ಚೇತರಿಸಿಕೊಳ್ಳುತ್ತಿರುವ ರೈಡರ್
ವೆಲ್ಲಿಂಗ್ಟನ್: ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಕೋಮಾಕ್ಕೆ ಜಾರಿದ್ದ ನ್ಯೂಜಿಲೆಂಡ್ನ ಆಲ್ರೌಂಡರ್ ಕ್ರಿಕೆಟಿಗ ಜೆಸ್ಸಿ ರೈಡರ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಆಸ್ಪತ್ರೆಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಶುಕ್ರವಾರ ಗುರುತಿಸಿದ್ದಾರೆ.
ರೈಡರ್ ಮೇಲೆ ಹಲ್ಲೆ ಮಾಡಿದ ಇಬ್ಬರನ್ನು ಬಂಧಿಸಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕ್ರೈಸ್ಟ್ಚರ್ಚ್ನಲ್ಲಿನ ಬಾರೊಂದರಿಂದ ಹೊರಗೆ ಹೋಗುತ್ತಿದ್ದಾಗ ಬುಧವಾರ ರೈಡರ್ ಮೇಲೆ ದುಷ್ಕರ್ಮಿಗಳಗುಂಪೊಂದು ದಾಳಿ ಮಾಡಿತ್ತು. ನಂತರ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಗಲೇ ರೈಡರ್ ಕೋಮಾಕ್ಕೆ ಜಾರಿದ್ದರು.
ರೈಡರ್ ನೀಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪ್ರತಿಕ್ರಿಯಿಸಿದ್ದಾರೆ ಎಂದು ರೈಡರ್ ಮ್ಯಾನೇಜರ್ ಅರೋನ್ ಕ್ಲೀ ಹೇಳಿದ್ದಾರೆ. ರೈಡರ್ ಆರೋಗ್ಯ ಸ್ಥಿರವಾಗಿದ್ದು, ಪುಪ್ಪಸ ಮತ್ತು ತಲೆಗೆ ಬಲವಾದ ಏಟುಗಳು ಬಿದ್ದಿರುವ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ನೆರವಿನೊಂದಿಗೆ ಇನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ರೈಡರ್ ಬೇಗನೆ ಗುಣಮುಖರಾಗಲಿ ಎಂದು ವಿಶ್ವದಾದ್ಯಂತ ಜನರು ಸಂದೇಶ ಕಳುಹಿಸಿದ್ದಕ್ಕೆ ಮತ್ತು ಹಲ್ಲೆ ನಡೆಸಿದವರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ರೈಡರ್ ತಾಯಿ ಹೀದರ್ ಮತ್ತು ಪತ್ನಿ ಅಲ್ಲೆ ಕೃತಜ್ಞತೆ ಸಲ್ಲಿಸಿದ್ದಾರೆ.
'ರೈಡರ್ ಬೇಗನೆ ಗುಣಮುಖರಾಗಲಿ ಎಂದು ಬರೆದಿರುವ ಹಲವಾರು ಸಂದೇಶಗಳನ್ನು ನಾವು, ಕಳೆದ 24 ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಓದಿದ್ದೇವೆ. ಅಲ್ಲದೆ ಜೆಸ್ಸಿ ಚೇತರಿಸಿಕೊಂಡ ಮೇಲೆ ಅವರಿಗೆ ತೋರಿಸಲು ಅವುಗಳನ್ನು ಹಾಗೇ ಉಳಿಸಿಕೊಂಡಿದ್ದೇವೆ' ಎಂದು ಅವರು ಹೇಳಿದ್ದಾರೆ.
20 ವರ್ಷದ ಯುವಕ ಮತ್ತು 37 ವರ್ಷದ ಆತನ ಸಂಬಂಧಿಯನ್ನು, ರೈಡರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದೇವೆ. ಬರುವ ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 'ಬಾರೊಂದರಿಂದ ಹೊರಗೆ ತೆರಳುತ್ತಿದ್ದ ರೈಡರ್ ಮೇಲೆ ಎರಡರಿಂದ ಮೂರು ಜನರು ಹಲ್ಲೆ ಮಾಡಿದ್ದು, ನಂತರ ತನ್ನ ಕಾರ್ ಪಾರ್ಕಿಂಗ್ ಸ್ಥಳಕ್ಕೆ ತೆರಳಿದ ನಂತರ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಲ್ಕೋಹಾಲಿಗೆ ಸಂಬಂಧಿಸಿದಂತೆ ರೈಡರ್ ಅನೇಕ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಕುಡಿಯುವುದಕ್ಕಿಂತ ಮುನ್ನವೇ ಅವರ ಮೇಲೆ ಹಲ್ಲೆ ನಡೆಸರಬಹುದು ಎಂದಿದ್ದಾರೆ ಪೊಲೀಸರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.