ಬೃಹತ್ ಮೊತ್ತದತ್ತ ಕಿವೀಸ್ ಚಿತ್ತ
ಆಕ್ಲೆಂಡ್: ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳು ಡ್ರಾ ಫಲಿತಾಂಶ ಕಂಡಿದ್ದು, ಶುಕ್ರವಾರದಿಂದ ಆರಂಭವಾದ 3ನೇ ಟೆಸ್ಟ್ ಪಂದ್ಯ ಸರಣಿಯ ನಿರ್ಣಾಯಕ ಪಂದ್ಯವಾಗಿದೆ. ಪಂದ್ಯದ ಮೊದಲ ದಿನ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದ ಕಿವೀಸ್ ಬ್ಯಾಟ್ಸ್‌ಮನ್‌ಗಳು, ತಂಡಕ್ಕೆ ದಿನದ ಗೌರವ ಸಲ್ಲುವಂತೆ ಮಾಡಿದರು. ಟಾಸ್ ಗೆದ್ದರೂ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಆಂಗ್ಲರು, ಕಿವೀಸ್ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಕಿವೀಸ್ ತಂಡ ಮೊದಲ ದಿನಾಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 250 ರನ್‌ಗಳಿಸಿದ್ದು, ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದೆ. ಕಿವೀಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಫುಲ್ಟಾನ್ ಹಾಗೂ ರೂಥರ್‌ಫೋರ್ಡ್ ತಂಡಕ್ಕೆ 79 ರನ್‌ಗಳ ಉತ್ತಮ ಜತೆಯಾಟ ನೀಡಿದರು. ರಕ್ಷಣಾತ್ಮಕ ಹಾಗೂ ನಿಧಾನ ಗತಿಯ ಆಟಕ್ಕೆ ಮುಂದಾದ ಕಿವೀಸ್‌ನ ಆರಂಭಿಕರು ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ತಂಡದ ಮೊತ್ತ 79ರನ್ ಆಗಿದ್ದಾಗ ಫಿನ್ ಎಸೆತದಲ್ಲಿ ಇಂಗ್ಲೆಂಡ್ ನಾಯಕ ಕುಕ್‌ಗೆ ಕ್ಯಾಚ್ ನೀಡಿದ ರೂಥರ್‌ಫೋರ್ಡ್ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಈ ವೇಳೆ 77 ಎಸೆತಗಳನ್ನು ಎದುರಿಸಿದ ರೂಥರ್‌ಫೋರ್ಡ್ 37 ರನ್‌ಗಳಿಸಿದ್ದರು.
ನಂತರ ಜತೆಯಾದ ಫುಲ್ಟಾನ್ ಹಾಗೂ ವಿಲಿಯಮ್‌ಸನ್ ತಂಡಕ್ಕೆ ಉತ್ತಮ ಜತೆಯಾಟ ನೀಡಿದರು. ಈ ಜೋಡಿ ದಿನಾಂತ್ಯಕ್ಕೆ ಮುರಿಯದ 171 ರನ್‌ಗಳ ಜತೆಯಾಟ ನೀಡಿತು. ಆರಂಭಿಕ ಫುಲ್ಟಾನ್ 15 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 124 ರನ್‌ಗಳಿಸಿದ್ದು, ವಿಲಿಯಮ್‌ಸನ್ 13 ಬೌಂಡರಿಗಳೊಂದಿಗೆ ಅಜೇಯ 83 ರನ್‌ಗಳಿಸಿದ್ದಾರೆ. ಈ ಇಬ್ಬರು ಎರಡನೇ ದಿನ ತಮ್ಮ ಬ್ಯಾಟಿಂಗ್ ಮುಂದುವರಿಸಲಿದ್ದು, ತಂಡ ಬೃಹತ್ ಮೊತ್ತ ಪೇರಿಸುವತ್ತ ಗಮನ ಹರಿಸುತ್ತಿದೆ.
2ನೇ ಸ್ಥಾನಕ್ಕೆ ಕುತ್ತು: ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್‌ಷಿಪ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಭಾರತ ಹಾಗೂ ಇಂಗ್ಲೆಂಡ್ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಇಂಗ್ಲೆಂಡ್ ತನ್ನ 2ನೇ ಸ್ಥಾನವನ್ನು ಉಳಿಸಿಕೊಳ್ಳಲು ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಗೆಲ್ಲಲೇಬೇಕಿದೆ.
ಇತ್ತ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 3-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದ್ದು ನಾಲ್ಕನೇ ಪಂದ್ಯದ ಮೊದಲ ದಿನ ಉತ್ತಮ ಪ್ರದರ್ಶನ ತೋರಿರುವ ಭಾರತ ಇಂಗ್ಲೆಂಡ್‌ನ 2ನೇ ಸ್ಥಾನವನ್ನು ಅಲುಗಾಡಿಸುತ್ತಿದೆ. ಇಂಗ್ಲೆಂಡ್ ತನ್ನ 2ನೇ ಸ್ಥಾನ ಉಳಿಸಿಕೊಳ್ಳಬೇಕಾದರೆ ಕಿವೀಸ್ ವಿರುದ್ಧ ಸರಣಿ ಜಯಿಸಬೇಕು ಜತೆಗೆ ಭಾರತ ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ ಸೋಲನುಭವಿಸಬೇಕಿದೆ. ಒಂದುವೇಳೆ ಇಂಗ್ಲೆಂಡ್ ಸರಣಿ ಗೆಲ್ಲಲು ವಿಫಲವಾಗಿ, ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಭಾರತಕ್ಕೆ 2ನೇ ಸ್ಥಾನ ದೊರಕಲಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.