ಟಾಪ್ 10ರಿಂದ ಹೊರನಡೆದ ಕಶ್ಯಪ್
ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‌ನ ಪರಿಷ್ಕೃತ ಪಟ್ಟಿಯು ಗುರುವಾರ ಬಿಡುಗಡೆಗೊಂಡಿದ್ದು, ಇದರಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರು ಪುರುಷರ ವಿಭಾಗದಲ್ಲಿ ಟಾಪ್-10ರ ಸ್ಥಾನದಿಂದ ಆಚೆ ಸರಿದಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ವರೆಗೂ ಸಾಗಿರುವ ಸಾಧನೆ ಮಾಡಿರುವ ಕಶ್ಯಪ್, ಕಳೆದ ವಾರವಷ್ಟೇ ಬಿಡುಗಡೆಗೊಂಡಿದ್ದ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 6ನೇ ಸ್ಥಾನದಲ್ಲಿದ್ದರು. ಅದು ಅವರ ಈವರೆಗೆ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆಯಾಗಿತ್ತು. ಆದರೆ, ಒಂದೇ ವಾರದ ಅಂತರದಲ್ಲಿ ಬಿಡುಗಡೆಗೊಂಡಿರುವ ಪರಿಷ್ಕೃತ ಪಟ್ಟಿಯಲ್ಲಿ ಅವರು, 11ನೇ ಸ್ಥಾನಕ್ಕೆ ಸರಿಯುವ ಮೂಲಕ, 5 ಸ್ಥಾನಗಳನ್ನು ಹಿನ್ನಡೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ನಡೆದಿದ್ದ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅವರು ಮೊದಲ ಸುತ್ತಿನಲ್ಲೇ ಸೋತು ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿದ್ದರು. ಇದು ಅವರ ರ್ಯಾಂಕಿಂಗ್ ಸ್ಥಾನದ ಮೇಲೆ ಪರಿಣಾಮ ಬೀರಿದ್ದು, ಅವರ ಸ್ಥಾನಪಲ್ಲಟಕ್ಕೆ ಕಾರಣವಾಗಿದೆ.
ಸಿಂಧು ರ್ಯಾಂಕ್‌ನಲ್ಲಿ ಏರಿಕೆ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು, ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದಾರೆ. ಪರಿಷ್ಕೃತ ಪಟ್ಟಿಯ ಮಹಿಳೆಯರ ವಿಭಾಗದಲ್ಲಿ ಅವರು, 13ನೇ ಸ್ಥಾನದಲ್ಲಿದ್ದಾರೆ.