3ನೇ ಟೆಸ್ಟ್: ಆಂಗ್ಲರಿಗೆ ಸ್ಟೀವನ್ ಫಿನ್ ಆಶ್ರಯ
ಅಕ್ಲೆಂಡ್: ವೇಗದ ಬೌಲರ್ ಸ್ಟೀವನ್ ಫಿನ್ ಆಕರ್ಷಕ ಬೌಲಿಂಗ್ ನೆರವಿನೊಂದಿಗೆ ಈಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಮತ್ತು 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ತಿರುಗೇಟು ನೀಡಿದೆ.
ಎರಡನೇ ದಿನಾಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 50 ರನ್ ಗಳಿಸಿರುವ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ನಲ್ಲಿ ಕಿವೀಸ್ ಮೊತ್ತವನ್ನು ಸರಿಗಟ್ಟಬೇಕಾದರೆ ಇನ್ನೂ 393 ರನ್ ಗಳಿಸಬೇಕಾಗಿದೆ.
ಇದಕ್ಕೂ ಮುನ್ನ ದಿನದ ಆಟ ಆರಂಭಿಸಿದ ನ್ಯೂಜಿಲೆಂಡ್ ಫಿನ್ ಬೌಲಿಂಗ್ ದಾಳಿಗೆ ಸಿಲುಕುವ ಮೂಲಕ 443 ರನ್ಗಳಿಗೆ ಆಲೌಟ್ ಆಯಿತು. ಆಕರ್ಷಕ ಶತಕ ಸಿಡಿಸಿದ ಪೀಟರ್ ಫುಲ್ಟಾನ್ (136) ವಿಕೆಟ್ ಪಡೆಯುವಲ್ಲಿ ಫಿನ್ ಯಶಸ್ವಿಯಾದರು. ಅಲ್ಲದೆ ಕೇವಲ 21 ರನ್ ಗಳಿಸುವುದರೊಳಗೆ ನ್ಯೂಜಿಲೆಂಡ್ನ ಅಂತಿಮ 4 ವಿಕೆಟ್ ಪಡೆಯುವಲ್ಲಿ ಫಿನ್ ಯಶಸ್ವಿಯಾದರು.
ಆದರೆ, ಆರಂಭಿಕ ಆಟಗಾರ ಮತ್ತು ನಾಯಕ ಅಲೆಸ್ಟೆರ್ ಕುಕ್ (4) ಹಾಗೂ ಜೋನಾಥನ್ ಟ್ರಾಟ್ (27) ಬೇಗನ ಪೆವಿಲಿಯನ್ಗೆ ನಿರ್ಗಮಿಸಿದ್ದು ಇಂಗ್ಲೆಂಡ್ಗೆ ಕೊಂಚ ಹಿನ್ನೆಡೆ ಉಂಟುಮಾಡಿದೆ.
ದಿನಾಂತ್ಯಕ್ಕೆ ನಿಕ್ ಕಾಂಪ್ಟನ್ (ಅಜೇಯ 12) ಮತ್ತು ಇಯಾನ್ ಬೆಲ್ (ಅಜೇಯ 6) ಕ್ರೀಸ್ನಲ್ಲಿದ್ದರು. ಆದರೆ, ಮೊದಲ ದಿನ ಕೇವಲ 1 ವಿಕೆಟ್ ನಷ್ಟಕ್ಕೆ 250 ರನ್ ಗಳಿಸಿದ್ದ ನ್ಯೂಜಿಲೆಂಡ್ ಎರಡನೇ ದಿನ ಲಗುಬಗನೆ ವಿಕೆಟ್ ಒಪ್ಪಿಸಿತು. ಆದರೆ, ಆಂಗ್ಲರಿಗೆ ಆರಂಭಿಕ ಆಘಾತ ನೀಡುವ ಮೂಲಕ ಅದು ತೃಪ್ತಿಪಟ್ಟಿದೆ.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 443/10
ಪೀಟರ್ ಫುಟ್ಲಾನ್ 136, ಕೇನ್ ವಿಲಿಮ್ಸನ್ 91
ಬೌಲಿಂಗ್: ಫಿನ್ 125/6, ಆ್ಯಂಡ್ರಸನ್ 79/2
ಇಂಗ್ಲೆಂಡ್ 50/2
ಟ್ರಾಟ್ 27, ಕಾಂಪ್ಟನ್ 12
ಬೌಲಿಂಗ್: ಬೊಲ್ಟ್ 26/2, ಸೌಥೀ 12/0
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.