ಕರೆ ಈ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಹಾನೆ ಕಾಲಿಟ್ಟಂತಾಗುತ್ತದೆ.
ಆದರೆ, ಅವರಿಗೆ ಅವಕಾಶ ಸಿಗದೇ ಹೋದಲ್ಲಿ, ಮುರಳಿ ವಿಜಯ್ ಜೊತೆಗೆ, ಚೇತೇಶ್ವರ ಪೂಜಾರ ಇನಿಂಗ್ಸ್ ಆರಂಭಿಸಬಹುದು. ರೈನಾ ಅವರು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬಹುದು. 5ನೇ ಕ್ರಮಾಂಕದಲ್ಲಿ ಆಡುತ್ತಿದ್ದ ಕೊಹ್ಲಿ ಅವರು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆಯಬಹುದು.
ಭರವಸೆಯ ಬೌಲಿಂಗ್ ವಿಭಾಗ: ಸರಣಿಯ ಮೂರನೇ ಪಂದ್ಯವಾದ ಮೊಹಾಲಿ ಪಂದ್ಯದಲ್ಲಿ, ವೇಗಿಗಳಾದ ಭುವನೇಶ್ವರ ಕುಮಾರ್ ಹಾಗೂ ಇಶಾಂತ್ ಶರ್ಮಾ ಇಬ್ಬರೂ ಉತ್ತಮ ಪ್ರದರ್ಶನ ತೋರಿರುವುದು ಭಾರತಕ್ಕೆ ನೆಮ್ಮದಿ ತಂದಿದೆ. ಅದರಲ್ಲೂ ಹೊಸ ಚೆಂಡಿನಲ್ಲಿ ಭುವನೇಶ್ವರ್ ಮಿಂಚಿದರೆ, ಇಶಾಂತ್ ಅವರು ಹಳೇ ಚೆಂಡಿನಲ್ಲಿ ದಾಳಿ ನಡೆಸಿ, ಯಶಸ್ಸು ಕಂಡಿರುವುದು ಗಮನಾರ್ಹ. ಸ್ಪಿನ್ನರ್‌ಗಳ ವಿಭಾಗದಲ್ಲಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಓಜಾ ಉತ್ಸಾದಲ್ಲಿದ್ದಾರೆ. ಆದರೆ, ಯೋಚನೆ ಮಾಡಬೇಕಿರುವುದು ಹಿರಿಯ ಆಟಗಾರ ಹರ್ಭಜನ್ ಸಿಂಗ್ ಬಗ್ಗೆ. 101 ಟೆಸ್ಟ್ ಪಂದ್ಯಗಳನ್ನಾಡಿರುವ ಭಜ್ಜಿ, ಈ ಬಾರಿಯೂ ಸುಮ್ಮನೇ ಕುಳಿತುಕೊಳ್ಳಬಹುದು.
ಸಚಿನ್‌ಗೆ 198ನೇ ಪಂದ್ಯ: ಇನ್ನು, ತಂಡದ ಹಿರಿಯ ಸಚಿನ್ ತೆಂಡೂಲ್ಕರ್ ಅವರಿಗೆ ಇದು 198ನೇ ಪಂದ್ಯ. ಆಸೀಸ್ ವಿರುದ್ಧದ ದೆಹಲಿ ಟೆಸ್ಟ್ ಮುಗಿದ ಮೇಲೆ, ಭಾರತ ತಂಡ ಇನ್ನೊಂದು ವರ್ಷ ತವರಿನಲ್ಲಿ ಯಾವುದೇ ಟೆಸ್ಟ್ ಆಡುವುದಿಲ್ಲ. ಹಾಗಾಗಿ, ನಿವೃತ್ತಿಯ ಅಂಚಿನಲ್ಲಿರುವ ಸಚಿನ್ ಅವರನ್ನು ಮತ್ತೆ ಟೆಸ್ಟ್ ಸಮವಸ್ತ್ರದಲ್ಲಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಲಭ್ಯವಾಗುವುದೋ ಇಲ್ಲವೋ ಎಂಬುದನ್ನು ಕಾಲವೇ ನಿರ್ಧರಿಸಲಿದೆ.
ಕ್ಲಾರ್ಕ್ ಅನುಮಾನ: ಸತತ ಮೂರು ಸೋಲುಗಳಿಂದ ಜರ್ಝರಿತವಾಗಿರುವ ಆಸೀಸ್ ತಂಡಕ್ಕೆ ಮತ್ತೊಂದು ಆಘಾತ ಎರಗಿದೆ. ನಾಯಕ ಕ್ಲಾರ್ಕ್ ಆಡುವುದು ಇನ್ನೂ ಖಚಿತವಾಗಿಲ್ಲ. ವ್ಯಾಟ್ಸನ್ ಮತ್ತೆ ತಂಡಕ್ಕೆ ವಾಪಸ್ಸಾಗಿದ್ದಾರೆ. ಮಿಚೆಲ್ ಜಾನ್ಸನ್ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಜೇಮ್ಸ್ ಪ್ಯಾಟಿನ್ಸನ್ ಆಡಲಿದ್ದಾರೆ. ಅವರೊಂದಿಗೆ ಪೀಟರ್ ಸಿಡ್ಲ್ ಇದ್ದಾರೆ. ಸ್ಟೀವನ್ ಸ್ಮಿತ್, ಫಿಲಿಪ್ ಹ್ಯೂಸ್ ಇಬ್ಬರೂ ತಂಡದ ಪ್ರಮುಖ ಆಟಗಾರರು. ಉಸ್ಮಾನ್ ಖವಾಜಾ ಅವರ ಈ ಬಾರಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments