ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಸಾನಿಯಾ-ಬೆಥಾನಿ

Parashurama
Updated On : 28 Mar 2013, 12:08 pm

ಮಿಯಾಮಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಅವರ ಅಮೆರಿಕಾದ ಜೊತೆಗಾತಿ ಬೆಥಾನಿ ಮ್ಯಾಟೆಕ್-ಸ್ಯಾಂಡ್ಸ್ ಜೋಡಿ, ಸೋನಿ ಓಪನ್ ಮಿಯಾಮಿ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಿಂದ ಹೊರಬಿದ್ದಿದೆ. ಬುಧವಾರ ನಡೆದ ಮಹಿಳೆಯರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಜೋಡಿ, ವಿಶ್ವದ ನಂಬರ್‌ಒನ್ ಜೋಡಿಯಾದ ಸರಾ ಎರ್ರಾನಿ ಹಾಗೂ ರೊಬರ್ಟೊ ವಿನ್ಸಿ ವಿರುದ್ಧ 1-6, 4-6 ಅಂತರದಲ್ಲಿ ಪರಾಭವಗೊಂಡಿತು.
ಕೇವಲ 66 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದಲ್ಲಿರುವ ಸಾನಿಯಾ-ಬೆಥಾನಿ ಜೋಡಿಯನ್ನು ಇಟಲಿಯ ಜೋಡಿ ಪರಾಭವಗೊಳಿಸಿತು.
ಮೊದಲ ಸೆಟ್‌ನ ಆರಂಭದಲ್ಲಿ ಕೊಂಚ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಸಾನಿಯಾ-ಬೆಥಾನಿ, ಎದುರಾಳಿಗಳನ್ನು ಕೊಂಚ ಗಲಿಬಿಲಿಗೊಳಿಸಿದರಲ್ಲದೇ, ಮೊದಲ ಗೇಮ್ ಗೆದ್ದುಕೊಂಡರು. ಆದರೆ, ಮುಂದಿನ ಗೇಮ್‌ನಲ್ಲೇ ಸಾನಿಯಾ-ಬೆಥಾನಿ ವಿರುದ್ಧ ತಿರುಗಿಬಿದ್ದ ಇಟಲಿಯ ಎರ್ರಾನಿ- ರೊಬರ್ಟೊ ಇಬ್ಬರೂ, ಭಾರತ-ಅಮೆರಿಕಾ ಜೋಡಿಗೆ ಆ ಸೆಟ್‌ನಲ್ಲಿ ಚಿಗುರಲು ಅವಕಾಶವನ್ನೇ ಕೊಡಲಿಲ್ಲ.  ಆಕರ್ಷಕ ಹೊಡೆತಗಳಿಗೆ ಸಾನಿಯಾ-ಬೆಥಾನಿ ಅವರನ್ನು ತಬ್ಬಿಬ್ಬಾಗಿಸಿ ಎರ್ರಾನಿ-ರೊಬರ್ಟೊ ಮೊದಲ ಸೆಟ್ ಅನ್ನು ಕೇವಲ 24 ನಿಮಿಷಗಳಲ್ಲಿ 1-6ರ ಅಂತರದಿಂದ ಗೆದ್ದುಕೊಂಡರು.
ಎರಡನೇ ಸೆಟ್‌ನಲ್ಲಿ, ಮತ್ತೆ ತಿರುಗಿಬಿದ್ದ ಭಾರತ-ಅಮೆರಿಕಾ ಜೋಡಿ, ಮೊದಲ ಗೇಮ್ ಅನ್ನು ಅನಾಯಾಸವಾಗಿ ಗೆದ್ದುಕೊಂಡರು.
ಆದರೆ, ಮುಂದಿನ ಗೇಮ್‌ನಿಂದ ಎದುರಾಳಿಗಳ ಆಟ ಜೋರಾಯಿತು. ಉತ್ತಮ ಸರ್ವ್‌ಗಳಿಂದ ಹಾಗೂ ಆಕರ್ಷಕ ಸ್ಟ್ರೋಕ್ ಪ್ಲೇಗಳಿಂದ ಪ್ರತಿರೋಧ ತೋರಿದ ಇಟಲಿ ಜೋಡಿ, ಎರಡನೇ ಗೇಮ್‌ನಲ್ಲಿ ಅಂಕಗಳ ಮೇಲೆ ಅಂಕಗಳನ್ನು ಪೇರಿಸುತ್ತಾ, ಎದುರಾಳಿಗಳ ಮೇಲೆ ಹಿಡಿತ ಸಾಧಿಸಿತು.
ಕುತೂಹಲ ಮೂಡಿಸಿದ ದ್ವಿತೀಯ ಸೆಟ್: ಎರಡನೇ ಸೆಟ್‌ನ ಮೂರನೇ ಗೇಮ್‌ನಲ್ಲಿ 15-40ರ ಅಂತರದಲ್ಲಿ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಳ್ಳುವ ಮೂಲಕ ಸಾನಿಯಾ- ಬೆಥಾನಿ, ಇಟಲಿ ಜೋಡಿಗಿಂತ ಕೊಂಚ ಮುನ್ನಡೆ ಸಾಧಿಸಿದರಲ್ಲದೇ, ಮುಂದಿನ ಗೇಮ್‌ನಲ್ಲೂ ಜಯ ಸಾಧಿಸಿ, ಅಂತರದವನ್ನು 3-1ಕ್ಕೆ ಹೆಚ್ಚಿಸಿಕೊಂಡರು. ಆದರೆ, ಅಂತರವನ್ನು ಹೆಚ್ಚಿಸಿಕೊಂಡ ಸಂತೋಷ ಸಾನಿಯಾ-ಬೆಥಾನಿಗೆ ಬಹಳ ಹೊತ್ತು ಇರಲಿಲ್ಲ. ಅದರ ಮುಂದಿನ ಗೇಮ್‌ನಲ್ಲೇ ಇವರಿಬ್ಬರ ಸರ್ವ್ ಅನ್ನು ಬ್ರೇಕ್ ಮಾಡಿದ ಎರ್ರಾನಿ- ರೊಬರ್ಟೊ ಈ ಅಂತರವನ್ನು 2-3ಕ್ಕೆ ತಗ್ಗಿಸಿಕೊಂಡರು.
ಆದರೆ, ಈ ಹಂತದಲ್ಲಿ ಮತ್ತೆ ತಿರುಗಿಬಿದ್ದ ಸಾನಿಯಾ- ಬೆಥಾನಿ, ಮತ್ತೆ ತಿರುಗಿಬಿದ್ದು ಮುಂದಿನ ಗೇಮ್ ಗೆಲ್ಲುವ ಮೂಲಕ ಅಂತರವನ್ನು 4-2ಕ್ಕೆ ಹಿಗ್ಗಿಸಿಕೊಂಡರು. ಆದರೆ, ಮುಂದಿನ ನಾಲ್ಕು ಗೇಮ್‌ಗಳಲ್ಲಿ ಸತತವಾಗಿ ಜಯ ದಾಖಲಿಸಿದ ಎರ್ರಾನಿ-ರೊಬರ್ಟೊ ಇಬ್ಬರೂ ಪಂದ್ಯದಲ್ಲೂ ಜಯ ಸಾಧಿಸಿ, ಸೆಮಿಫೈನಲ್ ಹಂತಕ್ಕೆ ಲಗ್ಗೆಯಿಟ್ಟರು.
ಸೆಮೀಸ್‌ನಲ್ಲಿ ಲೀಸಾ-ಲಾರಾ ಎದುರಾಳಿ: ಭಾರತ-ಅಮೆರಿಕಾ ಜೋಡಿಯನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಎರ್ರಾನಿ- ರೊಬರ್ಟೊ ಜೋಡಿ, ಸೆಮೀಸ್‌ನಲ್ಲಿ ಲೀಸಾ ರೇಮಂಡ್ಸ್- ಲಾರಾ ರಾಬ್ಸನ್ ಜೋಡಿಯನ್ನು ಎದುರಿಸಲಿದ್ದಾರೆ.
ಸಾನಿಯಾಗೆ ನಿರಾಸೆ: ಮಂಗಳವಾರ ನಡೆದಿದ್ದ ಮಿಯಾಮಿ ಮಾಸ್ಟರ್ಸ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜಾರ್ಮಿಲಾ ಗಾಜ್ಡೊಸೋವಾ ಹಾಗೂ ಸೆಬೈನ್ ಲಿಸಿಕಿ ಜೋಡಿಯನ್ನು ಸೋಲಿಸಿದ್ದ ಸಾನಿಯಾ- ಬೆಥಾನಿ ಜೋಡಿ, ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಂತವನ್ನು ಪ್ರವೇಶಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments