ರ್ಯಾಂಕಿಂಗ್: ಪೂಜಾರಗೆ ಬಡ್ತಿ
ದುಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಯನ್ನು 4-0 ಅಂತರದಲ್ಲಿ ಗೆಲ್ಲಲು ಪ್ರಮುಖ ಕಾರಣವಾಗಿರುವ ಚೇತೇಶ್ವರ ಪೂಜಾರ ಪರಿಷ್ಕೃತ ಐಸಿಸಿ ಟೆಸ್ಟ್ ಬ್ಯಾಟ್ಸ್ಮನ್ ರ್ಯಾಂಕಿಂಗ್ ಪಟ್ಟಿಯಲ್ಲಿ ಏರಿಕೆ ಕಂಡಿದ್ದು, ಭಾರತದ ಹಿರಿಯ ಆಟಗಾರ ಸಚಿನ್ ತೆಂಡೂಲ್ಕರ್ 5 ಸ್ಥಾನಗಳ ಕುಸಿತ ಕಂಡಿದ್ದಾರೆ.
ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ರ್ಯಾಂಕಿಂಗ್ ಪಟ್ಟಿಯ ಅಗ್ರ 10ರೊಳಗೆ ಸ್ಥಾನಪಡೆದಿರುವ ಪೂಜಾರ, 777 ಅಂಕಗಳೊಂದಿಗೆ 7ನೇ ಸ್ಥಾನಕ್ಕೇರಿದ್ದಾರೆ. ಇನ್ನು ಸಚಿನ್ ತೆಂಡೂಲ್ಕರ್ ರ್ಯಾಂಕಿಂಗ್ ಪಟ್ಟಿಯಲ್ಲಿ 5 ಸ್ಥಾನಗಳ ಕುಸಿತ ಕಂಡಿದ್ದು, 26ನೇ ಸ್ಥಾನದಲ್ಲಿದ್ದಾರೆ.
ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, , ವಿಂಡೀಸ್ನ ಕ್ರಿಸ್ ಗೇಲ್ ಜತೆಗೆ 637 ಅಂಕಗಳನ್ನು ಪಡೆದಿದ್ದು 2 ಸ್ಥಾನಗಳ ಏರಿಕೆಯೊಂದಿಗೆ ಜಂಟಿ 22ನೇ ಸ್ಥಾನದಲ್ಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸಹ 4 ಸ್ಥಾನಗಳ ಕುಸಿತ ಕಂಡಿದ್ದು, 24ನೇ ಸ್ಥಾನದಲ್ಲಿದ್ದಾರೆ.
ಮುರಳಿ ವಿಜಯ್ 3 ಸ್ಥಾನಗಳ ಏರಿಕೆ ಕಂಡಿದ್ದು 40ನೇ ಸ್ಥಾನದಲ್ಲಿದ್ದಾರೆ. ಇನ್ನು ಆಗ್ರ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲದ ಕಾರಣ ಅಶೀಂ ಆಮ್ಲಾ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 757 ಅಂಕಗಳನ್ನು ಪಡೆದಿರುವ ಭಾರತದ ಆರ್. ಅಶ್ವಿನ್ 6ನೇ ಸ್ಥಾನಕ್ಕೇರುವ ಮೂಲಕ ತಮ್ಮ ವೃತ್ತಿ ಜೀವನದ ಶ್ರೇಷ್ಠ ರ್ಯಾಂಕಿಂಗ್ ಪಡೆದಿದ್ದಾರೆ. ಇನ್ನು ಕಳೆದ ರ್ಯಾಂಕಿಂಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಪ್ರಗ್ಯಾನ್ ಓಜಾ 1 ಸ್ಥಾನಗಳ ಕುಸಿತ ಕಂಡಿದ್ದು, 10ನೇ ಸ್ಥಾನಕ್ಕೇರಿದ್ದಾರೆ.
ಇನ್ನು ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬೌಲಿಂಗ್ ಮಾಡಿದ ರವೀಂದ್ರ ಜಡೇಜಾ 8 ಸ್ಥಾನಗಳ ಏರಿಕೆ ಕಂಡಿದ್ದು, 27ನೇ ಸ್ಥಾನದಲ್ಲಿದ್ದಾರೆ.
ಇನ್ನು ಗಾಯದ ಸಮಸ್ಯೆಯಿಂದ ಹೊರಗುಳಿದಿರುವ ಭಾರತದ ವೇಗಿ ಜಹಿರ್ ಖಾನ್ ತಮ್ಮ 16ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬ್ಯಾಟ್ಸ್ಮನ್ಗಳ ಪಟ್ಟಿಯಂತೆ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲೂ ಹರಿಣಗಳ ತಂಡದವರೇ ಹಿಡಿತ ಸಾಧಿಸಿದ್ದಾರೆ.
ಅಗ್ರ ಎರಡು ಸ್ಥಾನಗಳಲ್ಲಿ ಡೇಲ್ ಸ್ಟೇಯ್ನ್ ಹಾಗೂ ವರ್ನಾನ್ ಫಿಲ್ಯಾಂಡರ್ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.