ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫಿರೋಜ್ ಶಾದಲ್ಲಿ ಸ್ಪಿನ್ನರ್‌ಗಳು ಶೈನ್

ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೊದಲ ದಿನ ಆತಿಥೇಯ ಸ್ಪಿನ್ನರ್‌ಗಳು ಪಾರಮ್ಯ ಮೆರೆಯುವ ಮೂಲಕ ಸರಣಿಯಲ್ಲಿ...

Parashurama
Updated On : 23 Mar 2013, 12:20 pm

ನವದೆಹಲಿ: ಆಸೀಸ್ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೊದಲ ದಿನ ಆತಿಥೇಯ ಸ್ಪಿನ್ನರ್‌ಗಳು ಪಾರಮ್ಯ ಮೆರೆಯುವ ಮೂಲಕ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್‌ನತ್ತ ಹೆಜ್ಜೆ ಹಾಕಿದೆ.
ಮೊದಲ ದಿನ ಆಸ್ಟ್ರೇಲಿಯಾದ ಅಗ್ರ ಎಂಟು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಭಾರತದ ಬೌಲರ್‌ಗಳು ತಂಡಕ್ಕೆ ದಿನದ ಗೌರವ ತಂದುಕೊಟ್ಟರು. ಹೀಗಾಗಿ ಆಸ್ಟ್ರೇಲಿಯಾ ದಿನಾಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ಒಂದು ಹಂತದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದ ಪ್ರವಾಸಿ ಆಸ್ಟ್ರೇಲಿಯಾಕ್ಕೆ, ಸ್ಟೀವನ್ ಸ್ಮಿತ್ ಮತ್ತು ಪೀಟರ್ ಸಿಡ್ಲ್ 8ನೇ ವಿಕೆಟ್ ಜತೆಯಾಟದಲ್ಲಿ 53 ರನ್ ಹಾಗೂ ಸಿಡ್ಲ್ ಮತ್ತು ಜೇಮ್ಸ್ ಪ್ಯಾಟಿನ್ಸನ್ 9ನೇ ವಿಕೆಟ್‌ಗೆ ಮುರಿಯದ ಜತೆಯಾಟದಲ್ಲಿ 43 ರನ್ ಗಳಿಸಿದ್ದು 200 ರನ್‌ಗಳ ಗಡಿ ದಾಟಲು ನೆರವಾಯಿತು.
ಅಗ್ರ ಕ್ರಮಾಂಕದಲ್ಲಿ ಫಿಲಿಪ್ ಹ್ಯೂಸ್ (45) ಮತ್ತು ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್ (46), ಸಿಡ್ಲ್ (ಅಜೇಯ 47) ಮಾತ್ರ ಆಸೀಸ್ ಪರ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳು ಎನಿಸಿದರು.
ಸಿಡ್ಲ್ (ಅಜೇಯ 47) ಮತ್ತು ಪ್ಯಾಟಿನ್ಸನ್ (ಅಜೇಯ 11) ಮೊದಲ ದಿನಾಂತ್ಯಕ್ಕೆ ಕ್ರೀಸ್‌ನಲ್ಲಿದ್ದರು.
ಭಾರತದ ಪರ ಮೊದಲ ದಿನ ಬೌಲಿಂಗ್‌ನಲ್ಲಿ ಮಿಂಚಿದ ರವಿಚಂದ್ರನ್ ಅಶ್ವಿನ್ 40 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ರವೀಂದ್ರ ಜಡೇಜಾ (2/34) ಮತ್ತು ಇಶಾಂತ್ ಶರ್ಮಾ (2/35) ತಲಾ ಎರಡು ವಿಕೆಟ್ ಪಡೆದರು.
ಭಾರತದ ಸ್ಪಿನ್ ಬೌಲರ್‌ಗಳಾದ ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ಮೋಡಿಗೆ ಉತ್ತರ ನೀಡಲಾಗದ ಆಸೀಸ್ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆಲ್ಲದೆ, ಭಾರತದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ್ದರೂ, ಸ್ಪಿನ್ ವಿರುದ್ಧ ಯಾವುದೇ ತಂತ್ರ ಅಳವಡಿಸಿಕೊಂಡಿರುವುದು ಕಂಡುಬರಲಿಲ್ಲ.
ಆರಂಭದಲ್ಲಿ ಇಶಾಂತ್ ಶರ್ಮಾ ಎರಡು ವಿಕೆಟ್ ಕಬಳಿಸಿದ ನಂತರ, ಅಶ್ವಿನ್ ಮತ್ತು ಜಡೇಜಾ ಆಸೀಸ್ ಬ್ಯಾಟ್ಸ್‌ಮನ್‌ಗಳನ್ನು ಬೆಂಬಿಡದೇ ಕಾಡಿದರು. ಭೋಜನ ವಿರಾಮದ ಹೊತ್ತಿಗೆ 94 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆಸೀಸ್, ನಂತರ ಚೇತರಿಸಿಕೊಳ್ಳಲು ಯತ್ನಿಸಿತಾದರೂ, ವಿಕೆಟ್ ಕಳೆದುಕೊಳ್ಳುತ್ತಲೆ ಸಾಗಿತು. ಮೇಲಿಂದ ಮೇಲೆ ಬೌಲರ್‌ಗಳನ್ನು ಬದಲಾಯಿಸುವ ತಂತ್ರ ಬಳಸಿದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈ ಯಶಸ್ಸು ಸಲ್ಲಬೇಕು.
ಮಿಂಚದ ವ್ಯಾಟ್ಸನ್: 3ನೇ ಟೆಸ್ಟ್ ಪಂದ್ಯದಿಂದ ಕೈಬಿಡುವ ಮೂಲಕ ತವರಿಗೆ ಮರಳಿದ್ದ ಶೇನ್ ವ್ಯಾಟ್ಸನ್, ನಾಯಕತ್ವದ ಹೊಣೆಗಾರಿಕೆ ಹೊತ್ತು 4ನೇ ಟೆಸ್ಟ್‌ನಲ್ಲಿ ಅಂಗಣಕ್ಕಿಳಿದು ಭರವಸೆ ಮೂಡಿಸಿದ್ದರು. ಆದರೆ, ಜಡೇಜಾ ಬೌಲಿಂಗ್‌ನಲ್ಲಿ ನಾಯಕ ಧೋನಿ ಸ್ಟಂಪ್ ಮಾಡುವ ಮೂಲಕ ವ್ಯಾಟ್ಸನ್‌ಗೆ (17) ಪೆವಿಲಿಯನ್ ಹಾದಿ ತೋರಿದರು.
ಇನ್ನು ಸಿಲ್ಲಿ ಪಾಯಿಂಟ್‌ನಲ್ಲಿ ಕ್ಯಾಚ್ ನೀಡಿದ ಮ್ಯಾಥ್ಯೂ ವೇಡ್ ಪೆವಿಲಿಯನ್‌ಗೆ ವಾಪಾಸಾಗುವುದರೊಂದಿಗೆ ಅಶ್ವಿನ್, ತಮ್ಮ ಎರಡನೇ ವಿಕೆಟ್ ಪಡೆದರು. ಇನ್ನು ಐಪಿಎಲ್‌ನಲ್ಲಿ ಹೆಚ್ಚಿನ ಮೊತ್ತಕ್ಕೆ ಹರಾಜಾದ ಗ್ಲೆನ್ ಮ್ಯಾಕ್ಸ್‌ವೆಲ್ ಇಶಾಂತ್ ಶರ್ಮಾ ಬೌಲಿಂಗ್‌ನಲ್ಲಿ ಢಿಮಿಡ್- ಆನ್‌ನಲ್ಲಿ ಸುಲಭ ಕ್ಯಾಚ್ ನೀಡುವ ಮೂಲಕ ಪ್ರವಾಸಿ ತಂಡದಲ್ಲಿನ ಆತಂಕ ಹೆಚ್ಚಾಯಿತು.
ಇನ್ನು ಅಶ್ವಿನ್ ಬೌಲಿಂಗ್ ಆಫ್ ಸ್ಟಂಪ್‌ಗೆ ಬಡಿಯುತ್ತದೆ ಎಂಬ ಸುಳಿವು ಅರಿಯದಾದ ಮಿಚೆಲ್ ಜಾನ್ಸನ್ ನಿರಾಯಾಸವಾಗಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಒಂದು ಹಂತದಲ್ಲಿ 106 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ, ನಂತರ 136 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಮತ್ತಷ್ಟು ಸಂಕಷ್ಟದಲ್ಲಿ ಸಿಲುಕಿತು.
ಅಂತಿಮವಾಗಿ 231 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದು ಆಸೀಸ್‌ಗೆ ಹಿನ್ನಡೆಯಾಗಿ ಪರಿಣಮಿಸಿದೆ. ಹೀಗಾಗಿ ಆಸೀಸ್ ಅಂತಿ ಪಂದ್ಯದಲ್ಲಿ ಒತ್ತಡದಲ್ಲಿ ಸಿಲುಕಿದೆ.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 231/8 (98 ಓವರ್)
ಎಡ್ ಕೋವನ್ ಬಿ ಅಶ್ವಿನ್ 38, ಡೇವಿಡ್ ವಾರ್ನರ್ ಸಿ ಕೊಹ್ಲಿ ಬಿ ಶರ್ಮಾ 0, ಫಿಲಿಪ್ ಹ್ಯೂಸ್ ಬಿ ಶರ್ಮಾ 45, ಶೇನ್ ವ್ಯಾಟ್ಸನ್ ಸ್ಟಂಪ್ ಧೋನಿ ಬಿ ಜಡೇಜಾ 17, ಸ್ಟೀವನ್ ಸ್ಮಿತ್ ಸಿ ರಹಾನೆ ಬಿ ಅಶ್ವಿನ್ 46, ಮ್ಯಾಥ್ಯೂ ವೇಡ್ ಸಿ ವಿಜಯ್ ಬಿ ಅಶ್ವಿನ್ 2, ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಶರ್ಮಾ ಬಿ ಜಡೇಜಾ 10, ಮಿಚೆಲ್ ಜಾನ್ಸನ್ ಬಿ ಅಶ್ವಿನ್ 3, ಪೀಟರ್ ಸಿಡ್ಲ್ ಅಜೇಯ 47, ಜೇಮ್ಸ್ ಪ್ಯಾಟಿನ್ಸನ್ ಅಜೇಯ 11, ಇತರೆ 12.
ವಿಕೆಟ್ ಪತನ: 1/4, 2/71, 3/106, 4/115, 5/117, 6/129, 7/136, 8/189.
ಬೌಲಿಂಗ್: ಭುವನೇಶ್ವರ 9-1-43-0, ಇಶಾಂತ್ 14-3-35-2, ಅಶ್ವಿನ್ 30-17-40-4, ಪ್ರಗ್ಯಾನ್ ಓಜಾ 23-6-67-0, ರವಿಂದ್ರ ಜಡೇಜಾ 22-6-34-2.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments