ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದಕ್ಷಿಣಕ್ಕೆ ಕರ್ನಾಟಕ ಅಧಿಪತಿ

Parashurama
Updated On : 23 Mar 2013, 12:22 pm

ಕ.ಪ್ರ.ವಾರ್ತೆ ಶಿವಮೊಗ್ಗ ಮಾ.22-
ದಕ್ಷಿಣ ವಲಯದಲ್ಲಿ ಕರ್ನಾಟಕ ಕ್ರಿಕೆಟ್ ತಂಡವೇ ಬಲಿಷ್ಠ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಶಿವಮೊಗ್ಗ- ಭದ್ರಾವತಿಯಲ್ಲಿ ನಡೆಸಿದ ದಕ್ಷಿಣ ವಲಯ ರಾಜ್ಯಗಳ ಟಿ-20 ಪಂದ್ಯಾವಳಿಯಲ್ಲಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಬಲಿಷ್ಠ ತಮಿಳುನಾಡು ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗುವಲ್ಲಿ ವಿಫಲವಾಗಿದೆ.
ರಾಂಚಿಯಲ್ಲಿ ನಡೆಯುವ ನಾಕೌಟ್ ಹಂತದ ಪಂದ್ಯಾವಳಿಯಲ್ಲಿ ಕರ್ನಾಟಕ ಹಾಗೂ ಕೇರಳ ತಂಡ ದಕ್ಷಿಣ ವಲಯವನ್ನು ಪ್ರತಿನಿಧಿಸಲಿವೆ. ಪಾಯಿಂಟ್ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನಿಯಾಯಿತು. ಆಡಿದ ಐದು ಪಂದ್ಯಗಳಲ್ಲಿ ಒಂದು ಟೈ ಮಾಡಿಕೊಂಡು ಉಳಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಭಾರಿಸಿ 16 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.
ತಮಿಳುನಾಡು 2 ಪಂದ್ಯ ಜಯ, ಒಂದು ಡ್ರಾದೊಂದಿಗೆ 10 ಅಂಕ ಗಳಿಸಲಷ್ಟೇ ಶಕ್ತವಾಯಿತು. ಈ ಮಧ್ಯೆ ಕೇರಳ ತಂಡ ಕೊನೆಯ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಉಳಿದಂತೆ ಗೋವಾ, ಹೈದ್ರಾಬಾದ್ ಒಂದೊಂದು ಗೆಲುವು ಸಾಧಿಸಿ 4 ಅಂಕ ಪಡೆದುಕೊಂಡರೆ, ಆಂಧ್ರ ತಂಡ ಎರಡು ಗೆಲುವಿನೊಂದಿಗೆ 8 ಅಂಕ ಪಡೆದು ಸಮಾಧಾನಪಟ್ಟಿತು.
ದಾಖಲೆಗಳು: ಕರ್ನಾಟಕ ತಂಡದ ಮಾಯಾಂಕ ಅಗರ್ವಾಲ್ ಒಂದು ಶತಕ, ಎರಡು ಅರ್ಧಶತಕ ಸಿಡಿಸಿದರೆ, ಮನೀಷ್ ಪಾಂಡೆ ಎರಡು ಅರ್ಧ ಶತಕ, ರಾಹುಲ್ ಹಾಗೂ ಕರುಣ್ ನಾಯರ್ ತಲಾ ಒಂದು ಅರ್ಧಶತಕ ಸಿಡಿಸಿ ತಮ್ಮ ದಾಖಲೆಗಳನ್ನು ಉತ್ತಮಪಡಿಸಿಕೊಂಡರು. ಬೌಲಿಂಗ್ ವಿಭಾಗದಲ್ಲಿ ಮನೀಷ್ ಪಾಂಡೆ ಎರಡು ಪಂದ್ಯದಲ್ಲಿ ತಲಾ ನಾಲ್ಕು ವಿಕೆಟ್ ಕಿತ್ತು ಸೈ ಎನಿಸಿಕೊಂಡರು. ಗೌತಮ್ ಕೂಡ ಒಂದು ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತು ಗಮನ ಸೆಳೆದರು.
ಶರಣಾದ ಆಂಧ್ರ: ಬಿಸಿಸಿಐ ಸೈಯದ್ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ-20 ಕ್ರಿಕೆಟ್ ಪಂದ್ಯಾವಳಿಯ ಕೊನೆಯ ಪಂದ್ಯದಲ್ಲೂ ಕರ್ನಾಟಕ ತಂಡ ಗೆಲ್ಲುವ ಮೂಲಕ ನಾಕೌಟ್ ಹಂತ ಪ್ರವೇಶಿಸಿದೆ. ಶುಕ್ರವಾರ ಇಲ್ಲಿನ ಜೆಎನ್‌ಎನ್ ಮೈದಾನದಲ್ಲಿ ಆಂಧ್ರ ವಿರುದ್ಧ ನಡೆದ ಪಂದ್ಯದಲ್ಲಿ, ಮನೀಶ್ ಪಾಂಡೆ ಪ್ರಖರ ಬೌಲಿಂಗ್, ಮಾಯಾಂಕ ಅಗರ್ವಾಲ್ ಹಾಗೂ ಕೆ.ಎಲ್. ರಾಹುಲ್ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಆಂಧ್ರ ತಂಡ ಸೊಲ್ಲೆತ್ತದೇ ಕರ್ನಾಟಕಕ್ಕೆ ಶರಣಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಆಂಧ್ರ ತಂಡದ ನಿಗದಿತ 20 ಓವರ್‌ಗಳಲ್ಲಿ 130 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಕೆ.ಎಸ್. ಭರತ್ (25), ಬಿ. ಸುಮಂತ್ (30), ಎ.ಜಿ. ಪ್ರದೀಪ್ (29) ರನ್ ಗಳಿಸಿದರು. ಒಂದು ಹಂತದಲ್ಲಿ ಆಂಧ್ರದ ತಂಡದ ಸ್ಕೋರ್ 150 ದಾಟುವ ಸಂದರ್ಭವಿತ್ತಾದರೂ ಮನೀಷ್ ಪಾಂಡೆ ಅವರ ಕರಾರುವಾಕ್ ಬೌಲಿಂಗ್ ಗುರಿ ತಲೆಕೆಳಗಾಗುವಂತೆ ಮಾಡಿತು. ಮನೀಷ್ ಪಾಂಡೆ 4 ಓವರ್‌ನಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಿದರು. ನಂತರ ಬ್ಯಾಂಟಿಂಗ್‌ಗೆ ಇಳಿದ ಕರ್ನಾಟಕ ತಂಡ ಮನೀಷ್ ಅವರ ವಿಕೆಟ್‌ನ್ನು ಒಂದು ರನ್ ಇದ್ದಾಗ ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಆಗಮಿಸಿದ ಕೆ.ಎಲ್. ರಾಹುಲ್ ಅವರು ಮಾಯಾಂಕ ಅಗರ್ವಾಲ್ ಅವರೊಂದಿಗೆ ನಿಧಾನವಾಗಿ ರನ್ ಸೇರಿಸುತ್ತಾ ಹೋದರೆ. ಮಾಯಾಂಕ್ 60 ಎಸೆತಗಳಲ್ಲಿ 75 ರನ್(9 ಬೌಂಡರಿ) ಗಳಿಸಿದರೆ, ಕೆ.ಎಲ್. ರಾಹುಲ್ 47 ಎಸೆತದಲ್ಲಿ 60 (2 ಸಿಕ್ಸರ್) ರನ್ ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಕೊನೆ ಓವರ್‌ನಲ್ಲಿ ಹ್ಯಾಟ್ರಿಕ್‌ನಿಂದ ಸೋತ ತ.ನಾಡು: ಹೈದ್ರಾಬಾದ್ ತಂಡದ ಬೌಲರ್ ಮಿಲಿಂದ್ ಆಕ್ರಮಣಕಾರಿ ಎಸೆತಗಳಿಂದಾಗಿ ತಮಿಳುನಾಡು ತಂಡ ಪಂದ್ಯದ ಕೊನೆಯ ಓವರ್‌ನಲ್ಲಿ ಸೊಲಪ್ಪಿಕೊಂಡಿತು. 167 ರನ್ ಗುರಿಯನ್ನು ಬೆನ್ನಟ್ಟಿದ ತಮಿಳುನಾಡು ತಂಡ ಪಂದ್ಯದ 19ನೇ ಓವರ್‌ನಲ್ಲಿ 157ರ ಗಡಿ ಮುಟ್ಟಿತು. ಕೊನೆ ಓವರ್‌ನಲ್ಲಿ 10 ರನ್ ಅವಶ್ಯಕತೆ ಇತ್ತು.
ಈ ಸಂದರ್ಭದಲ್ಲಿ ಬೌಲಿಂಗ್ ಎಸೆದ ಮಿಲಿಂದ್ ಎರಡು ರನ್ ನೀಡಿ ಪ್ರಮುಖ ಮೂರು ವಿಕೆಟ್ ಸತತವಾಗಿ ಕಬಳಿಸಿ, ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು. ಭದ್ರಾವತಿಯಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಗೋವಾ ವಿರುದ್ಧ ಕೇರಳ ತಂಡ ಗೆಲುವು ಸಾಧಿಸಿತು. ಕೇರಳ ತಂಡ ನೀಡಿದ್ದ 146 ರನ್ ಗುರಿಯನ್ನು ಬೆನ್ನಟ್ಟಿದ ಗೋವಾ ತಂಡ 108 ರನ್‌ಗಳಿಗೆ ಸರ್ವಪತನ ಕಂಡಿತು.

-ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments