ಕ್ರೈಸ್ಟ್‌ಚರ್ಚ್: ಬಾರೊಂದರ ಹೊರಗೆ ನಡೆದ ಹಲ್ಲೆಯಲ್ಲಿ ತೀವ್ರ ಗಾಯಗೊಂಡಿರುವ ನ್ಯೂಜಿಲೆಂಡ್‌ಆಲ್ರೌಂಡರ್ ಜೆಸ್ಸಿ ರೈಡರ್ ಕೋಮಾ ಸೇರಿದ್ದಾರೆ. ಇಲ್ಲಿನ ಬಾರೊಂದರ ಹೊರಗೆ ಜಗಳವಾಡಿಕೊಂಡು ತೀವ್ರವಾಗಿ ಗಾಯಗೊಳ್ಳುವ ಮೂಲಕ ಚಿಂತಾಜನಕ ಸ್ಥತಿಯಲ್ಲಿದ್ದ ರೈಡರ್ ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಬುಧವಾರ ರಾತ್ರಿ ಇಲ್ಲಿನ ಉಪನಗರದಲ್ಲಿರುವ ಐಕಾಮನ್ಸ್ ಬಾರ್‌ನಿಂದ ಹೊರಗೆ ಬಂದಾಗ ರೈಡರ್ ಮೇಲೆ ಎರಡರಿಂದ ಮೂರು ಜನರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ರೈಡರ್ ಮೇಲೆ ಎರಡು ಬಾರಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಗಾಯಗಳೊಂದಿಗೆ ತಲೆ ಬುರುಡೆ ಬಲವಾದ ಏಟು ಬಿದ್ದೆದೆ ಎನ್ನಲಾಗಿರುವ 28 ವರ್ಷದ ರೈಡರ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸೇರಿಸಲಾಗಿದೆ.
ನ್ಯೂಜಿಲೆಂಡ್‌ನ ದೇಶೀಯ ಕ್ರಿಕೆಟ್‌ನ ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ, ತಮ್ಮ ವೆಲ್ಲಿಂಗ್ಟನ್ ತಂಡದೊಂದಿಗೆ ತೆರಳುತ್ತಿದ್ದಾ ಬಾರ್‌ನ ಹೊರಗೆ ರೈಡರ್ ಮೇಲೆ ಮೊದಲ ಬಾರಿಗೆ ಹಲ್ಲೆಮಾಡಲಾಗಿದೆ. ನಂತರ ಪಾರ್ಕಿಂಗ್ ಸ್ಥಳದವರೆಗೆ ಬೆನ್ನಟ್ಟಿಕೊಂಡು ಹೋಗಿ ಅಲ್ಲಿ ರೈಡರ್ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆದಾಗ ರೈಡರ್ ಜತೆ ಕುಡಿಯಲು ಹೋಗಿದ್ದ ಇಬ್ಬರು ಸ್ನೇಹಿತರು ಇನ್ನೂ ಹೋಟೆಲ್‌ನಲ್ಲೇ ಇದ್ದರು ಎನ್ನಲಾಗಿದೆ. ರೈಡರ್ ಗಂಭೀರ ಸ್ಥಿತಿಯಲ್ಲಿರುವ ಕುರಿತು ನ್ಯೂಜಿಲೆಂಡ್ ಕ್ರಿಕೆಟ್ ಸಂತಾಪ ವ್ಯಕ್ತಪಡಿಸಿದೆ.
ಸದಾ ಕಿರಿಕ್ ರೈಡರ್
2008: ಬಾರೊಂದರ ಶೌಚಾಲಯದ ಕಿಟಕಿಯ ಸರಳಿಗೆ ಪಂಚ್ ಮಾಡಿದ ರೈಡರ್ ಕೈಗೆ ಹೊಲಿಗೆ ಹಾಕಿಸಿಕೊಳ್ಳುವ ಮೂಲಕ ಹಲವಾರು ತಿಂಗಳು ಕಾಲ ತಂಡದಿಂದ ಹೊಗುಳಿದಿದ್ದರು.
2009: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಸಂದರ್ಭ ತಡ ರಾತ್ರಿ ಮಿತಿಮೀರಿ ಕುಡಿಯುವ ಮೂಲಕ ತಂಡದ ಶಿಷ್ಟಾಚಾರ ಉಲ್ಲಂಘಿಸಿದ್ದರು. ಹೀಗಾಗಿ ಆಗ ರೈಡರ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. 2009: ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ 28 ಎಸೆತಗಳಲ್ಲಿ 50 ರನ್ ಗಳಿಸಿದ್ದ ರೈಡರ್, 74 ರನ್‌ಗಳಿಗೆ ಔಟ್ ಆದಾಗ ಕುರ್ಚಿಯೊಂದಕ್ಕೆ ಬ್ಯಾಟಿನಿಂದ ಜೋರಾಗಿ ಹೊಡೆಯುವ ಮೂಲಕ ಪಂದ್ಯ ಶುಲ್ಕದ ಶೇ.15ರಷ್ಟು ದಂಡ ತೆತ್ತಿದ್ದರು. ಆಗ ರೈಡರ್ ತಂಡದ ಆಡಳಿತ ಮಂಡಳಿಯೊಂದಿಗೆ ರಾದ್ಧಾಂತ ಮಾಡಿಕೊಂಡಿದ್ದರು. 2012: ಕಳೆದ ವರ್ಷ ರೈಡರ್ ಮತ್ತು ಡಗ್ ಬ್ರೇಸ್‌ವೆಲ್ ಹೋಟೆಲ್ ಮಾಲೀಕರೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ, ನ್ಯೂಜಿಲೆಂಡ್ ಕ್ರಿಕೆಟ್ ಅವರಿಗೆ ಛೀಮಾರಿ ಹಾಕಿತ್ತು. 2013: ಆಲ್ಕೋಹಾಲಿಗೆ ಸಂಬಂಧಿಸಿದ ಸರಣಿ ಪ್ರಕರಣಗಳ ಹಿನ್ನೆಲೆಯಲ್ಲಿ 2013ರಲ್ಲಿ ನ್ಯೂಜಿಲೆಂಡ್ ರಾಷ್ಟ್ರೀ ತಂಡದಿಂದ ನಿರ್ಲಕ್ಷಿಸಲಾಗಿದೆ.