ಪುಣೆಗೆ ಆರ್ಸಿಬಿ ಪಣ
ಪುಣೆ: ಒಂದೆಡೆ ಬ್ಯಾಟ್ಸ್ಮನ್ಗಳ ವೈಫಲ್ಯದೊಂದಿಗೆ ಸಾಲು ಸಾಲಾಗಿ ಸೋಲನುಭವಿಸಿರುವ ಪುಣೆ ವಾರಿಯರ್ಸ್, ಇನ್ನೊಂದೆಡೆ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಕಳೆದ 2 ಪಂದ್ಯಗಳಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಗುರುವಾರ ನಡೆಯಲಿರುವ ಪಂದ್ಯದಲ್ಲಿ ಕಾದಾಡಲಿವೆ.
ಬೆಂಗಳೂರು ತಂಡ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದರೆ, ಪುಣೆ 10 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿದೆ.
ಹೀಗಾಗಿ ರನ್ ಮಳೆಗರೆಯುವ ಕ್ರಿಸ್ ಗೇಯ್ಲ್ ಅವರಂತಹ ಬ್ಯಾಟ್ಸ್ಮನ್ ಹೊಂದಿರುವ ಆರ್ಸಿಬಿ ಸೋಲಿಸುವುದು ಆರೋನ್ ಫಿಂಚ್ ನಾಯಕತ್ವದ ಪುಣೆ ಪಡೆಗೆ ಸುಲಭದ ಮಾತಲ್ಲ.
ಈ ಮುನ್ನ ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ 66 ಎಸೆತಗಳಲ್ಲಿ 175 ರನ್ ಗಳಿಸುವುದರೊಂದಿಗೆ 263 ರನ್ ಗಳಿಸಿದ್ದ ಬೆಂಗಳೂರು ವಿರುದ್ಧ ಅಲನ್ ಡೋನಾಲ್ಡ್ ತರಬೇತಿ ನೀಡಿರುವ ಪುಣೆ ಭಾರೀ ಅಂತರದಿಂದ ಸೋಲನುಭವಿಸಿತ್ತು.
ಪುಣೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳೂ ಸ್ಥಿರ ಪ್ರದರ್ಶನ ಕಾಪಾಡಿಕೊಳ್ಳದಿರುವುದು ಸೋಲಿನಂಚು ತಲುಪುವುದಕ್ಕೆ ಕಾರಣವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಕಳೆದ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪರೇಡ್ ನಡೆಸಿದ್ದು 37 ರನ್ಗಳ ಅಂತರದಿಂದ ಸೋಲಲು ಕಾರಣವಾಯಿತು. ಪಂದ್ಯಾವಳಿಯಲ್ಲಿ ಮೂರು ಅರ್ಧ ಶತಕ ದಾಖಲಿಸಿದ ನಾಯಕ ಆ್ಯರೋನ್ ಫಿಂಚ್ ಹೊರತುಪಡಿಸಿದರೆ, ತಂಡದ ಯಾವುದೇ ಬ್ಯಾಟ್ಸ್ಮನ್ ಸ್ಫೋಟಕ ಬ್ಯಾಟಿಂಗ್ ನಡೆಸದಿರುವುದು ಹಿನ್ನೆಡೆಗೆ ಕಾರಣವಾಗಿದೆ. ಆಸ್ಟ್ರೇಲಿಯಾ ಆಲ್ರೌಂಡರ್ ಸ್ಟೀವ್ ಸ್ಮಿತ್ 6 ಪಂದ್ಯಗಳಿಂದ 155 ರನ್ ಗಳಿಸಿದ್ದು ತಕ್ಕಮಟ್ಟಿಗೆ ತಂಡಕ್ಕೆ ನೆರವಾಗಿದ್ದಾರೆ. ಆದರೆ, ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಇದುವರೆಗೂ ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿಲ್ಲ. ಸ್ಟಾರ್ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಇದುವರೆಗೂ ಬ್ಯಾಟ್ನೊಂದಿಗೆ ಮಿಂಚಿಲ್ಲ. ಏಳು ಪಂದ್ಯಗಳನ್ನಾಡಿರುವ ಯುವರಾಜ್ ಕೇವಲ 140 ರನ್ ಗಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಕೇನ್ ರಿಚರ್ಡ್ಸ್ನ್ ಮತ್ತು ಭುವನೇಶ್ವರ ಕುಮಾರ್ ತಕ್ಕ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಅಶೋಕ್ ದಿಂಡಾ ದುಬಾರಿಯಾಗಿ ಪರಿಣಮಿಸಿದ್ದಾರೆ.
ಇನ್ನೊಂದೆಡೆ ಪುಣೆ ವಿರುದ್ಧ ಕಳೆದ ಪಂದ್ಯದಲ್ಲಿ 130 ರನ್ಗಳಿಂದ ಗೆದ್ದ ಬೆಂಗಳೂರು ತಂಡ, ತವರಿನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲೂ ಜಯ ಸಾಧಿಸಿದೆ. ಆದರೆ, ತವರಿನಿಂದ ಹೊರಗೆ ನಡೆದ ಪಂದ್ಯಗಳಲ್ಲಿ ಜಯ ಕಾಣಲು ತಡಕಾಡುತ್ತಿದೆ.
484 ರನ್ ಗಳಿಸಿರುವ ಕ್ರಿಸ್ ಗೇಯ್ಲ್ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ ಎನಿಸಿದ್ದಾರೆ. ಈ ಪಂದ್ಯದಲ್ಲೂ ಜಮೈಕಾ ಬ್ಯಾಟ್ಸ್ಮನ್ ಮಿಂಚುವ ನಿರೀಕ್ಷೆಗಳಿವೆ.
ಇನ್ನು 366 ರನ್ ಗಳಿಸಿರುವ ನಾಯಕ ವಿರಾಟ್ ಕೊಹ್ಲಿ ಸಹ ಫಾರ್ಮ್ನಲ್ಲಿದ್ದಾರೆ. ತಿಲಕರತ್ನೆ ದಿಲ್ಷಾನ್ ಮತ್ತು ಎಬಿ ಡಿವಿಲಿಯರ್ಸ್ ಸಹ ಬ್ಯಾಟಿಂಗ್ನಲ್ಲಿ ತಂಡಕ್ಕೆ ಆಶ್ರಯವಾಗಲಿದ್ದಾರೆ.
ಇನ್ನು ಬೌಲಿಂಗ್ ವಿಭಾಗ ವಿನಯ್ ಕುಮಾರ್, ಆರ್.ಪಿ ಸಿಂಗ್ ಹಾಗೂ ರವಿ ರಾಮ್ಪಾಲ್ ಅವರೊಂದಿಗೆ ಯುವ ಮತ್ತು ಅನುಭವಿ ಬೌಲರ್ಗಳನ್ನೊಳಗೊಂಡಿದೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ವೈಫಲ್ಯ ಕಂಡಿದೆ.