ಉನ್ಮುಕ್ತ್ ಚಾಂದ್ ಶತಕ; ದಿಲ್ಲಿಗೆ ಭರ್ಜರಿ ಜಯ
ಇಂದೋರ್: ಉನ್ಮುಕ್ತ್ ಚಾಂದ್ ಅವರ ಆಕರ್ಷಕ ಶತಕದ ನೆರವಿನಿಂದಾಗಿ ದಿಲ್ಲಿ ತಂಡ, ಬುಧವಾರ ನಡೆದ ಮುಷ್ತಾಕ್ ಅಲಿ ಚಾಂಪಿಯನ್ಷಿಪ್ನ ಸೂಪರ್ ಲೀಗ್ (ಗ್ರೂಪ್ ಎ) ಪಂದ್ಯದಲ್ಲಿ ಗುಜರಾತ್ ವಿರುದ್ಧ 112 ರನ್ಗಳ ಜಯ ದಾಖಲಿಸಿತು.
ದಿಲ್ಲಿ ಪರವಾಗಿ ಇನಿಂಗ್ಸ್ ಆರಂಭಿದ್ದ 19ರ ಪ್ರಾಯದ ಚಾಂದ್, 63 ಎಸೆತಗಳನ್ನು ಎದುರಿಸಿ, 125 ರನ್ ಗಳಿಸಿದರು. ಅವರ ಇನಿಂಗ್ಸ್ನಲ್ಲಿ ಭರ್ಜರಿ 10 ಸಿಕ್ಸರ್ ಇದ್ದವು. ಇವರ ಶತಕದ ಸಹಾಯದಿಂದ ದಿಲ್ಲಿ ತಂಡ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್, 17.3 ಓವರ್ಗಳಲ್ಲಿ 86 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡಿತು.
ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ದಿಲ್ಲಿ ತಂಡಕ್ಕೆ ಆರಂಭಿಕರಾದ ಉನ್ಮುಕ್ತ್ ಹಾಗೂ ಧ್ರುವ್ ಶೋರೆ ಇಬ್ಬರೂ ಉತ್ತಮ ಆರಂಭ ಒದಗಿಸಿದರು. ಈ ಜೋಡಿ, ಮೊದಲ ವಿಕೆಟ್ಗೆ 61 ರನ್ಗಳ ಜೊತಾಟವಾಡಿತು.
ಇದಾದ ನಂತರ, ಇನಿಂಗ್ಸ್ನಲ್ಲಿ ಮತ್ತೊಂದು ಉತ್ತಮ ಜೊತೆಯಾಟ ಹೊರಬಂದಿದ್ದು ಮೂರನೇ ವಿಕೆಟ್ಗಾಗಿ ಚಾಂದ್ ಹಾಗೂ ಜೋಹರ್ ಕುಮಾರ್ ನಡೆಸಿದ ಜೊತೆಯಾಟದಲ್ಲಿ. ಈ ಜೋಡಿ, ಮೂರನೇ ವಿಕೆಟ್ಗೆ 66 ಎಸೆತಗಳಲ್ಲಿ 110 ರನ್ ಪೇರಿಸಿತು.
ಚಾಂದ್ ವಿಕೆಟ್ ಉರುಳಿದ ನಂತರ, ಕ್ರೀಸ್ಗೆ ಬಂದಿದ್ದ ಆಲ್ರೌಂಡರ್ ಸಮಿತ್ ನರ್ವಾಲ್ (15), 4 ಎಸೆತಗಳಲ್ಲಿ 2 ಸಿಕ್ಸರ್ ಬಾರಿಸಿ, ತಂಡದ ಮೊತ್ತವನ್ನು 200ರ ಗಡಿಯ ಬಳಿ ತಂದು ನಿಲ್ಲಿಸಿದರು. ಅಂತಿಮವಾಗಿ, ದಿಲ್ಲಿ ತಂಡ 20 ಓವರ್ಗಳಲ್ಲಿ 112 ರನ್ ಗಳಿಸಿತು. ಮುಟ್ಟಲು ಬಹುತೇಕ ಅಸಾಧ್ಯವಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ನ ಬ್ಯಾಟ್ಸ್ಮನ್ಗಳು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿದರು. ಅದರ ಪರಿಣಾಮವಾಗಿ, ಗುಜರಾತ್ ಬೇಗಬೇಗನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ಇದರ ನೇರ ಲಾಭ ಪಡೆದ ದಿಲ್ಲಿ ಬೌಲರ್ಗಳು ನಿಗದಿತ ಅಂತರದಲ್ಲಿ ಗುಜರಾತ್ ತಂಡದ ವಿಕೆಟ್ಗಳನ್ನು ಉರುಳಿಸುತ್ತಾ ಸಾಗಿದರು. ವೇಗಿ ಸುಮಿತ್ ನರ್ವಾಲ್ ಅವರು 3 ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ಮನನ್ ಶರ್ಮಾ 2 ವಿಕೆಟ್ ಕಬಳಿಸಿ, ಗುಜರಾತ್ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗುಜರಾತ್ ಪರ ಜೇಸಲ್ ಕಾರಿಯಾ ಅವರು ಗಳಿಸಿದ 24 ರನ್ಗಳೇ ಆ ತಂಡದ ಪರ ಬ್ಯಾಟ್ಸ್ಮನ್ ಗಳಿಸಿದ ಗರಿಷ್ಠ ಮೊತ್ತ. ಇವರ ನಂತರದ ಗರಿಷ್ಠ ಮೊತ್ತ ದಾಖಲಿಸಿದ್ದು ರಾಕೇಶ್ ಧ್ರುವ್ (15 ರನ್).
ಅಂತಿಮವಾಗಿ, 17.3 ಓವರ್ಗಳಲ್ಲಿ ಗುಜರಾತ್ ಕೇವಲ 86 ರನ್ ಮಾತ್ರ ಗಳಿಸಲು ಶಕ್ತವಾಗಿ, 112 ರನ್ಗಳ ದಿಲ್ಲಿ ವಿರುದ್ಧ ಭಾರೀ ಅಂತರದಿಂದ ಪರಾಭವಗೊಂಡಿತು.
ಸಂಕ್ಷಿಪ್ತ ಸ್ಕೋರ್
ದಿಲ್ಲಿ: 198/4 (20 ಓವರ್)
ಉನ್ಮುಕ್ತ್ ಚಾಂದ್ 125, ಮಿಲಿಂದ್ ಕುಮಾರ್ 15
ಬೌಲಿಂಗ್: ಅಕ್ಷರ್ ಪಟೇಲ್ 22/1
ಗುಜರಾತ್: 86 (17.3 ಓವರ್)
ಜೇಸಲ್ ಕಾರಿಯಾ 24, ರಾಕೇಶ್ ಧ್ರುವ್ 15
ಬೌಲಿಂಗ್: ಸುಮಿತ್ ನರ್ವಾಲ್ 15/3, ಮನನ್ ಶರ್ಮಾ 16/2
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.