ಪ್ರಶಸ್ತಿ ಸುತ್ತಿಗೆ ಕಾಲಿಟ್ಟ ಸಿಂಧು
ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್...
ನವದೆಹಲಿ: ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಆಟಗಾರ್ತಿ ಪಿ.ವಿ. ಸಿಂಧು, ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಸುತ್ತನ್ನು ತಲುಪಿದ್ದಾರೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಥಾಯ್ಲೆಂಡ್‌ನ ಸ್ಯಾಪ್ಸಿರಿ ಟೆರಾಟ್ಟನಾಚ್ಚೈ ಅವರನ್ನು 21-17, 21-11 ಅಂತರದಲ್ಲಿ ಸೋಲಿಸಿ, ಫೈನಲ್‌ಗೆ ಕಾಲಿಟ್ಟರು.
ಪಂದ್ಯದ ಆರಂಭದಿಂದಲೂ ಸಿಂಧು ಅವರ ಆಟ, ಎದುರಾಳಿಯನ್ನು ಹಿಮ್ಮೆಟ್ಟಿಸುವಂತಿತ್ತು. ಆದರೆ, ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಿದ ಸಿಂಧು, ಆರಂಭದಿಂದಲೇ ಸ್ಯಾಪ್ಸಿರಿಗಿಂತ ಮುನ್ನಡೆ ಕಂಡುಕೊಂಡರು. ಆದರೆ, ಸ್ಯಾಪ್ಸಿರಿ ಸುಲಭವಾಗಿ ಹಿಂದೆ ಸರಿಯುವ ಹಾಗಿರಲಿಲ್ಲ. ತೀವ್ರವಾದ ಪ್ರತಿರೋಧ ನೀಡಿದ ಅವರು, ಸಿಂಧು ವಿರುದ್ಧ ಸಮರ ಸಾರಿದರು.
ಹಂತ ಹಂತವಾಗಿ, ಸಿಂಧು ಅಂಕಗಳನ್ನು ಪೇರಿಸುತ್ತಾ ಸಾಗಿದರೆ, ಸ್ಯಾಪ್ಸಿರಿ ಅವರೂ ಸಿಂಧು ಅವರನ್ನು ಅಂಕಗಳಿಕೆಯಲ್ಲಿ ಹಿಂಬಾಲಿಸಿದರು. ಒಂದು ಹಂತದಲ್ಲಿ, ಸಿಂಧು ಹಾಗೂ ಸ್ಯಾಪ್ಸಿರಿ ಇಬ್ಬರೂ ಸಮಬಲ ಸಾಧಿಸಿದರೂ, ಪುನಃ ಸಿಂಧು ಅವರೇ ಮುಂದೆ ಸಾಗುತ್ತಿದ್ದರು. ಹೀಗೇ, ಪೈಪೋಟಿಯಿಂದ ಸಾಗಿದ ಪಂದ್ಯದಲ್ಲಿ ಸಿಂಧು, 21-17ರ ಅಂತರದಲ್ಲಿ ಮೊದಲ ಸೆಟ್‌ನಲ್ಲಿ ಗೆಲವು ಪಡೆದರು.
ಇದಾದ ನಂತರ, ದ್ವಿತೀಯ ಸೆಟ್‌ನಲ್ಲೂ ಇಬ್ಬರ ಆಟ ಹೀಗೇ ಮುಂದುವರೆಯಿತು. ಈ ಬಾರಿ, ಸ್ಯಾಪ್ಸಿರಿ ಅವರ ಆಟ ಕೊಂಚ ಪ್ರಬುದ್ಧವಾಗಿತ್ತು. ಸೆಟ್‌ನ ಆರಂಭದಲ್ಲಿ ಕೊಂಚ ಮುನ್ನಡೆ ಕಂಡುಕೊಂಡ ಅವರು, ಸಿಂಧು ಅವರನ್ನು ಮಣಿಸುವ ರೀತಿಯಲ್ಲೇ ಆಟ ಮುಂದುವರೆಸಿದರು. ಆದರೆ, ಸಿಂಧು ಅಷ್ಟು ಸುಲಭವಾಗಿ ಮಣಿಯುವ ಹಾಗಿರಲಿಲ್ಲ. ತೀವ್ರ ತೆರನಾದ ಹೋರಾಟ ನಡೆಸಿದ ಸಿಂಧು, ಸ್ಯಾಪ್ಸಿರಿ ಅವರನ್ನು ಅಂಕಗಳಿಕೆಯಲ್ಲಿ ಹಿಂದಿಕ್ಕುವ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿ, ಸಾಫಲ್ಯತೆ ಕಂಡುಕೊಂಡರು. ಆದರೆ, ಒಂದು ಹಂತದವರೆಗೂ ಹೋರಾಟ ನಡೆಸಿದ ಸ್ಯಾಪ್ಸಿರಿ, ಕೊಂಚ ಮಂದಗತಿಯ ಆಟ ಪ್ರದರ್ಶಿಸಿದರು. ಕೆಲ ತಪ್ಪುಗಳನ್ನೂ ಎಸಗಿದ ಅವರು, ಎದುರಾಳಿಗೆ ಸುಲಭವಾಗಿ ಅಂಕಗಳನ್ನು ದಯಪಾಲಿಸಿದರು. ಅತ್ತ, ಸಿಂಧು ಅವರ ಬಿರುಸಿನ ಆಟ ಹೀಗೇ ಮುಂದುವರೆದಿತ್ತು. ಸ್ಯಾಪ್ಸಿರಿ ಅವರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಅವರು, ಎರಡನೇ ಸೆಟ್ ಅನ್ನು 21-11ರ ಅಂತರದಲ್ಲಿ ಗೆದ್ದುಕೊಂಡರು.
ಶನಿವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ, ಸಿಂಧು ಅವರು ಸಿಂಗಪೂರ್‌ನ ಜುವಾಂಗ್ ಗು ಅವರನ್ನು ಎದುರಿಸಲಿದ್ದಾರೆ.