ಬರದ ನಾಡಿಗೂ ಬಂತು ಕ್ರಿಕೆಟ್
ಭಾರತದಲ್ಲಿ ಕ್ರಿಕೆಟ್ ಯಾವತ್ತೂ ಜನಪ್ರಿಯ ಕ್ರೀಡೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಂದದಂತೆ ನೋಡಿಕೊಳ್ಳಲು ಹಲವು ಪ್ರತಿಭಾನ್ವಿತರನ್ನು ಬೆಳೆಸುವುದು ಇಂದಿನ ಅವಶ್ಯಕತೆಗಳಲ್ಲೊಂದು. ಕ್ರಿಕೆಟ್ ಅನ್ನು ವೃತ್ತಿಯನ್ನಾಗಿಸಿಕೊಂಡವರಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ಸಮರ್ಥ ಕ್ರಿಕೆಟ್ ಪಟುಗಳು ಇದ್ದಾರೆ. ಅದಕ್ಕೆ ಸಾಕ್ಷಿ - ಇತ್ತೀಚೆಗೆ ಟೊಯೋಟಾ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಆಡಿದ ಹಲವಾರು ಯುವ ಪ್ರತಿಭೆಗಳು ಇದನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ, ಕ್ರಿಕೆಟ್ ಪ್ರತಿಭೆಗಳನ್ನು ಬಾಲ್ಯದಲ್ಲೇ ಗುರುತಿಸಿ ಅವರನ್ನು ಪೋಷಿಸುವ ಕೆಲಸಕ್ಕೆ ಕೈ ಹಾಕಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆ ಈಗ ತನ್ನ ಕಾಯಕವನ್ನು ಜಿಲ್ಲಾ ಕೇಂದ್ರಗಳಿಗೂ ಚಾಚಿದೆ. ಜನರ ಬಳಿಗೇ ಹೋಗಿ, ಪ್ರತಿಭಾನ್ವಿತರನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ನೀಡಿ ಸಾಧನೆ ಹೆಬ್ಬಾಗಿಲು ತೋರುವ ಗುರುತರ ಜವಾಬ್ದಾರಿಯನ್ನು ಅದು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಲಯವಾರು ಕ್ರೀಡಾಂಗಣಗಳನ್ನು ನಿರ್ಮಿಸಿರುವ ಕೆಎಸ್ಸಿಎ, ಅಲ್ಲಿ ಉತ್ತಮ ದರ್ಜೆಯ ಕ್ರೀಡಾಂಗಣಗಳನ್ನು ನಿರ್ಮಿಸುತ್ತಿದೆ. ಕ್ರಿಕೆಟ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸುವ ಹಾಗೂ ಅದನ್ನು ಜಿಲ್ಲಾ ಕೇಂದ್ರಗಳಿಗೂ ತಲುಪಿಸುವ ಮಹತ್ತರ ಆಶಯದೊಂದಿಗೆ ಕೆಎಸ್ಸಿಎ ಹೆಜ್ಜೆ ಇಟ್ಟಿದೆ. ಒಟ್ಟಿನಲ್ಲಿ ಹಳ್ಳಿಯಾದರೇನು ಶಿವಾ, ದಿಲ್ಲಿಯಾದರೇನು ಶಿವಾ... ಎನ್ನುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಅಡಗಿರಬಹುದಾದ ಕ್ರಿಕೆಟ್ ಪ್ರತಿಭೆಗಳನ್ನು ಹುಡುಕಲು ಸಂಸ್ಥೆ ಮಾಡುತ್ತಿರುವ ಪ್ರಯತ್ನಗಳ ಒಂದು ಪಕ್ಷಿನೋಟ ಇಲ್ಲಿದೆ.
ಈಗ ಬೇಸಿಗೆ ಬಂತೆಂದರೆ, ಮಕ್ಕಳಿಗೆ ರಜಾ ದಿನಗಳು ಶುರುವಾಗುತ್ತವೆ. ಹಾಗಾಗಿಯೇ, ಅಂಡರ್ 14, ಅಂಡರ್ 16 ಹಾಗೂ ಅಂಡರ್ 19 ವಿಭಾಗಗಳಲ್ಲಿ ಉಚಿತ ತರಬೇತಿಯನ್ನು ನೀಡಲು ಕೆಎಎಸ್ಸಿಎ ಮುಂದಾಗಿದೆ. ತರಬೇತಿಗಳಿಗಾಗಿ ಸುಸಜ್ಜಿತ ಕ್ರೀಡಾಂಗಣಗಳು, ಅನುಭವಿ ಕೋಚ್ಗಳ ಸಹಾಯದಿಂದ ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಒಂದು ಕ್ರಾಂತಿಕಾರಕ ಹೆಜ್ಜೆಯಿಟ್ಟಿದೆ ಕೆಎಸ್ಸಿಎ. ಅಲ್ಲದೇ, ಹಿಂದುಳಿದ ಪ್ರದೇಶಗಳೆಂಬ ಹಣೆಪಟ್ಟಿ ಕಟ್ಟಿರುವ ಬೀದರ್, ರಾಯಚೂರುಗಳಲ್ಲೂ ಸುಸಜ್ಜಿತ ತರಬೇತಿ ಶಿಬಿರವನ್ನು ಸ್ಥಾಪಿಸಲು ಮುಂದಾಗಿರುವ ಸಂಸ್ಥೆ, ಆ ಬರದ ನಾಡಿನಲ್ಲೂ ಕ್ರಿಕೆಟ್ ಅನ್ನು ಹಚ್ಚಹಸಿರಾಗಿಸಲು ಹೊರಟಿದೆ.
ಈಗಾಗಲೇ, ಮೈಸೂರು, ಶಿವಮೊಗ್ಗಗಳಲ್ಲಿ ಉತ್ತಮ ದರ್ಜೆಯ ಕ್ರೀಡಾಂಗಣಗಳನ್ನು ಹೊಂದಿರುವ ಸಂಸ್ಥೆ, ಇದೀಗ, ಸುತ್ತೂರು, ಹಾಸನ, ಮಂಗಳೂರು ಮುಂತಾದ ಕಡೆಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಿದೆ. ಹಿಂದಿದ್ದ ಎಲ್ಲಾ ತರಬೇತಿ ಕೇಂದ್ರಗಳೊಂದಿಗೆ, ಈ ಬಾರಿ 14 ಕೇಂದ್ರಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಕೇಂದ್ರಗಳೆಂದರೆ, ಬೆಂಗಳೂರಿನಲ್ಲಿ ಐಎಎಫ್, ವೆಬ್ಸ್, ಎಚ್ ಎಎಲ್, ಜೆಎಸ್ಎಸ್ (ಉತ್ತರಹಳ್ಳಿ), ಬಿಇಎಲ್ ಹಾಗೂ ಜಯನಗರಗಳಲ್ಲಿ ಹೊಸ ತರಬೇತಿ ಶಿಬಿರಗಳು ಸ್ಥಾಪನೆಗೊಂಡಿದ್ದರೆ, ಬೆಂಗಳೂರು ಹೊರತುಪಡಿಸಿದಂತೆ, ಬೀದರ್, ಕುಂದಾಪುರ, ಕೊಪ್ಪ, ಕೆ.ಆರ್. ನಗರ, ಪುತ್ತೂರು, ತಿಪಟೂರು, ಗೋಕಾಕ್ ಮುಂತಾದ ಕಡೆಗಳಲ್ಲೂ ಆಧುನಿಕ ಸೌಲಭ್ಯಗಳುಳ್ಳ ತರಬೇತಿ ಶಿಬಿರಗಳು ತಲೆ ಎತ್ತಿವೆ.
ಪ್ರವೇಶ ಹೇಗೆ?
ಲೇಖನದಲ್ಲಿ ಹೇಳಲಾಗಿರುವ ತರಬೇತಿ ಕೇಂದ್ರಗಳಲ್ಲಿ ಇದೇ ಮಾರ್ಚ್. 25ರಿಂದ ಬೇಸಿಗೆ ತರಬೇತಿ ಶಿಬಿರಗಳು ಆರಂಭಗೊಂಡಿವೆ. ಅಂಡರ್ 14, ಅಂಡರ್ 16 ಹಾಗೂ ಅಂಡರ್ 19 ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಅದಕ್ಕಾಗಿ ನೋಂದಾವಣಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಹೆಚ್ಚಿನ ಮಾಹಿತಿಗಳಿಗೆ, 080- 40154092 ಅಥವಾ ಸತೀಶ್ (9886768233)ಗೆ ಸಂಪರ್ಕಿಸಬಹುದು. ವೆಬ್ಸೈಟ್ WWW.KSCA.CO.IN ಗೆ ಭೇಟಿ ನೀಡಬಹುದು.