ಭಾರತರ ಪರ ಆಡಿದ್ದು ಅದೃಷ್ಟ: ದ್ರಾವಿಡ್
ಕೋಲ್ಕತಾ: ಪದ್ಮಭೂಷಣ ಪ್ರಶಸ್ತಿ ಒಂದು 'ವಿಶೇಷ ಗೌರವ' 16 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದು ನನ್ನ ಅದೃಷ್ಟ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗುರುವಾರ ಹೇಳಿಕೊಂಡಿದ್ದಾರೆ.'ಪ್ರಶಸ್ತಿ ದೊರಕುವುದು ಒಂದು ದೊಡ್ಡ ಗೌರವ. ಆಟವನ್ನು ಆರಂಭಿಸಿದಾಗ ಪ್ರಶಸ್ತಿಗಳ ಬಗ್ಗೆ ಯೋಚಿಸಿರುವುದಿಲ್ಲ. ಆಟವನ್ನು ಪ್ರೀತಿಸುತ್ತಿರುವುದರಿಂದ ನೀವು ಆಡುತ್ತೀರಿ. ಅಲ್ಲದೆ ಆಟವನ್ನು ಆರಂಭಿಸಿದಾಗ ಅದಕ್ಕೆ ಯಾವುದೇ ಕಾರಣಗಳೂ ಇರುವುದಿಲ್ಲ. ಆದರೆ, ಪ್ರಶಸ್ತಿ ಪಡೆಯುವುದರೊಂದಿಗೆ ಭಾರತ ಸರ್ಕಾರ ನಮ್ಮನ್ನು ಗುರುತಿಸಿದಾಗ ಇದೊಂದು ದೊಡ್ಡ ಗೌರವ' ಎಂದು ಕೋಲ್ಕತಾದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮವೊಂದರಲ್ಲಿ ದ್ರಾವಿಡ್ ಹೇಳಿದರು. 40 ವರ್ಷದ ದ್ರಾವಿಡ್ ಅವರಿಗೆ ಏಪ್ರಿಲ್ 5ರಂದು ದೇಶದ ಮೂರನೇ ಉನ್ನತ ನಾಗರೀಕ ಪ್ರಶಸ್ತಿಯಾದ ಪದ್ಮ ಭೂಷಣವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೀಡಿದ್ದರು.