ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸೆಮೀಸ್‌ಗೆ ಕಾಲಿಟ್ಟ ಸಿಂಧು

Mainashree
Updated On : 3 May 2013, 12:21 pm

ನವದೆಹಲಿ: ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರು ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ತಲುಪಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು, ಇಂಡೋನೇಷ್ಯಾದ ಹೆರಾ ದೆಸಿ ಅವರನ್ನು 21-17, 21-17 ಅಂತರದಲ್ಲಿ ಸೋಲಿಸಿ ಸೆಮಿಫೈನಲ್‌ಗೆ ಕಾಲಿಟ್ಟರು.
ಇದಕ್ಕೂ ಮುನ್ನ ನಡೆದಿದ್ದ ಪ್ರೀ-ಕ್ವಾರ್ಟರ್ ಫೈನಲ್ ಹಂತದಲ್ಲಿ ಅವರು, ಹಾಂಕಾಂಗ್‌ನ ನ್ಯಾನ್ ಯಿ ಚೆಯುಂಗ್ ಅವರನ್ನು 11-21, 21-18, 21-10 ಅಂತರದಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟಿದ್ದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆರಾ ದೆಸಿ ಅವರ ವಿರುದ್ಧ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಸಿಂಧು, ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದರು.
ಅತ್ತ, ದೆಸಿ ಅವರೂ ಉತ್ತಮ ಹೋರಾಟ ತೋರಿದರಾದರೂ, ಅವರಿಂದ ಸಿಂಧು ಆಟವನ್ನು ಕಟ್ಟಿಡಲು ಆಗಲಿಲ್ಲ. ಮೊದಲ ಸೆಟ್‌ನಲ್ಲಿ ಇಬ್ಬರ ನಡುವೆ ಇದ್ದ ಉತ್ತಮ ಪೈಪೋಟಿಯ ನಡುವೆಯೂ ಸಿಂಧು ಅವರು, ಜಯ ಸಾಧಿಸುವಲ್ಲಿ ಸಫಲರಾಗಿದ್ದರು.
 ಪಂದ್ಯದ ಎರಡನೇ ಸೆಟ್‌ನಲ್ಲೂ ಇದೇ ರೀತಿಯ ಆಟ ಮುಂದುವರೆದು, ಅಲ್ಲೂ ಸಿಂಧು ಜಯಗಳಿಸುವಲ್ಲಿ ಯಶಸ್ವಿಯಾದರು.
ಗುರು ಕ್ವಾರ್ಟರ್‌ಗೆ: ಭಾರತದ ಮತ್ತೊಬ್ಬ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಆರ್.ಎಂ.ವಿ. ಗುರುಸಾಯಿದತ್ ಅವರು ಮಲೇಷ್ಯಾ ಗ್ರ್ಯಾಂಡ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಗುರುವಾರ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಅವರು, ಜಪಾನ್‌ನ ರಿಯ್‌ಚಿ ತಕೇಶಿಯಾ ವಿರುದ್ಧ 21-19, 21-16 ಅಂತರದ ಜಯ ದಾಖಲಿಸಿದರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುಸಾಯಿದತ್ ಅವರು, ಪಂದ್ಯಾವಳಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಮಲೇಷ್ಯಾದ ಇಸ್ಕಾಂದರ್ ಝುಲ್ಕರ್‌ನೈನ್ ಜೈನುದ್ದೀನ್ ಅವರನ್ನು ಎದುರಿಸಲಿದ್ದಾರೆ.
ಸುಮಾರು 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಗುರುಸಾಯಿದತ್‌ಗೆ ತಕೇಶಿಯಾ, ತೀವ್ರ ಸ್ಪರ್ಧೆ ನೀಡಿದರು. ಮೊದಲ ಸೆಟ್‌ನಲ್ಲಿ ಭರ್ಜರಿ ಆರಂಭವನ್ನೇ ಕಂಡಿದ್ದ ಈ ಇಬ್ಬರೂ ಪೈಪೋಟಿ ನೀಡುತ್ತಾ ಅಂಕಗಳನ್ನು ಪರಸ್ಪರ ಹೆಚ್ಚಿಸಿಕೊಳ್ಳುತ್ತಾ ಹೋದರು. ತೀವ್ರ ಹಣಾಹಣಿಯಿಂದ ಕೂಡಿದ್ದರೂ, ಅಂತಿಮವಾಗಿ ಈ ಸೆಟ್ ಗೆಲ್ಲುವಲ್ಲಿ ಗುರುಸಾಯಿದತ್ ಯಶಸ್ವಿಯಾದರು. ಎರಡನೇ ಸೆಟ್‌ನಲ್ಲೂ ಇದೇ ರೀತಿಯ ಪೈಪೋಟಿ ಮುಂದುವರೆಯಿತು. ಆದರೆ, ಒಂದು ಹಂತದ ನಂತರ ತಕೇಶಿಯಾ ಅವರ ಆಟದಲ್ಲಿ ಮೊನಚು ಮಾಯವಾಯಿತು. ಇದರ ಲಾಭ ಪಡೆದ ಗುರುಸಾಯಿದತ್, ದ್ವಿತೀಯ ಸೆಟ್‌ನಲ್ಲಿ 21-16ರ ಅಂತರದ ಜಯ ಕಂಡುಕೊಂಡು, ಆ ಮೂಲಕ ಪಂದ್ಯದಲ್ಲೂ ಜಯಭೇರಿ ಬಾರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement