ಡೇರ್‌ಡೆವಿಲ್ಸ್‌ಗೆ 'ಸನ್' ಸವಾಲು
ಹೈದರಾಬಾದ್: ಕಳಪೆ ಪ್ರದರ್ಶನದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿರುವ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಅಂಕಪಟ್ಟಿಯಲ್ಲಿ ಮೇಲೆರಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಗೆಲ್ಲುವುದು ಮಹತ್ವದ ವಿಷಯವಾಗಿದೆ. 10 ಪಂದ್ಯಗಳನ್ನಾಡಿರುವ ಡೆಲ್ಲಿ 6 ಅಂಕಗಳನ್ನು ಗಳಿಸಿದ್ದರೆ, ಅಷ್ಟೇ ಪಂದ್ಯಗಳನ್ನಾಡಿರುವ ಸನ್‌ರೈಸರ್ಸ್ 12 ಅಂಕಗಳನ್ನು ಗಳಿಸಿದೆ.
ಅಲ್ಲದೆ ತವರಿನ ಅಂಗಣದಲ್ಲಿ ಇದುವರೆಗೂ ಆಡಿದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಈ ಪಂದ್ಯದಲ್ಲೂ ಗೆಲ್ಲುವ ಫೇವರಿಟ್ ಎನಿಸಿದೆ.
ವಿಶ್ವದ ನಂಬರ್ ಒನ್ ವೇಗದ ಬೌಲರ್ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ ಬೌಲಿಂಗ್ ವಿಭಾಗದಲ್ಲಿ ಹೈದರಾಬಾದ್ ತಂಡಕ್ಕೆ ಆಶ್ರಯವಾಗುತ್ತಿದ್ದಾರೆ. ಶ್ರೀಲಂಕಾದ ತಿಸರಾ ಪೆರೇರಾ ಮತ್ತು ಕರಣ್ ಶರ್ಮಾ ಸಹ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ಬ್ಯಾಟಿಂಗ್ ವೈಫಲ್ಯ ಹೈದರಾಬಾದ್ ತಂಡವನ್ನು ಆತಂಕಕ್ಕೀಡು ಮಾಡಿದೆ. ಆದರೆ, ಇತ್ತೀಚೆಗೆ ಆರಂಭಿಕ ಆಟಗಾರ ಶಿಖರ್ ಧವನ್ ತಂಡಕ್ಕೆ ಮರಳುವುದರೊಂದಿಗೆ ಬ್ಯಾಟಿಂಗ್ ಚೇತರಿಸಿಕೊಂಡಿದೆ. ವೆಸ್ಟ್ ಇಂಡೀಸ್ ನಾಯಕ ಡರೇನ್ ಸಾಮಿ ಸಹ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಮುಂಬೈ ವಿರುದ್ಧದ ಪಂದ್ಯದಲ್ಲಿ ಅಜೇಯ 73 ರನ್ ಗಳಿಸಿದ್ದ ಧವನ್ ಏಕಾಂಗಿಯಾಗಿ ಹೋರಾಡುವ ಮೂಲಕ ತಂಡಕ್ಕೆ ಜಯ ಕಾಣುವಂತೆ ನೋಡಿಕೊಂಡಿದ್ದರು.
ಯುವ ಆಟಗಾರರಾದ ಜಿ. ಹನುಮ ವಿಹಾರಿ ಮತ್ತು ಅಕ್ಷತ್ ರೆಡ್ಡಿ ಸಹ ಇತ್ತೀಚೆಗೆ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ತಕ್ಕ ಸಾಥ್ ನೀಡುತ್ತಿದ್ದಾರೆ.
ಅಚ್ಚರಿಯ ರೀತಿಯಲ್ಲಿ ಸಾಂಘಿಕ ಹೋರಾಟದ ಮೂಲಕ ನಮ್ಮ ತಂಡ ಜಯ ಕಾಣುತ್ತಿದೆ ಎಂದು ಹೈದರಾಬಾದ್ ಸನ್‌ರೈಸರ್ಸ್ ತಂಡದ ತರಬೇತುದಾರ ಟಾಮ್ ಮೂಡಿ ಹೇಳಿದ್ದಾರೆ.
ಇನ್ನೊಂದೆಡೆ ಡೆಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿರುವ ಡೆಲ್ಲಿ ತಂಡ, ಕಳೆದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ಅಂತರದಿಂದ ಜಯ ಸಾಧಿಸಿರುವುದು ವಿಶ್ವಾಸ ಹೆಚ್ಚಿಸಿದೆ.
ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಮತ್ತು ಯುವ ಆಟಗಾರ ಉನ್ಮುಕ್ತ್ ಚಾಂದ್ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ನೆರವಾಗುತ್ತಿದ್ದಾರೆ. ಇಬ್ಬರು ಬ್ಯಾಟ್ಸ್‌ಮನ್‌ಗಳು ಕಳೆದ ಪಂದ್ಯದಲ್ಲಿ ಜಯ ಸಾಧಿಸಲು ತಂಡಕ್ಕೆ ನೆರವಾಗಿದ್ದರು.
ಆದರೆ, ವೀರೇಂದ್ರ ಸೆಹ್ವಾಗ್, ನಾಯಕ ಮಹೇಲ ಜಯವರ್ಧನೆ, ಇರ್ಫಾನ್ ಪಠಾಣ್, ಆಶೀಶ್ ನೆಹ್ರಾ ಹಾಗೂ ಮಾರ್ನೆ ಮಾರ್ಕೆಲ್ ಸಮರ್ಥ ಪ್ರದರ್ಶ ನೀಡಿದಲ್ಲಿ ಮಾತ್ರ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡಕ್ಕೆ ಕಠಿಣ ಸವಾಲೊಡ್ಡಲು ನೆರವಾಗಲಿದೆ.