ದೆಬೋರಾ ಭವಿಷ್ಯದ ಭರವಸೆ
ಆಕೆ ಆಗಿನ್ನೂ ಕೇವಲ 9 ವರ್ಷದ ಬಾಲಕಿ. ಸುನಾಮಿಯಲ್ಲಿ ತನ್ನ ಕುಟುಂಬವನ್ನು...
ಆಕೆ ಆಗಿನ್ನೂ ಕೇವಲ 9 ವರ್ಷದ ಬಾಲಕಿ. ಸುನಾಮಿಯಲ್ಲಿ ತನ್ನ ಕುಟುಂಬವನ್ನು ಉಳಿಸಿಕೊಳ್ಳುವ ಧಾವಂತದಲ್ಲಿ ಇಡೀ ಕುಟುಂಬದೊಂದಿಗೆ ಕಾಡಿನಲ್ಲಿ ಓಡುತ್ತಿದ್ದಳು. ಆದರೆ, ಇನ್ನು 9 ವರ್ಷಗಳ ನಂತರ ನಾನು ವಿಶ್ವ ಸೈಕ್ಲಿಂಗ್ನಲ್ಲಿ ಹೆಸರು ಮಾಡುತ್ತೇನೆ, ಎಂದು ಆಕೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಕಾರಣ 2004ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ಗೆ ಅಪ್ಪಳಿಸಿದ ಸುನಾಮಿಯಲ್ಲಿ ಮನೆ ಮಠವನ್ನು ಕಳೆದುಕೊಂಡು ಕೇವಲ ಜೀವ ಉಳಿಸಿಕೊಳ್ಳಲು ಮರವೇರಿ ಕುಳಿತವಳಿಗೆ ತಿನ್ನುವ ತುತ್ತು ಸಹ ತಾತ್ವಾರವಾಗಿತ್ತು. ಆಗ ಒಂದು ದಿನ ಪೂರ್ತಿ ಮರವೊಂದರ ಮೇಲೇ ಕಳೆದಿದ್ದನ್ನು ಇನ್ನೂ ಮರೆತಿಲ್ಲ ದೆಬೋರಾ. ಜೀವ ಉಳಿಯುವ ಭರವಸೆ ಇಲ್ಲದಂತಹ ಸಂದರ್ಭದಲ್ಲಿ ಭವಿಷ್ಯದಲ್ಲಿ ತಾನು ವಿಶ್ವ ಸೈಕ್ಲಿಂಗ್ನಲ್ಲಿ ಮಿಂಚಬಲ್ಲೆ ಎಂಬ ಕನಸನ್ನು ಯಾರು ತಾನೆ ಕಾಣಲು ಸಾಧ್ಯ. ಆದರೆ, ಇಂದು ಅದು ಸಾಧ್ಯವಾಗಿದೆ. ಸುನಾಮಿಯಲ್ಲಿ ಬದುಕುಳಿದ ನಂತರ ಸರ್ಕಾರದ ನೆರವಿನಿಂದ ಆಕೆ ಹೊಸ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಏಷ್ಯನ್ ಸೈಕ್ಲಿಂಗ್ನಲ್ಲಿ ಮಹತ್ವದ ಸಾಧನೆ ಮಾಡಿದ ನಂತರ, ನೈಸರ್ಗಿಕ ವಿಕೋಪದಲ್ಲಿ ಬದುಕಿಳಿದವರೂ ಇತರರ ಭವಿಷ್ಯಕ್ಕೆ ಮಾದರಿಯಾಗಬಲ್ಲರೂ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಸೈಕ್ಲಿಂಗ್ ದಾರಿ ತೋರಿದ ಕೋಚ್
2004ರಲ್ಲಿ ಸುನಾಮಿ ಘಟಿಸಿದಾಗ ನಿಕೋಬಾರ್ನಲ್ಲಿದ್ದ ದೆಬೋರಾ ತಮ್ಮ ತಂದೆ, ತಾಯಿ ಹಾಗೂ ತಮ್ಮನೊಂದಿಗೆ ಜೀವ ಉಳಿಸಿಕೊಳ್ಳಲು ಮಾಡಿದ ಹರಸಾಹಸ ಅಷ್ಟಿಸ್ಟಲ್ಲ. ಆದರೆ, ಸುನಾಮಿಯಲ್ಲಿ ಬದುಕಿಳಿದ ನಂತರ ದೆಬೋರಾ, ಹೈಜಂಪ್, ಲಾಂಗ್ ಜಂಪ್ ಶಾಟ್ಪುಟ್ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದರಂತೆ. ಅದರಲ್ಲೇ ಭವಿಷ್ಯ ಕಂಡುಕೊಳ್ಳಲು ದೆಬೋರಾ ನಿರ್ಧರಿಸಿದ್ದರಂತೆ. ಆದರೆ, ಸ್ಥಳೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಆಕೆಯ ಪ್ರತಿಭೆಯನ್ನು ಗುರುತಿಸಿದ ಅವರ ಕೋಚ್ ಸೆನಸಾರ್, ಸೈಕ್ಲಿಂಗ್ನಲ್ಲೇ ಮುಂದುವರೆಯುವಂತೆ ಸಲಹೆ ನೀಡಿದರಂತೆ. ಆಗಿನಿಂದ ಸೈಕಲ್ ಪೆಡಲ್ ತುಳಿಯತೊಡಗಿದ ದೆಬೋರಾ ಇಂದು ವಿಶ್ವದ ಗಮನ ಸೆಳೆದಿದ್ದಾರೆ.
ಏಷ್ಯನ್ ಸೈಕ್ಲಿಂಗ್ನಲ್ಲಿ ಮೂರು ಪದಕ
ದೆಬೋರಾ ಸುನಾಮಿಯಲ್ಲಿ ಬದುಕಿ ಬಂದ ಬಾಲಕಿ ಎಂಬುದು ಬೆಳಕಿಗೆ ಬಂದಿದ್ದೇ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಏಷ್ಯನ್ ಜೂನಿಯರ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಮೆರದ ದೆಬೋರಾ, ಒಂದು ಬೆಳ್ಳಿ ಹಾಗೂ 2 ಕಂಚಿನ ಪದಕ ಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟವೊಂದರಲ್ಲೇ ಇಷ್ಟೊಂದು ಸಾಧನೆ ಮಾಡಿರುವ ದೆಬೋರಾ ಭಾರತದ ಭರವಸೆಯ ಸೈಕ್ಲಿಸ್ಟ್ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ಜೂನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್
ಆರಂಭದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ಪಡೆಯುತ್ತಿದ್ದ ದೆಬೋರಾ, ಅಮೃತಸರದಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಪಡೆದ ನಂತರ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ಗೆ ಆಕೆಯಲ್ಲಿರುವ ಪ್ರತಿಭೆಯ ಬಗ್ಗೆ ತಿಳಿದು ಬಂದಿದೆ. ಆಕೆಯಲ್ಲಿನ ಸೈಕ್ಲಿಂಗ್ ಆಸಕ್ತಿಯನ್ನು ಗುರುತಿಸಿ, ದೆಹಲಿಯಲ್ಲಿ ನಡೆಯುತ್ತಿರುವ ಸೈಕ್ಲಿಂಗ್ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಕಳೆದ ವರ್ಷ ಆಗಸ್ಟ್ನಿಂದ ಆಕೆಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಭಾಷಾ ಸಮಸ್ಯೆ
ನಿಕೋಬಾರ್ ದ್ವೀಪದಲ್ಲಿ ಬೆಳೆದಿರುವ ದೆಬೋರಾಗೆ ಹಿಂದಿ ಅಥವಾ ಇಂಗ್ಲೀಷ್ನಲ್ಲಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಆದರೆ, ಆಕೆಯ ಬದುಕಿನ ಏಳುಬೀಳುಗಳನ್ನು ಅರ್ಥ ಮಾಡಿಕೊಳ್ಳಲು ಆಕೆಗೆ ಗೊತ್ತಿರುವ ಅಲ್ಪ ಮಟ್ಟದ ಹಿಂದಿ ಭಾಷೆ ಸಾಕೆನಿಸುತ್ತದೆ. ಏನೆಲ್ಲ ಕೊರತೆಗಳ ಮಧ್ಯೆ, ಬೆಟ್ಟದಂತಹ ಸಮಸ್ಯೆಗಳ ನಡುವೆ ಅರಳುತ್ತಿರುವ ಪ್ರತಿಭೆ ವಿಶ್ವಮಟ್ಟದಲ್ಲಿ ಅರಳಲಿ ಎಂಬುದು ನಮ್ಮಲ್ಲರ ಹಾರೈಕೆ ಅಲ್ಲವೆ?