ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಲಯಾನ್ ಬಿರುಗಾಳಿಗೆ ಭಾರತ ತತ್ತರ

Parashurama
Updated On : 23 Mar 2013, 10:44 am

ನವದೆಹಲಿ: ಆಸೀಸ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್‌ನ ತಮ್ಮ ಮೊದಲ ಇನಿಂಗ್ಸ್‌ನಲ್ಲಿ ಭಾರತ, ಕೇವಲ 4 ರನ್‌ಗಳ ಮುನ್ನಡೆಯನ್ನು ಗಳಿಸಿದೆ. ಆಸೀಸ್‌ನ ಮೊದಲ ಇನಿಂಗ್ಸನ್ನು ಕೇವಲ 262 ರನ್‌ಗಳಿಗೆ ನಿಯಂತ್ರಿಸಿದ ಭಾರತ, ಶನಿವಾರ ದಿನಾಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿದೆ.
ಆಸೀಸ್ ತಂಡವನ್ನು 262 ರನ್‌ಗಳಿಗೆ ನಿಯಂತ್ರಿಸಿ, ಉತ್ಸಾಹದಿಂದಲೇ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ನೇಥನ್ ಲಯಾನ್ ಮಾರಕವಾಗಿ ಪರಿಣಮಿಸಿದರು.
ಭಾರತದ ಐದು ವಿಕೆಟ್‌ಗಳನ್ನು ಕಬಳಿಸಿದ ಅವರು, ಭಾರತದ ಇನಿಂಗ್ಸನ್ನು ಜರ್ಝರಿತಗೊಳಿಸಿದರು.
ಆದರೆ, ಲಯಾನ್‌ರ ಈ ದಾಳಿಯ ಹೊರತಾಗಿಯೂ ಭಾರತ ತಂಡ, ಹೋರಾಟದ ಛಾತಿ ತೋರಿದ್ದು ದಿನದ ಗಮನಾರ್ಹ ಅಂಶಗಳಲ್ಲೊಂದು. ಚೇತೇಶ್ವರ ಪೂಜಾರ (52), ಮುರಳಿ ವಿಜಯ್ (57), ರವೀಂದ್ರ ಜಡೇಜಾ (43) ಅವರ ಧೃತಿಗೆಡದ ಹೋರಾಟ, ಭಾರತದ ಇನಿಂಗ್ಸ್‌ಗೆ ಶಕ್ತಿ ತುಂಬಿತು.
ಭಾರತ ಇನಿಂಗ್ಸ್ ಆರಂಭವಾದ ಕೂಡಲೇ ಆಸೀಸ್‌ಗೆ ಅಂಥಾ ಯಶಸ್ಸೇನೂ ಸಿಕ್ಕಿರಲಿಲ್ಲ. ಆರಂಭಿಕರಾದ ಮುರಳಿ ವಿಜಯ್ ಹಾಗೂ ಚೇತೇಶ್ವರ ಪೂಜಾರ ಮೊದಲ ವಿಕೆಟ್‌ಗೆ 108 ರನ್‌ಗಳ ಜೊತೆಯಾಟವಾಡಿ, ಇನಿಂಗ್ಸ್‌ಗೆ ಉತ್ತಮ ಬುನಾದಿ ಹಾಕಿದರು. ಭಾರತದ ಇನಿಂಗ್ಸ್‌ಗೆ ಮೇಲಿಂದ ಮೇಲೆ ಧಕ್ಕೆ ಉಂಟಾಗಿದ್ದು ಸಂಜೆ ಚಹಾ ವಿರಾಮದ ನಂತರ. ಈ ಹಂತದಲ್ಲಿ ಭಾರತ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಇಡೀ ಸರಣಿಯಲ್ಲಿ ಆಸೀಸ್ ಬೌಲರ್‌ಗಳು ಕಂಡ ಚಮತ್ಕಾರಿ ಯಶಸ್ಸು.
ತಪ್ಪಿದ ಲೆಕ್ಕಾಚಾರ?: ಭಾರತದ ನಿರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡೇ ಫಿರೋಜ್ ಶಾ ಕೋಟ್ಲಾ ಮೈದಾನದ ಪಿಚ್ ಅನ್ನು ತಯಾರಿಸಲಾಗಿತ್ತಾದರೂ, ಭಾರತದ ಅಗ್ರ ಕ್ರಮಾಂಕದ ಬ್ಯಾಟಿಂಗ್ ತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಪೂಜಾರ ಹಾಗೂ ಮೊದಲ ಟೆಸ್ಟ್ ಆಡುತ್ತಿರುವ ಅಜಿಂಕ್ಯ ರಹಾನೆ ಅವರ ಬಲಿ ಪಡೆದ ಲಯಾನ್, ಪಿಚ್ ತಯಾರಕ ವೆಂಕಟ್ ಸುಂದರಂ ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದರು.
ಡೆಲ್ಲಿ ಗೇಟ್ ಎಂಡ್‌ನಿಂದ ಬೌಲ್ ಮಾಡಿದ ಲಯಾನ್, ಹದಗೆಟ್ಟಿದ್ದ ಪಿಚ್‌ನ ಸ್ಥಿತಿಯ ಲಾಭ ಪಡೆದರು. ಕರಾರುವಾಕ್ ಬೌಲಿಂಗ್ ಅಲ್ಲದಿದ್ದರೂ, ಲಯಾನ್ ಅವರು ಅಲ್ಲಲ್ಲಿ ಅವಲಕ್ಷಣವಾದ ಬೌನ್ಸರ್‌ಗಳನ್ನು ಎಸೆಯುವ ಮೂಲಕ, ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೂ ಲಯಾನ್ ಅವರ ದಾಳಿಯನ್ನು ಎದುರಿಸಲು ಕೊಂಚ ಕಷ್ಟವಾಯಿತು.
ಅಗ್ರ ಕ್ರಮಾಂಕದ ಕುಸಿತದ ಹೊರತಾಗಿಯೂ, ಕ್ರೀಸ್‌ನಲ್ಲಿ ಹೋರಾಟ ಮಾಡಿದ ರವೀಂದ್ರ ಜಡೇಜಾ, ಕೊಂಚ ಬಿರುಸಾಗಿ ಬ್ಯಾಟ್ ಬೀಸಿದರು. ಕೇವಲ 49 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 43 ರನ್ ಬಾರಿಸಿದ ಅವರು, ಆಸೀಸ್ ಬೌಲಿಂಗ್‌ಗೆ ಪ್ರತಿರೋಧ ತೋರಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಅವರು ಎಲ್‌ಬಿಡಬ್ಲ್ಯೂಗೆ ಒಳಗಾಗುವ ಮೂಲಕ ಅವರ ಆರ್ಭಟ ಅಂತ್ಯಗೊಂಡಿತು. ಆದರೆ, ಜಡೇಜಾಗೆ ಎಲ್‌ಬಿಡಬ್ಲ್ಯೂ ನೀಡಿದ ಅಂಪೈರ್ ನಿರ್ಣಯ ಮಾತ್ರ ಪ್ರಶ್ನಾರ್ಹವಾಗಿತ್ತು.
ಲಯಾನ್ ಜೊತೆಗೆ, ಉತ್ತಮ ಲೈನ್ ಹಾಗೂ ಲೆಂತ್ ಮೂಲಕ ದಾಳಿ ನಡೆಸಿದ ಪ್ಯಾಟಿನ್ಸನ್ ಹಾಗೂ ಪೀಟರ್ ಸಿಡ್ಲ್ ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.
ಆರಂಭದಲ್ಲೇ ಮುರಳಿ ವಿಜಯ್ ಅವರ ವಿಕೆಟ್ ಅನ್ನು ಸಿಡ್ಲ್ ಕೆಡವಿದರೆ, ಪ್ಯಾಟಿನ್ಸನ್ ಅವರು, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಹೊರಹಾಕಿದರು. ಅಂತಿಮವಾಗಿ, ದಿನಾಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತು.
ಇದಕ್ಕೂ ಮುನ್ನ ಆಸೀಸ್‌ನ ಮೊದಲ ಇನಿಂಗ್ಸನ್ನು ಪೀಟರ್ ಸಿಡ್ಲ್ ಹಾಗೂ ಪ್ಯಾಟಿನ್ಸನ್ ಇಬ್ಬರೂ ಮುಂದುವರೆಸಿದರು. ಶುಕ್ರವಾರ ದಿನಾಂತ್ಯಕ್ಕೆ ಅಜೇಯರಾಗಿ ಉಳಿದಿದ್ದ ಈ ಇಬ್ಬರೂ 9ನೇ ವಿಕೆಟ್‌ಗೆ 54 ರನ್ ಸೇರಿಸಿದರು. ಅಶ್ವಿನ್ ಎಸೆತದಲ್ಲಿ ಸಿಡ್ಲ್ ಅವರು ಕ್ಲೀನ್‌ಬೌಲ್ಡ್ ಆದರೆ, ಪ್ಯಾಟಿನ್ಸನ್ ಅವರು ಪ್ರಗ್ಯಾನ್ ಓಜಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮ ಬ್ಯಾಟ್ಸಮನ್ ಲಯಾನ್ ಒಬ್ಬರೇ ಅಜೇಯರಾಗಿ ಉಳಿದರು. ಒಟ್ಟು 262 ರನ್‌ಗಳಿಗೆ ಆಸೀಸ್ ಸರ್ವಪತನ ಕಂಡಿತು.

ಸ್ಕೋರ್ ಬೋರ್ಡ್
ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 262
(ಶುಕ್ರವಾರ ದಿನಾಂತ್ಯಕ್ಕೆ 231/8)
ಸಿಡ್ಲ್ ಬಿ ಅಶ್ವಿನ್ 51, ಪ್ಯಾಟಿನ್ಸನ್ ಸಿ ಕೊಹ್ಲಿ ಬಿ ಓಜಾ 30, ಇತರೆ 12.
ವಿಕೆಟ್ ಪತನ: 9-243, 10-262
ಬೌಲಿಂಗ್:
ಭುವನೇಶ್ವರ್ 9-1-43-0,
ಇಶಾಂತ್ ಶರ್ಮಾ 14-3-35-2,
ಅಶ್ವಿನ್ 34-18-57-5,
ಪ್ರಗ್ಯಾನ್ 26.1-6-75-1,
ಜಡೇಜಾ 29-8-40-2
ಭಾರತ ಪ್ರಥಮ ಇನಿಂಗ್ಸ್ 266/8 (68.1 ಓವರ್)
(ಶನಿವಾರ ದಿನಾಂತ್ಯಕ್ಕೆ)
ಮುರಳಿ ವಿಜಯ್ ಸಿ ವೇಡ್ ಬಿ ಸಿಡ್ಲ್ 57, ಪೂಜಾರ ಬಿ ಲಯಾನ್ 52,  ವಿರಾಟ್ ಕೊಹ್ಲಿ ಎಲ್‌ಬಿಡಬ್ಲ್ಯೂ ಲಯಾನ್ 1, ಸಚಿನ್ ತೆಂಡೂಲ್ಕರ್ ಎಲ್‌ಬಿಡಬ್ಲ್ಯೂ ಬಿ ಲಯಾನ್ 32,
ರಹಾನೆ ಸಿ ಸ್ಮಿತ್ ಬಿ ಲಿಯನ್ 7,
ಧೋನಿ ಸಿ ವ್ಯಾಟ್ಸನ್ ಬಿ ಪ್ಯಾಟಿನ್ಸನ್ 24, ಜಡೇಜಾ ಎಲ್‌ಬಿಡಬ್ಲ್ಯೂ ಬಿ ಮ್ಯಾಕ್ಸ್‌ವೆಲ್ 43, ಅಶ್ವಿನ್ ಎಲ್‌ಬಿಡಬ್ಲ್ಯೂ ಬಿ ಲಯಾನ್ 12, ಭುವನೇಶ್ವರ್ ಅಜೇಯ 10. ಇತರೆ 28
ವಿಕೆಟ್ ಪತನ: 1-108, 2-114, 3-148, 4-165, 5-180, 6-210, 7-254, 8-266.
ಜಾನ್ಸನ್ 17-3-44-0,
ಪ್ಯಾಟಿನ್ಸನ್ 14-1-54-1,
ಸಿಡ್ಲ್ 12-3-38-1,
ಲಯಾನ್ 22.1-3-94-5
ಮ್ಯಾಕ್ಸ್‌ವೆಲ್ 3-0-8-1

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments